ಸಕಲೇಶಪುರ-ಮಲೆನಾಡು ಭಾಗಗಳಲ್ಲಿ ಬತ್ತದ ಗದ್ದೆಗಳ ಬೀಳು ಬಿಡಲು ಕೃಷಿ ಕೂಲಿ ಕಾರ್ಮಿಕರ ಕೊರತೆಯೇ ಪ್ರಮುಖವಾಗಿದೆ.ನಾಟಿ ಮಾಡುವುದರಿಂದ ಹಿಡಿದು ಕಳೆ ಕಿತ್ತು ಫಸಲನ್ನು ಒಕ್ಕಣೆ ಮಾಡುವವರೆಗೂ ಕೂಲಿ ಕಾರ್ಮಿಕರ ಕೊರತೆ ಕಾಡುವುದರಿಂದ ರೈತರು ಬತ್ತದ ಬೆಳೆ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹಾಸನ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ರಮೇಶ್ ಕುಮಾರ್ ಹೇಳಿದರು.
ತಾಲೂಕಿನ ಹಾನುಬಾಳು ಹೋಬಳಿಯ ದಬ್ಬೆಗದ್ದೆ ಗ್ರಾಮದ ಕಾಂತರಾಜು ಎಂಬುವವರ ಜಮೀನಿನಲ್ಲಿ ನಡೆದ ಬತ್ತದ ನಾಟಿ ಯಂತ್ರದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾವಹಿಸಿ ಸ್ವತಃ ನಾಟಿಯನ್ನು ಮಾಡಿ ಮಾತನಾಡಿದರು.
ಸರಕಾರದ ಸಹಾಯಧನದ ಅಡಿಯಲ್ಲಿ ಕೃಷಿ ಇಲಾಖೆಯಿಂದ ನೀಡಲಾಗುವ ಭತ್ತ ನಾಟಿ ಯಂತ್ರ ವನ್ನು ರೈತರು ಖರೀದಿಸುವುದರಿಂದ ಕೂಲಿ ಕಾರ್ಮಿಕರ ಮೇಲಿನ ಅವಲಂಬನೆ ಬಹುತೇಕ ಕಡಿಮೆಯಾಗುತ್ತದೆ.ಈ ಯಂತ್ರದ ಸಹಾಯದಿಂದ ನಾಟಿ ಮಾಡುವುದರಿಂದ ಸಾಲಿನಿಂದ ಸಾಲು ಮತ್ತು ಗುಣಿಯಿಂದ ಗುಣಿಗೆ ನಿಖರ ಅಂತರ ದೊರೆಯುತ್ತದೆ.ಇದರಿಂದ ಭತ್ತದ ಬೆಳೆಯ ಸಮಗ್ರ ಕೃಷಿ ನಿರ್ವಹಣೆಗೆ ಹಾಗು ಉತ್ತಮ ಇಳುವರಿಗೆ ಸಹಾಯವಾಗಲಿದೆ ಎಂದರು.
ಈ ನಾಟಿ ಯಂತ್ರ ಖರೀದಿಗೆ ಸಾಮಾನ್ಯ ವರ್ಗ,ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೈತರಿಗೆ ಪ್ರತ್ಯೇಕವಾದ ಸಹಾಯದನ ಲಭ್ಯವಿದ್ದು,ಕೃಷಿ ಇಲಾಖೆಯಿಂದ ಕೊಳ್ಳುವಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.ಹಾಗೆಯೇ,ರೈತರು ಕೃಷಿ ಯಾಂತ್ರೀಕರಣ ಯೋಜನೆಯಡಿ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಸರ್ಕಾರದ ಸಹಾಯದನದಡಿಯಲ್ಲಿ ಪಡೆದುಕೊಂಡು ಪ್ರಗತಿ ಹೊಂದಬೇಕು ಎಂದು ತಿಳಿಸಿದರು.
