ತುಮಕೂರು-ಮತದಾರರ-ಪಟ್ಟಿ-ತಯಾರಿಕೆ-ಸಂದರ್ಭದಲ್ಲಿ- ಆಯೋಗದ-ಮಾರ್ಗಸೂಚಿ-ಪಾಲನೆಗೆ-ಸೂಚನೆ

ತುಮಕೂರು: ಮತದಾರರ ಪಟ್ಟಿ ತಯಾರಿಕೆ ಸಂದರ್ಭದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಉಪ ವಿಭಾಗಾಧಿಕಾರಿ ಗೌರವ ಕುಮಾರ್ ಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.


ತುಮಕೂರು ಉಪವಿಭಾಗ ಮಟ್ಟದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿ ತಯಾರಿಕೆ ಸಂಬಂಧ ಮತದಾರರ ನೋಂದಣಾಧಿಕಾರಿಗಳ ಕರಡು ಕೈಪಿಡಿ ಕುರಿತು ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದ ಅಭಿಪ್ರಾಯಗಳನ್ನು ಪಡೆಯುವ ಸಂಬಂಧ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತುಮಕೂರು ಉಪವಿಭಾಗ ವ್ಯಾಪ್ತಿಗೊಳಪಡುವ ಪ್ರತಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮತದಾರರ ಪಟ್ಟಿಯಿಂದ ಅನರ್ಹರ ಹೆಸರನ್ನು ಕೈಬಿಡಬೇಕು.

ಮತದಾರರು ಎರಡು ಕಡೆ ಹೆಸರನ್ನು ನೋಂದಾಯಿಸಿಕೊಂಡಿದ್ದರೆ ಒಂದು ಕಡೆ ಅವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಬೇಕು. ಮತದಾರರು ಮೃತರಾಗಿದ್ದರೆ, ವರ್ಗಾವಣೆಯಾಗಿದ್ದರೆ ಅಂತಹವರ ಹೆಸರನ್ನು ಕೈಬಿಟ್ಟು ನಿಖರವಾದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕೆಂದು ನಿರ್ದೇಶನ ನೀಡಿದರು.


ಮತದಾರರ ಪಟ್ಟಿಗೆ ಹೆಸರನ್ನು ಹೊಸದಾಗಿ ಸೇರ್ಪಡೆ, ಕೈಬಿಡುವ, ತಿದ್ದುಪಡಿ ಮತ್ತಿತರ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುತ್ತವೆ ಹಾಗೂ 18 ವರ್ಷ ತುಂಬಿದ ಅರ್ಹ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.


ಸಭೆಯಲ್ಲಿ ನೋಂದಾಯಿತ ಹಾಗೂ ಮಾನ್ಯತೆ ಪಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಲಹೆಗಳನ್ನು ನೀಡಿದರು. ತಹಶೀಲ್ದಾರ್ ರಾಜೇಶ್ವರಿ, ಚುನಾವಣಾ ಶಿರಸ್ತೆದಾರ್ ಆರ್.ಜಿ ನಾಗಭೂಷಣ್ ಹಾಗೂ ಗುರುಪ್ರಸಾದ್, ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?