ಮೂಡಿಗೆರೆ;ಆನೆ ಕಾರಿಡಾರ್ ವ್ಯಾಪ್ತಿಗೆ ಸೇರುವ ಭೈರಾಪುರ ವ್ಯಾಪ್ತಿಯ ಎತ್ತಿನಭುಜ,ಬಾಳೂರು ಮೀಸಲು ಅರಣ್ಯದ ಹಾದಿಯಲ್ಲಿ ಮೋಟಾರು ವಾಹನಗಳ ಅನಧಿಕೃತ ರೇಸ್ ನೆಡೆದಿದ್ದು, ಈಗಾಗಲೇ ಇಲ್ಲಿ ಆನೆ ಮತ್ತು ಮಾನವ ಸಂಘರ್ಷ ಮಿತಿಮೀರಿದೆ,ಇಂತಹ ಸೂಕ್ಷ್ಮ ಕಾಡಿನ ಪರಿಸರದಲ್ಲಿ ರೇಸ್ ಆಯೋಜನೆ ಮಾಡಿದವರ ವಿರುದ್ಧ ಅರಣ್ಯ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿತ್ತು ಆದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೂಡ ಈ ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿದ್ದರು.ಆದರೂ ಸಹ ಕಠಿಣ ಕ್ರಮಕ್ಕೆ ಮೀನಮೇಷ ಎಣಿಸಲಾಗುತ್ತಿದೆ ಎಂದು ಮೂಡಿಗೆರೆಯ ಪರಿಸರ ಮತ್ತು ವನ್ಯಜೀವಿ ಕಾರ್ಯಕರ್ತರಾದ ವಿನೋದ್ ಕಣಚೂರು ಆಕ್ರೋಶ ವ್ಯಕ್ತಪಡಿಸಿದರು.
ಸೂಕ್ಷ್ಮ ವಲಯದಲ್ಲಿ ರೇಸ್ ನಡೆಸಿದ ಪುಂಡರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾ ರಿಗಳಿಗೆ ಮನವಿ ಪತ್ರವನ್ನು ನೀಡಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.ಬೆಂಗಳೂರು,ಸಕಲೇಶಪುರ,ಹಾಸನ ,ತೀರ್ಥಹಳ್ಳಿ ಭಾಗಗಳಿಂದ ಪುಂಡರು ವಾಹನಗಳೊಂದಿಗೆ ಬಂದು ಇಲ್ಲಿನ ಪರಿಸರವನ್ನು ಹಾಳು ಮಾಡಿದ್ದಾರೆ.
ಹಾಗೆ ಬಂದವರು ಪ್ರಭಾವಿಗಳ ಮಕ್ಕಳು,ಸಂಬಂದಿಕರು ಎನ್ನುವ ಅನುಮಾನಗಳಿವೆ.ಅವರನ್ನು ಕಾನೂನಿನ ಕುಣಿಕೆಯಿಂದ ಪಾರುಮಾಡಲು ಪ್ರಭಾವಿಗಳು ಮುಂದಾಗಿದ್ದಾರೆ.ಅರಣ್ಯ ಇಲಾಖೆ ಪ್ರಕರಣವನ್ನು ನಿಭಾಯಿಸುತ್ತಿರುವ ರೀತಿಯನ್ನು ನೋಡಿದರೆ ಈ ಮಾತಿಗೆ ಪುಷ್ಟಿ ದೊರೆಯುತ್ತಿದೆ.
ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುವವರೆಗೆ ನಾವು ಕೈ ಕಟ್ಟಿ ಕೂರುವುದಿಲ್ಲ. ಮುಂದಾಗುವ ಬೆಳವಣಿಗೆಗಳ ನೋಡಿಕೊಂಡು ನಾವು ಹೋರಾಟದ ಹೆಜ್ಜೆಗಳನ್ನು ಇಡಲಿದ್ದೇವೆ ಎಂದು ವಿನೋದ್ ಕಣಚೂರು ಹೇಳಿದರು.
ಈ ಸಂದರ್ಭದಲ್ಲಿ ಮೂಡಿಗೆರೆಯ ಪರಿಸರವಾದಿ ಲೇಖಕ ಕಾರ್ತಿಕ್ ಆದಿತ್ಯ ಬೆಳಗೊಡ್,ವೈಲ್ಡ್ ಕೇರ್ ಸಂಸ್ಥೆಯ ಮುಖ್ಯಸ್ಥ ಮಧು ಮುಕ್ತಿಹಳ್ಳಿ,ವನ್ಯಜೀವಿ ಪರಿಪಾಲಕ ವೀರೇಶ್ ಜಿ,ಪರಿಸರ ಕಾರ್ಯಕರ್ತರಾದ ಪ್ರದೀಪ್,ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
————————–ಸಂತೋಷ್