ಕೆ.ಆರ್.ಪೇಟೆ,ಮೇ.05: ಪೋಷಕರೊಂದಿಗೆ ಪ್ರವಾಸಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದು 12ವರ್ಷದ ಹೆಣ್ಣು ಮಗುವೊಂದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ, ಪುರ, ಸಂಗಾಪುರ ಬಳಿ ಇರುವ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ನಡೆದಿದೆ.
ಕೆ.ಆರ್.ಪೇಟೆ ಪಟ್ಟಣದ ಪೊಲೀಸ್ ಠಾಣೆಯ ಪೋಲೀಸ್ ಪೇದೆ ಧರ್ಮೇಂದ್ರ ಅವರ ಪುತ್ರಿ ಮೋನಿಷಾ(12) ಮೃತಪಟ್ಟ ದುರ್ದೈವಿ ಬಾಲಕಿಯಾಗಿದ್ದಾಳೆ.
ತಮ್ಮ ಪೋಷಕರೊಂದಿಗೆ ಸೋಮವಾರ ಮಧ್ಯಾಹ್ನ ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ, ಪುರ, ಸಂಗಾಪುರ ಬಳಿ ಇರುವ ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ಸಂಗಮ ಕ್ಷೇತ್ರದಲ್ಲಿಲ್ಲಿರುವ ಬಾಲ ಮಲೆ ಮಹದೇಶ್ವರ ದೇವಾಲಯ, ಸಂಗಮೇಶ್ವರ ದೇವಾಲಯವನ್ನು ವೀಕ್ಷಣೆ ಮಾಡಿಕೊಂಡು ಹಿನ್ನೇರಿನಲ್ಲಿ ಕೈಕಾಲು ತೊಳೆಯಲು ಹೋಗಿದ್ದ ಬಾಲಕಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.

ಬಾಲಕಿಯನ್ನು ಪೋಷಕರು ರಕ್ಷಿಸಲು ಪ್ರಯತ್ನಿಸಿದರೂ ಸಹ ಅಷ್ಟರೊಳಗೆ ಬಾಲಕಿ ಆಳವಾದ ನೀರಿನಲ್ಲಿ ಮುಳುಗಿ ಮೃತ ಹೊಂದಿದ್ದಾಳೆ ಎಂದು ತಿಳಿದು ಬಂದಿದೆ.
ಅನಂತರ ಕೆ.ಆರ್.ಪೇಟೆ ಗ್ರಾಮಾತರ ಪೊಲೀಸರು ಸತತ ಎರಡು ಗಂಟೆಗಳ ಕಾಲ ಅಗ್ನಿಶಾಮಕದಳ ಶೋಧ ಕಾರ್ಯದಿಂದ ಮೃತ ದೇಹವನ್ನು ನೀರಿನಿಂದ ಹೊರ ತೆಗೆದು ಪೋಷಕರಿಗೆ ಒಪ್ಪಿಸಿದ್ದಾರೆ. ಘಟನಾ ಸ್ಥಳಲದಲಿ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆ ಕುರಿತು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಶ್ರೀನಿವಾಸ್ ಆರ್.