ಕೆ.ಆರ್.ಪೇಟೆ-ಜನರ ಕೆಲಸ ಮಾಡುವುದಕ್ಕೆ ನಮ್ಮನ್ನು ನೇಮಕ ಮಾಡಿ ಕೊಂಡಿರುವುದು ನಿಗಧಿತ ಅವಧಿಯೊಳಗೆ ಜನರ ಕೆಲಸ ಆಗಬೇಕು ಅದನ್ನು ಹೊರತಾಗಿ ಜನರ ರಕ್ತ ಹೀರಲು ಮುಂದಾದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್.ಕೆ.ಆರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಘಟನೆ ಕೆ.ಆರ್.ಪೇಟೆ ತಹಶೀಲ್ದಾರ್ ಕಚೇರಿಯಲ್ಲಿ ನಡೆಯಿತು.
ಅವರು ಕೆ.ಆರ್.ಪೇಟೆ ತಾಲೂಕು ತಹಶೀಲ್ದಾರ್ ಕಚೇರಿಗೆ ನಿಗಧಿಯಂತೆ ಬಂದು ಜನರ ಸಮಸ್ಯೆ ಆಲಿಸುತ್ತಿದ್ದಾಗ,ಜನರು ಆರ್.ಆರ್.ಟಿ ಶಿರಸ್ತೆದಾರ್ ರವಿ ಅವರ ವಿರುದ್ದ ದೂರು ಹೇಳಿದರು.ಆಗ ರವಿ ಅವರು ಜನರ ಮೇಲೆಯೆ ಗಲಾಟೆ ಮಾಡಿ ನನ್ನ ವಿರುದ್ಧ ದೂರು ಹೇಳಬೇಡಿ ಎಂದಾಗ ತಕ್ಷಣ ಜನರ ಪರವಾಗಿ ಎದ್ದು ನಿಂತ ಉಪವಿಭಾಗಾಧಿಕಾರಿಗಳು ನೀವು ನಿಗಧಿತ ಅವಧಿಯಲ್ಲಿ ಜನರ ಕೆಲಸ ಮಾಡಿಕೊಟ್ಟರೆ ಅವರು ಯಾಕೆ ನನ್ನ ಬಳಿ ಬರುತ್ತಾರೆ? ನೀವುಗಳು ಜನರ ರಕ್ತ ಹೀರುವ ಕೆಲಸ ಮಾಡುತ್ತಿರುವುದರಿಂದ ಜನರು ಇಲ್ಲಿಗೆ ಬಂದಿದ್ದಾರೆ.ನಿಗಧಿತ ಅವದಿಯಲ್ಲಿ ಜನರ ಕೆಲಸಮಾಡಿ ಎಂದು ಶಿರಸ್ತೆದಾರ್ ರವಿ ಅವರಿಗೆ ಸೂಚನೆ ನೀಡಿದರು.
ನಾನು ನೀವು ಹೇಳಿದಂತೆ ಕೆಲಸಮಾಡಲು ಆಗಲ್ಲಾ ನನ್ನದೆ ಬೇರೆ ನಿಯಮ ಇದೆ ಎಂದು ಶಿರಸ್ತೆದಾರ್ ರವಿ ಎ.ಸಿ ಶ್ರೀನಿವಾಸ್ ಅವರಿಗೆ ಎದುರು ಉತ್ತರ ಕೊಟ್ಟರು.ಕುಪಿತಗೊಂಡ ಎ.ಸಿ ನೀವು ಸರ್ಕಾರದ ನಿಯಮದಂತೆ ಕೆಲಸಮಾಡಿ ಎಂದು ನಾನು ಹೇಳುತ್ತಿರುವುದು.ಹೆಣ್ಣು ಮಕ್ಕಳು ನಮಗೆ ಪಿತ್ರಾರ್ಜಿತ ಆಸ್ತಿಬೇಡ ನಮ್ಮ ಸಹೋದದರಿಗೆ ಖಾತೆ ಮಾಡಿಕೊಡಿ ಎಂದು ಮನವಿ ಕೊಟ್ಟಾಗ ಯಾಕೆ ನೀವು ಹಕ್ಕು ಖುಲಾಸೆ ಮಾಡಿಸಿಕೊಂಡು ಬನ್ನಿ ಎಂದು ಅಲೆಸುತ್ತೀರಿ? ನಿಮ್ಮ ವಿರುದ್ಧ ಸಾಕಷ್ಟು ದೂರುಗಳು ಬಂದಿವೆ ಎಂದರು.
