ಕೆ.ಆರ್.ಪೇಟೆ-ಉತ್ತಮ ಆಹಾರ ಸೇವನೆಯಿಂದ ಗರ್ಭಿಣಿ ಮತ್ತು ಮಗು ಇಬ್ಬರೂ ಆರೋಗ್ಯವಂತರಾಗಿರಲು ಸಾಧ್ಯ- ಶಿಶು ಅಭಿವೃದ್ದಿ ಯೋಜನಾಧಿಕಾರಿ ಅರುಣ್ ಕುಮಾರ್

ಕೆ.ಆರ್.ಪೇಟೆ-ಉತ್ತಮ ಆಹಾರ ಸೇವನೆಯಿಂದ ಗರ್ಭಿಣಿ ಮತ್ತು ಮಗು ಇಬ್ಬರೂ ಆರೋಗ್ಯವಂತರಾಗಿರಲು ಸಾಧ್ಯವಾಗಲಿದೆ.ಉತ್ತಮ ಆರೋಗ್ಯವಂತ ಗರ್ಭಿಣಿ ಹಾಗೂ ಮಕ್ಕಳು ದೇಶದ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವಹಿಸುತ್ತಾರೆ.ಗರ್ಭಿಣಿ,ಬಾಣಂತಿಯರು ಹಾಗೂ ಮಕ್ಕಳಿಗೆ ಪೌಷ್ಟಿಕತೆಯ ಕೊರತೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪೋಷಣ್‌ ಮಾಸಾಚರಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ದಿ ಯೋಜನಾಧಿಕಾರಿ ಅರುಣ್ ಕುಮಾರ್ ಹೇಳಿದರು.

ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಮಾರೇನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಚಾರಣೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಆರು ವರ್ಷದ ಒಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡುವ ಕಾರ್ಯಕ್ರಮ ಇದೆ.ಜೊತೆಗೆ ತಾಯಂದರಿಗೆ ಪೌಷ್ಟಿಕ ಆಹಾರದ ಸೇವನೆಯ ಬಗೆ,ಅದರ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವ ಕಾರ್ಯಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ವೃತ್ತ ಮೇಲ್ವಿಚಾರಕಿ ಪದ್ಮರವರು ಮಾತನಾಡಿ ನಮ್ಮ ಸುತ್ತ ಮುತ್ತ ಸಿಗುವ ನಾನಾ ಬಗೆಯ ಸೊಪ್ಪು ತರಕಾರಿ ಹಣ್ಣು ಮತ್ತು ಮನೆಯಲ್ಲಿ ತಯಾರಿಸುವಂತ ಪೌಷ್ಟಿಕ ಆಹಾರಗಳನ್ನು ತಯಾರಿಸಿ ಗರ್ಭಿಣಿಯರಿಗೆ ನೀಡಬೇಕೆಂದು ತಿಳಿಸಿದರು.

ವೃತ್ತ ಮೇಲ್ವಿಚಾರಕಿ ಶಾಂತವ್ವ.ಎಸ್.ಹಾವಣ್ಣನವರ್ ಮಾತನಾಡಿ ಗರ್ಭಿಣಿ ಮಹಿಳೆಯರಿಗೆ ಮುಖ್ಯವಾಗಿ
ಚಪಾತಿ, ರೊಟ್ಟಿ, ಬೆಲ್ಲ, ರಾಗಿ, ಭತ್ತ ನವಣೆ, ಸಜ್ಜೆ, ದ್ವಿದಳ ದಾನ್ಯಗಳು,ಅವರೆ ತೊಗರಿ ಅಲಸಂಧೆ ಕಾಳುಗಳು ಮಕ್ಕಳ ಬೆಳವಣಿಗೆಗೆ ಉತ್ತಮ ಪೌಷ್ಟಿಕಾಂಶವಿರುವ ಆಹಾರವಾಗಿದ್ದು ಹಸಿರು ತರಕಾರಿ ಹಣ್ಣು ಮತ್ತು ಮಾಂಸಹಾರಿ ಪದಾರ್ಥಗಳನ್ನು ಸೇವಿಸುವುದರಿಂದ ಅನಾರೋಗ್ಯ ಬರುವುದಿಲ್ಲ.ಗರ್ಬಿಣಿ ಬಾಣಂತಿಯರು,ಹಸಿ ಪದಾರ್ಥಗಳನ್ನು ಸೇವನೆ ಮಾಡಬೇಕು.ಹೆಚ್ಚಾಗಿ ಹಸಿ ತರಕಾರಿಗಳನ್ನು ಬಳಸಬೇಕೆಂದು ತಿಳಿಸಿದರು.

ಆರೋಗ್ಯ ಇಲಾಖೆಯ ಮಾರೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಡಾ. ಅನುಷಾ ರವರು ಮಕ್ಕಳುಗಳ ಚುಚ್ಚು ಮದ್ದು ಮತ್ತು ಆರೋಗ್ಯದ ಬಗ್ಗೆ ವಿವರವಾಗಿ ತಿಳಿಸಿದರು.

ಎಲ್ಲಾ ಬಗೆಬಗೆಯ ಆಹಾರ ಪದಾರ್ಥಗಳನ್ನು ಪ್ರದರ್ಶನಕ್ಕಿಟ್ಟು ಅವುಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಇದೇ ಸಂದರ್ಭದಲ್ಲಿ ಎಸಿಡಿಪಿಓ ಪದ್ಮಾ, ತಾಲ್ಲೂಕು ಅಂಗನವಾಡಿ ಕಾರ್ಯಕರ್ತಯರ ಸಂಘದ ಅಧ್ಯಕ್ಷೆ ಧನಲಕ್ಷ್ಮಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ಯಾರಹಳ್ಳಿ ಗೋವಿಂದರಾಜು ಸೇರಿದಂತೆ ಸಂತೇಬಾಚಹಳ್ಳಿ ಹೋಬಳಿಯ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

——————–ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?