ಹಾಸನ : ಬಸವಣ್ಣನವರಂತೆಯೆ ೧೨ ನೇ ಶತಮಾನದ ಮಹತ್ವ ವಚನಕಾರರಲ್ಲಿ ಮಡಿವಾಳ ಮಾಚಿದೇವ ಅವರು ಶ್ರೇಷ್ಠರಾದವರು, ಬಸವಣ್ಣನವರು ಕಾರಣಿ ಪುರುಷರಾದರೆ, ಮಾಚಿದೇವರು ಕಾರ್ಯ ಪುರುಷರು ಎಂದು ನಿವೃತ್ತ ಉಪನ್ಯಾಸಕರಾದ ಗೊರೂರು ಶಿವೇಶ್ ಹೇಳಿದ್ದಾರೆ.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಾಸನಂಬ ಕಲಾಕ್ಷೇತ್ರದಲ್ಲಿ ಇಂದು ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು ವಚನಗಳನ್ನು ಸಂರಕ್ಷಿಸುವಲ್ಲಿ ಮಾಚಿದೇವರ ಕೊಡುಗೆಯು ಅಪಾರವಾದದ್ದು, ಕಾಯಕ ಯೋಗಿಯಾಗಿ, ವಚನ ಸಂರಕ್ಷಕರಾಗಿ, ಸೈನಿಕರಾಗಿ ಇವರನ್ನು ಗುರುತಿಸಬಹುದು ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಪಿ ಕೃಷ್ಣೇಗೌಡ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಡಿವಾಳ ಮಾಚಿದೇವರ ಪ್ರಮುಖ ವೃತ್ತಿ ಶಿವಶರಣರ ಸಮಿತಿಯಲ್ಲಿದ್ದುಕೊಂಡು ಅವರ ವಸ್ತçಗಳನ್ನು ಮಡಿವಂತಿಕೆ ಮಾಡುವುದಾಗಿತ್ತು, ವೃತ್ತಿ ಕಾರ್ಯದ ಬಗೆಗೆ ಇವರು ಬಹಳ ಗೌರವವನ್ನು ಹೊಂದಿದ್ದರು. ಬಸವಣ್ಣನವರು ಕೂಡ ಕೆಲವೊಮ್ಮೆ ಇವರಿಂದ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುತ್ತಿದ್ದರು ಹಾಗಾಗಿ ಇವರು ವಿಚಾರವಂತರು ಜೊತೆಗೆ ಎಲ್ಲಾ ಪ್ರಾಣಿ ಪಕ್ಷಿಗಳ ಮೇಲೆಯೂ ವಚನಗಳನ್ನು ಬರೆದಿದ್ದಾರೆ, ಅಕ್ಕಮಹಾದೇವಿಯವರು ಕೂಡ ತಂದೆಯ ಸ್ಥಾನವನ್ನು ಕೊಟ್ಟು ಮಾಚಿದೇವರನ್ನು ಗೌರವಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿಗಳಾದ ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಸರ್ಕಾರದಿಂದ ಅನೇಕ ಜಯಂತಿಗಳನ್ನು ಆಚರಿಸಲಾಗುತ್ತದೆ ಅದರಲ್ಲಿ ಮಡಿವಾಳ ಮಾಚಿದೇವರ ಜಯಂತಿಯು ಕೂಡ ಒಂದಾಗಿದೆ. ಇವರ ಆದರ್ಶಗಳಿಂದಾಗಿ ಸರ್ಕಾರ ಇಂತಹ ಮಹಾನ್ ವ್ಯಕ್ತಿಗಳ ಜನ್ಮದಿನವನ್ನು ಆಚರಿಸುತ್ತಿದೆ. ಎಲ್ಲಾ ಜಯಂತಿಗಳಿಗೂ ಎಲ್ಲ ಸಮುದಾಯದವರು ಭಾಗವಹಿಸಬೇಕು ಏಕೆಂದರೆ ಇಂತಹ ಮಹಾನ್ ವ್ಯಕ್ತಿಗಳು ಸಮಾಜಕ್ಕೆ ಅನೇಕ ಉತ್ತಮವಾದ ಮಾರ್ಗದರ್ಶನಗಳನ್ನು ನೀಡಿದ್ದಾರೆ ಹಾಗಾಗಿ ಎಲ್ಲ ಜನಾಂಗದವರು ಒಟ್ಟಾಗಿ ಸೇರಿ ಆಚರಣೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಚ್.ಪಿ ತಾರಾನಾಥ್, ಹಾಸನ ನೌಕರ ಸಂಘದ ಗೌರವಾಧ್ಯಕ್ಷರಾದ ಇ ಕೃಷ್ಣೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಚ್.ಎಲ್ ಮಲ್ಲೇಶಗೌಡ ಹಾಗೂ ಸಮುದಾಯದ ಇತರ ಮುಖಂಡರು ಉಪಸ್ಥಿತರಿದ್ದರು.
-ಮಾಲಾ ಹಾಸನ