ರವಿ ಅವರು ವಾದ ಮುಂದುವರಿಸುತ್ತಿದ್ದರಿoದ ಆಕ್ರೋಶಗೊಂಡ ಎ. ಸಿ, ರವಿ ಯವರ ದುರ್ನಡತೆಯ ಬಗ್ಗೆ ಅವರ ಸೇವಾ ಪುಸ್ತಕದಲ್ಲಿ ನಮೂದು ಮಾಡುವ ಜೊತೆಗೆ ಜಿಲ್ಲಾಧಿಕಾರಿಗಳಿಗೂ ಈ ಬಗ್ಗೆ ವರದಿಮಾಡುವುದಾಗಿ ತಿಳಿಸಿದರು.
ದಿನಕ್ಕೆ ನಾಲ್ಕು ಕಡತ ಮುಕ್ತಾಯ ಮಾಡಿದ್ದರೆ ಎಲ್ಲವೂ ಮುಗಿಯುತ್ತಿದ್ದವು:
ಕಂದಾಯ ವಿಭಾಗಕ್ಕೆ ಬರುವ ಅರ್ಜಿಗಳನ್ನು ಪ್ರತಿಯೊಬ್ಬ ಸಿಬ್ಬಂದಿ ಕನಿಷ್ಟ ದಿನಕ್ಕೆ ನಾಲ್ಕನ್ನು ವಿಲೇವಾರಿ ಮಾಡಿದ್ದರೆ ಕಚೇರಿಯಲ್ಲಿ ಇರುವ ಎಲ್ಲಾ ಕಡತಗಳೂ ಇಷ್ಟರ ಒಳಗೆ ಮುಕ್ತಾಯವಾಗುತ್ತಿದ್ದವು. ಆದರೆ ಇಂದಿಗೂ ನೂರಾರು ಕಡತಗಳು ಪೆಂಡಿoಗ್ ಇವೆ.ಜೊತೆಗೆ ಕೆಲವು ರೈತರನ್ನು ವರ್ಷಗಟ್ಟಲೆ ಅಲೆದಾಡಿಸುತ್ತಿರುವ ಬಗ್ಗೆ ದೂರು ಹೇಳುತ್ತಿದ್ದಾರೆ. ನೀವು ಏನು ಮಾಡುತ್ತಿರುವಿರಿ ಎಂದು ಸ್ಥಳದಲ್ಲಿಯೆ ಇದ್ದಂತಹ ತಹಶೀಲ್ದಾರ್ ಅಶೋಕ್ ಅವರಿಗೂ ತರಾಟೆಗೆ ತೆಗೆದುಕೊಂಡರು.
ತಾವು ಎಲ್ಲಾ ಸಿಬ್ಬಂದಿಗಳನ್ನು ಕೆಲಸಕ್ಕೆ ತೊಡಗಿಸಿಕೊಂಡು ನಿಗಧಿತ ಅವಧಿಯೊಳಗೆ ಜನರ ಕೆಲಸ ಮುಗಿಸಬೇಕು ಇಲ್ಲವಾದರೆ ನಾನು ಯಾವುದೇ ಮುಲಾಜು ನೋಡದೆ ನಿಮ್ಮ ವಿರುದ್ಧವೂ ಜಿಲ್ಲಾಧಿಕಾರಿಗಳಿಗೆ ವರದಿಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ನಂತರ ತಾಲೂಕು ಕಚೇರಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕರೆಸಿ ನಿಮ್ಮ ಪಾಲಿನ ಕೆಲಸವನ್ನು ನಿಗಧಿತ ಅವಧಿಯೊಗಳಗೆ ಮುಗಿಸಿ ಎಂದು ಸೂಚನೆ ನೀಡಿದ ಅವರು ನೆರೆದಿದ್ದ ಸಾರ್ವಜನಿಕರನ್ನು ಪ್ರತ್ಯೇಕವಾಗಿ ಬೇಟಿಮಾಡಿ ಅವರ ಸಮಸ್ಯೆಗಳಿಗೆ ಪರಿಹಾರವನ್ನು ಕೊಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
——-ಶ್ರೀನಿವಾಸ್ ಕೆ ಆರ್ ಪೇಟೆ