ಮೂಡಿಗೆರೆ:ಆನೆಗಳು ವಾಸಮಾಡುವ ಕಾಡನ್ನು ನಾವು ನಾಶಗೊಳಿಸುತ್ತಿದ್ದೇವೆ.ಅವುಗಳು ಸೇವಿಸುವ ಆಹಾರವನ್ನು ನಾವು ಕಬಳಿಸುತ್ತಿದ್ದೇವೆ.ಹೀಗಾಗಿ ಕಾಡಾನೆಗಳು ನಾಡಿನತ್ತ ಸಂಚರಿಸುತ್ತಿವೆ ಎಂದು ಒಕ್ಕಲಿಗರ ಸಂಘದ ಜಿಲ್ಲಾ ಕಾರ್ಯದರ್ಶಿ ಮಾಡ್ಲ ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪ್ರೇರಣಾ ಜೆ ಸಿ ಐ ಸಪ್ತಾಹದ ಅಂಗವಾಗಿ ಗುರುವಾರ ಪಟ್ಟಣದ ಜೆ ಸಿ ಭವನದಲ್ಲಿ ನಡೆದ ವಿಧ್ಯಾರ್ಥಿಗಳಿಗೆ ರಸಪ್ರಶ್ನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ,ಕಾಡಾನೆಗಳು ತನ್ನ ಪೂರ್ವಿಕರು ತಿರುಗಾಡಿದ್ದ ಸ್ಥಳವನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿವೆ. ಅವು ಆಹಾರವನ್ನು ಹುಡುಕುತ್ತಾ ಅರಣ್ಯದಲ್ಲಿ ತನ್ನ ಪೂರ್ವಿಕರು ತಿರುಗಾಡುತ್ತಿದ್ದ ಸ್ಥಳಗಳಲ್ಲಿ ಸಂಚರಿಸುತ್ತವೆ.
ಮನುಷ್ಯರು ಹಣದಾಸೆಗಾಗಿ ಅರಣ್ಯವನ್ನು ನಾಶ ಮಾಡುತ್ತಿರುವ ಕಾರಣ ಕಾಡಾನೆಗಳು ದಿಕ್ಕು ತಪ್ಪಿ ಜನವಸತಿ ಪ್ರದೇಶಕ್ಕೆ ಆಗಾಗ ಲಗ್ಗೆಯಿಡುತ್ತಿವೆ.ಅರಣ್ಯದಲ್ಲಿ ವಿವಿಧ ರೀತಿಯ ಹಣ್ಣು ಸೊಪ್ಪುಗಳನ್ನು ತಿಂದು ಬದುಕುವ ಕಾಡಾನೆಗಳ ಆಹಾರವನ್ನು ಮನುಷ್ಯರು ಕಿತ್ತು ತಿಂದು ತೇಗುತ್ತಿದ್ದಾರೆ.ಹಣದ ಅತಿಯಾಸೆಯಿಂದಾಗಿ ಅರಣ್ಯದಲ್ಲಿನ ವಿವಿಧ ರೀತಿಯ ಮರಗಳನ್ನು ಕಡಿದು ಮಾರಾಟ ಮಾಡಿ ಪ್ರಕೃತಿಯ ಮೇಲೆ ಅತ್ಯಾಚಾರವೆಸಗುತ್ತಿದ್ದಾರೆ.ಕಾಡು ನಾಶಮಾಡಿ ಕಾಡನ್ನು ನಾಡಾಗಿ ಪರಿವರ್ತಿಸುತ್ತಿದ್ದಾರೆ.
ಪ್ರಕೃತಿ ವಿಕೋಪದಿಂದ ಜಮೀನು ಮನೆ ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿ ನಾಶಗೊಂಡಾಗ ಬುದ್ದಿಜೀವಿಗಳoತೆ ಚರ್ಚೆಗಿಳಿಯುವ ಸಾರ್ವಜನಿಕರು ಕಾಡಾನೆಮತ್ತಿತರೆ ಕಾಡುಪ್ರಾಣಿಗಳ ಸಂರಕ್ಷಣೆಯ ಬಗ್ಗೆ ಮಾತನಾಡುವುದಿಲ್ಲ. ಅರಣ್ಯ ಉಳಿದರೆ ಮಾತ್ರ ಮುಂದಿನ ಪೀಳಿಗೆಗೆ ಬದುಕಿದೆ. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಟಾಪರ್ಸ್ ಗಳಾದ ಎಸ್.ನಿಶ್ಚಿತ, ಉಜ್ವಲ್, ತಸ್ಮಿಯಾ, ವಿ.ವಿಧೇಯ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿವಿಧ ಶಾಲೆ ಮತ್ತು ಕಾಲೇಜಿನ ವಿಧ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಫರ್ಧೆ ನಡೆಸಲಾಯಿತು.
ಜೆ ಸಿ ಐ ಅಧ್ಯಕ್ಷ ಸುಪ್ರೀತ್ ಕಾರ್ಬೈಲ್, ಉದ್ಯಮಿ ಮಂಚೇಗೌಡ,ತಾ.ಪo.ಮಾಜಿ ಅಧ್ಯಕ್ಷ ಸುಬ್ರಾಯಗೌಡ, ಶಿಕ್ಷಕಿ ಅನುಸೂಯ, ಕವಿತಾಸಂತೋಷ್, ಪಿ.ಕೆ.ಹಮೀದ್, ಸುದೀಫ್ ತ್ರಿಪುರ ಮತ್ತಿತರರಿದ್ದರು.
………………………….. ವಿಜಯಕುಮಾರ್, ಮೂಡಿಗೆರೆ…