ಎಚ್.ಡಿ.ಕೋಟೆ: ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ವತಿಯಿಂದ ಅಂತರಸಂತೆ ಗ್ರಾಮ ಪಂಚಾಯತಿಗೆ ಐಎಎಫ಼್ 2025 ಬ್ಯಾಚ್ ಶಿಕ್ಷಣಾರ್ಥಿಗಳು ಅಧ್ಯಯನಕ್ಕಾಗಿ ಆಗಮಿಸಿ ಹಲವಾರು ಮಾಹಿತಿ ಪಡೆದರು.
ಅಂತರಸಂತೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಪಂಚಾಯ್ತಿ ವ್ಯವಸ್ಥೆ ಕಾರ್ಯವೈಖರಿ, ಕೃಷಿ ಇಲಾಖೆಯ ಕಾರ್ಯವೈಖರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪಾತ್ರಗಳು, ಶಿಕ್ಷಣ ಇಲಾಖೆಯ ಪ್ರಗತಿ, ಕಂದಾಯ ಇಲಾಖೆಯ ಕರ್ತವ್ಯ ನಿರ್ವಹಣೆಗಳು ಮತ್ತು ಅಭಿವೃದ್ಧಿ ಕೆಲಸಗಳು, ಯಾವ ರೀತಿ ನಡೆಯುತ್ತಿವೆ ಎಂಬುದರ ಕುರಿತಾಗಿ ಮಾಹಿತಿ ಪಡೆಯಲಾಯಿತು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುರೇಶ್ ಗ್ರಾ.ಪಂ ಕಾರ್ಯವಿಧಾನಗಳು, ಅಭಿವೃದ್ಧಿ ಕೆಲಸಗಳು, ಅನುದಾನ ಬಳಕೆ, ಮೂಲ ಸಮಸ್ಯೆಗಳು ಹಾಗೂ ಅದರ ನಿರ್ವಹಣೆ ಕುರಿತಾಗಿ ಮಾಹಿತಿ ನೀಡಿದರು.

ಕೃಷಿ ಚಟುವಟಿಕೆ ಮತ್ತು ರೈತರ ಆರ್ಥಿಕ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಗಿ ಇಲಾಖೆಯ ಅಧಿಕಾರಿಗಳು ಸರ್ಕಾರದ ಕೃಷಿ ಯೋಜನೆಗಳ ಸಮಗ್ರ ಅನುಷ್ಟಾನದ ಬಗ್ಗೆ ಆಡಳಿತ ಸಂಸ್ಥೆಯ ಮುಖ್ಯಸ್ಥೆ ಶ್ರೀವಳ್ಳಿ ಎ.ಜೆ ಕೇಳಲಾಗಿ ಇದಕ್ಕೆ ಪ್ರತಿಕ್ರಿಯಿಸಿದ ಜೀವಿಕ ಉಮೇಶ್ ಹಾಗೂ ಕಾಡುಮನೆ ಪ್ರಸನ್ನ ಮಾತಾನಾಡಿ, ಈ ಭಾಗ ಕೃಷಿಯಲ್ಲಿ ಅತ್ಯಂತ ಫಲವತ್ತಾದ ಭೂಮಿಯಾಗಿತ್ತು ಆದರೆ, ಕಳೆದ ಹೈದಿನೈದು ವರ್ಷದಿಂದ ಈಚೇಗೆ ಈ ಭಾಗದ ಭೂಮಿ ಫಲವತ್ತತೆ ಕಳೆದುಕೊಂಡು, ರಾಸಾಯನಿಕ ಯುಕ್ತವಾಗಿದೆ. 80% ಭೂಮಿಯನ್ನು ಕೇರಳದವರು ಶುಂಠಿ ಬೆಳೆಯಲು ಬಳಸಿಕೊಂಡು ಕೃಷಿ ಚಟುವಟಿಕೆಯನ್ನು ಸಂಪೂರ್ಣ ಹಾನಿ ಮಾಡಿದ್ದಾರೆ ಎಂದು ತಿಳಿಸಿದರು.
