ಕೆ.ಆರ್.ಪೇಟೆ-ಏ.26ರಂದು ಅಗ್ರಹಾರಬಾಚಹಳ್ಳಿ ಶ್ರೀ ಲಕ್ಷ್ಮೀದೇವಿ ಬ್ರಹ್ಮ ರಥೋತ್ಸವ-ನಾಳೆಯಿಂದ ಬಾಚಳ್ಳಮ್ಮನ ಸಿಡಿಹಬ್ಬ

ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಅಗ್ರಹಾರಬಾಚಹಳ್ಳಿ ಗ್ರಾಮ ದೇವತೆ ಶ್ರೀ ಲಕ್ಷ್ಮೀದೇವಿ(ಬಾಚಳ್ಳಮ್ಮ) ಅಮ್ಮನವರ ಸಿಡಿಹಬ್ಬ ಹಾಗೂ ರಥೋತ್ಸವವು ಏ.25ರಿಂದ ಏ.28ರವರೆಗೆ ನಡೆಯಲಿದೆ.

ಏ.25ರಂದು ಬೆಳಿಗ್ಗೆ ಹೂವಿನ ತೇರು, ರಾತ್ರಿ 8ಗಂಟೆಯಿಂದ ಸಿಡಿ ಉತ್ಸವ, ಹರಕೆ ಹೊತ್ತ ಭಕ್ತರಿಂದ ಬಾಯಿಬೀಗ, ಎಡೆ-ಮಡೆ ಉತ್ಸವ, ಕನ್ನಂಕಾಡಿ ಉತ್ಸವ, ಕೊಂಡೋತ್ಸವ, ಶ್ರೀ ಲಕ್ಷ್ಮೀದೇವಿ ಅಮ್ಮನವರ ಮೆರವಣಿಗೆ, ರಥದ ಕಳಸ ಮೆರವಣಿಗೆ ಮತ್ತು ರಥಕ್ಕೆ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮಗಳು ನಡೆಯಲಿವೆ. ಹೂವಿನ ತೇರಿನಲ್ಲಿ ಭಾಗವಹಿಸುವ ಭಕ್ತಾಧಿಗಳಿಗೆ ಪ್ರಗತಿಪರ ರೈತರ ಎ.ಎಸ್.ಪರಮೇಶ್(ಸಿಂಗಪ್ಪ ಮಾಸ್ಟರ್) ಕುಟುಂಬದವರಿಂದ ಅನ್ನದಾನ ಕಾರ್ಯಕ್ರಮ ಇರುತ್ತದೆ.

ಏ.26ರಂದು ಶನಿವಾರ ಬೆಳಿಗ್ಗೆ ಶ್ರೀ ಲಕ್ಷ್ಮೀದೇವಿ ಅಮ್ಮನವರ ಹಾಗೂ ಶ್ರೀ ಚನ್ನಕೇಶವ ಸ್ವಾಮಿಯವರ ಉತ್ಸವ ಮೂರ್ತಿಯ ಮೆರವಣಿಗೆಯು ಬ್ರಾಹ್ಮಣರ ಬೀದಿಯಿಂದ ಆರಂಭವಾಗಿ ಪ್ರಮುಖ ರಾಜಬೀದಿಯಲ್ಲಿ ಸಾಗಿ ದೇವಾಲಯದ ವರೆಗೆ ಉತ್ಸವ ಮೂರ್ತಿಯ ನೆರಳು ಚಪ್ಪರದ ಪಲ್ಲಕ್ಕಿ ಉತ್ಸವವು ನಡೆಯಲಿದೆ. ಈ ಉತ್ಸವವನ್ನು ಗ್ರಾಮದ ಬ್ರಾಹ್ಮಣ ಸೇವಾ ಸಮಿತಿಯಿಂದ ನಡೆಸಿಕೊಡಲಾಗುತ್ತದೆ.

ಏ.26 ಬ್ರಹ್ಮ ರಥೋತ್ಸವ:
ಏ.26ರಂದು ಶನಿವಾರ ಮಧ್ಯಾಹ್ನ 3ಗಂಟೆಗೆ ಶ್ರೀ ಲಕ್ಷ್ಮಿದೇವಿ ಅಮ್ಮನವರ ಬ್ರಹ್ಮ ರಥೋತ್ಸವವು ಗ್ರಾಮದ ಅರಳೀಮರದ ವೃತ್ತದಿಂದ ಆರಂಭವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ಬೀದಿ, ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಮುಂಭಾಗದ ಹೊಲೆ-ಗದ್ದೆ-ಬದುಗಳು ಇರುವ ಕ್ಲಿಷ್ಟಕರ ದಾರಿಯಲ್ಲಿ ಸಾಗಿ, ಬ್ರಾಹ್ಮಣರ ಬೀದಿಯ ಮೂಲಕ ರಂಗದ ಬೀದಿಯ ಮೂಲಕ ರಂಗಸ್ಥಳದಲ್ಲಿ ರಥವು ಸಂಪನ್ನಗೊಳ್ಳುತ್ತದೆ. ಅಲ್ಲಿಂದ ದೇವಿಯ ಉತ್ಸವ ಮೂರ್ತಿಯನ್ನು ದೇವಾಲಯಕ್ಕೆ ತರಲಾಗುತ್ತದೆ. ನಂತರ ಭಕ್ತಾಧಿಗಳು ಹಣ್ಣು-ಕಾಯಿ ಅರ್ಪಿಸಿ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

ರಥೋತ್ಸವದಲ್ಲಿ ಭಾಗವಹಿಸುವ ಎಲ್ಲಾ ಭಕ್ತಾಧಿಗಳಿಗೆ ಗ್ರಾಮದ ಸರ್ಕಾರಿ ನೌಕರರ ಸಂಘದಿಂದ ಅನ್ನಧಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾತ್ರಿ 7ಗಂಟೆಗೆ ಗ್ರಾಮದ ಯುವಕರ ಸಂಘ ಹಾಗೂ ಬೆಂಗಳೂರು ಬಾಚಳ್ಳಿ ಬಾಯ್ಸ್ ಸಹಕಾರದಿಂದ ಆರ್ಕೆಸ್ಟ್ರಾ ಹಾಗೂ ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಏ.27ರಂದು ಭಾನುವಾರ ಜಾತ್ರೆ, ಕೋಲಾಟ, ಓಕಳಿಯಾಟ, ದೇವರಿಗೆ ವಿಶೇಷ ಪೂಜೆ, ಮಹಾಂಗಳಾರತಿ ಕಾರ್ಯಕ್ರಮಗಳು ನಡೆಯಲಿವೆ. ಏ.28ರಂದು ಸೋಮನ ಕುಣಿತ, ಮನೆ ಮನೆಯಲ್ಲಿ ಸೋಮದೇವರುಗಳಿಗೆ ಪೂಜೆ, ಮಜ್ಜಿಗೆ ಪಾನಕ ವಿತರಣೆ ವಿತರಣಾ ಕಾರ್ಯಕ್ರಮಗಳು ಮಂಗಳವಾರ ಮುಂಜಾನೆವರೆಗೆ ನಡೆಯಲಿವೆ.

ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ದೇವಿಯ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ದೇವರ ಕೃಫೆಗೆ ಪಾತ್ರರಾಗಬೇಕು ಎಂದು ಅಗ್ರಹಾರಬಾಚಹಳ್ಳಿ ಶ್ರೀ ಲಕ್ಷ್ಮೀ ದೇವಿ ಸಿಡಿಹಬ್ಬ ಆಚರಣಾ ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

-ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?