ಉಪ ಕೃಷಿ ನಿರ್ದೇಶಕಿ ಕೋಕಿಲ ಮಾತನಾಡಿ ಆತ್ಮ ಯೋಜನೆಯ ಅಡಿಯಲ್ಲಿ ರೈತರಿಗೆ ಯಂತ್ರೋಪಕರಣಗಳ ತಾಂತ್ರಿಕತೆಯ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ನೀಡಲಾಗುತ್ತಿದೆ.ಇದರ ಸದುಪಯೋಗವನ್ನು ಪಡೆದುಕೊಂಡು ರೈತರು ಕೃಷಿಯಲ್ಲಿ ಹೊಸ ತಾಂತ್ರಿಕ ಪದ್ದತಿಗಳನ್ನು ಅಳವಡಿಸಿಕೊಂಡು ಮುಂದುವರೆಯಬೇಕು ಎಂದು ಸಲಹೆ ನೀಡಿದರು.
ಆತ್ಮ ಯೋಜನೆಯ ಜಿಲ್ಲಾ ಯೋಜನಾ ನಿರ್ದೇಶಕಿ ಮಂಜುಳಾ ಮಾತನಾಡಿದರು.
ರೈತ ಫಲಾನುಭವಿ ಕಾಂತರಾಜು ಮಾತನಾಡಿ,ಕಳೆದ ಆರು ವರ್ಷಗಳಿಂದ ಬತ್ತದ ನಾಟಿ ಯಂತ್ರವನ್ನು ಬಳಸಿ ನನ್ನ ಗದ್ದೆಗೆ ಪೈರನ್ನು ನಾಟಿ ಮಾಡುವುದರ ಜೊತೆಗೆ ಅಕ್ಕಪಕ್ಕದ ರೈತರಿಗೂ ಬಾಡಿಗೆ ಆಧಾರದಲ್ಲಿ ಯಂತ್ರವನ್ನು ನೀಡಿ ಆರ್ಥಿಕವಾಗಿಯೂ ಗಟ್ಟಿಯಾಗಿದ್ದೇನೆ.ಜೊತೆಗೆ ಯಂತ್ರದ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ನೀಡುವ ಕೆಲಸವನ್ನು ನಿರ್ವಹಿಸುತ್ತಿದ್ದೇನೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್ ಕುಮಾರ್ ಯು ಎಂ ಎಲ್ಲರನ್ನೂ ಮಾತನಾಡಿ, 2024-25ನೇ ಸಾಲಿನ ಮುಂಗಾರು ಮಳೆ 1676 ಮಿ ಮಿ ವಾಡಿಕೆಗೆ,ಇಂದಿಗೆ 2947 ಮಿ ಮೀ ಮಳೆ ಯಾಗಿದ್ದು,1.75 ರಷ್ಟರ ಅನುಪಾತದ ಮಳೆ ಹೆಚ್ಚಳವಾಗಿದೆ ಎಂದು ತಿಳಿಸುತ್ತಾ,ಈ ವರ್ಷ ಸುಮಾರು 110 ಹೆಕ್ಟೇರ್ ವಿಸ್ತೀರ್ಣದಲ್ಲಿ ಸಕಲೇಶಪುರ ತಾಲೂಕಿನಾದ್ಯಂತ ಭತ್ತ ನಾಟಿಯಂತ್ರದ ಮೂಲಕ ನಾಟಿ ಕೈಗೊಳ್ಳಲಾಗುತ್ತಿದೆ ಎಂಬ ಮಾಹಿತಿ ನೀಡಿದರು.ಜೊತೆಗೆ ರೈತರಿಗೆ ಭತ್ತದ ಸಾಮಾನ್ಯ ನಾಟಿ ಪದ್ದತಿ ಮತ್ತು ಯಾಂತ್ರೀಕೃತ ನಾಟಿ ಪದ್ಧತಿಯ ವ್ಯತ್ಯಾಸಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತರೊಂದಿಗೆ ಸಹಾಯಕ ಕೃಷಿ ನಿರ್ದೇಶಕರು ಹಾಗೂ ವಿಷಯ ತಜ್ಞರಾದ ಸವಿತಾ, ಕೃಷಿ ಅಧಿಕಾರಿಗಳಾದ ಚೆಲುವರಂಗಪ್ಪ,ಕೇಶವಮೂರ್ತಿ,ತಾಂತ್ರಿಕ ಅಧಿಕಾರಿ ಶ್ರವಣ್,ಸುಷ್ಮಾ,ಬಸವರಾಜ್ ಮತ್ತು ಇತರರು ಉಪಸ್ಥಿತರಿದ್ದರು.
————————–-ಎಸ್ ಕೆ ರಕ್ಷಿತ್