ಈ ಭಾಗದ ಜಮೀನಿಗೆ ಅತ್ಯಂತ ಬೇಡಿಕೆ ಇದ್ದು, ಇರುವ ಅಲ್ಪಸ್ವಲ್ಪ ಭೂಮಿಯನ್ನು ಈ ಭಾಗದ ರೈತರು ಮಾರಿಕೊಳ್ಳುತ್ತಿದ್ದಾರೆ. ಈ ಜಮೀನಲ್ಲಿ ನೂರಾರು ಸಂಖ್ಯೆಯಲ್ಲಿ ಹೋಮ್ ಸ್ಟೇ ಗಳು, ರೆಸಾರ್ಟ್ ಗಳು ತಲೆ ಎತ್ತಿವೆ. ಈ ರೆಸಾರ್ಟ್ ಮತ್ತು ಹೋಮ್ ಸ್ಟೇ ಗೆ ಜಮೀನು ಮಾರಿಕೊಂಡವರು ಇಂದು ಕೂಲಿ ಕೆಲಸ ಮಾಡುತ್ತಿದ್ದಾರೆ. ರೈತರು ಮಾರುಕಟ್ಟೆ ವ್ಯವಸ್ಥೆಗೆ ಬೇಸತ್ತು ವ್ಯವಸಾಯ ಚಟುವಟಿಕೆಯಿಂದ ಹಿಂದೆ ಸರಿದು ಮಾನವ ಕುಲಕ್ಕೆ ಮತ್ತು ಪಶು ಸಂಕುಲಕ್ಕೆ ಬೇಕಾದ ಆಹಾರ ಪದಾರ್ಥಗಳ ಕೊರತೆ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರು ತಮ್ಮ ಜಮೀನುಗಳನ್ನು ಮಾರುವುದನ್ನ ನಿಲ್ಲಿಸಬೇಕು.ವಾಣಿಜ್ಯ ಬೆಳೆಗಳಿಗೆ ಮಾರುಹೋಗದೆ ಆಹಾರ ಪದಾರ್ಥಗಳನ್ನು ಬೆಳೆಯಬೇಕು. ಸಾವಯವ ಹಾಗೂ ನೈಸರ್ಗಿಕ ಕೃಷಿಗೆ ಆದ್ಯತೆ ನೀಡಬೇಕು. ಕೃಷಿ ಇಲಾಖೆಯ ಯೋಜನೆಗಳು ರೈತರ ಪರವಾಗಿ ಜಾರಿಯಾಗಿ ಮಾರುಕಟ್ಟೆ ನೇರವಾಗಿ ರೈತರ ಕೈಲಿ ಇರಬೇಕು ಎಂದು ಸಲಹೆ ನೀಡಿದರು.

ನಂತರ ಅಂಗನವಾಡಿ ಸಮಸ್ಯೆಗಳು, ಶಿಕ್ಷಣ ಇಲಾಖೆಯ ಮೂಲಭೂತ ಸಮಸ್ಯೆ ಮತ್ತು ಮಕ್ಕಳು ಶಾಲೆಯಿಂದ ಹೊರಗಿರುವ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ ಮತ್ತು ನಿರ್ವಹಣೆ, ಗ್ರಂಥಾಲಯ ನಿರ್ವಹಣೆ, ವಿಕಲಚೇತನರ ಸಮಸ್ಯೆಗಳು, ಮಹಿಳಾ ಸಬಲೀಕರಣ, ಜೀತ ಮತ್ತು ಬಾಲಕಾರ್ಮಿಕ ಸಮಸ್ಯೆಗಳು ಮತ್ತು ಪರಿಹಾರದ ವಿಷಯವಾಗಿ ಸಮಗ್ರ ಮಾಹಿತಿಯನ್ನು ಪಡೆಯಲಾಯಿತು.
ಎಐಟಿ ಹಿರಿಯ ಅಧಿಕಾರಿ ಶ್ರೀವಳ್ಳಿ. ಗ್ರೇಡ್ ೨ ತಹಶಿಲ್ದಾರ್ ಶ್ರೀಧರ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುರೇಶ್, ಅಂತರಸಂತೆ ಉಪ ತಹಶಿಲ್ದಾರ್ ತನುರಾಜ್, ಸಿಡಿಪಿಒ ಇಲಾಖೆಯ ಸೂಪರ್ ವೈಸರ್ ರತ್ನಮ್ಮ, ವಿಎ ದ್ಯಾಮಪ್ಪ, ಪೂಜಾ, ಕೃಷಿ ಇಲಾಖೆ ಮನು, ಪಂಚಾಯತಿ ಸಿಬ್ಬಂದಿ ಕೇಶವ್, ಜಯಪ್ರಕಾಶ್, ಕುಮಾರ್, ಸುರೇಶ್ ಸೇರಿದಂತೆ ಸಂಘ, ಸಂಸ್ಥೆಗಳ ಪ್ರತಿನಿಧಿಗಳು, ಸದಸ್ಯರು ಇದ್ದರು.