ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಲಕ್ಷ್ಮೀ ದೇವಿ (ಬಾಚಳ್ಳಮ್ಮ) ಅಮ್ಮನವರ ಸಿಡಿಹಬ್ಬದ ಅಂಗವಾಗಿ ಶನಿವಾರ ಶ್ರೀ ಲಕ್ಷ್ಮೀ ದೇವಿ ಅಮ್ಮನವರ ಮಹಾ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.
ಗ್ರಾಮದ ಅರಳೀಮರದ ವೃತ್ತದಲ್ಲಿ ಶನಿವಾರ ಮಧ್ಯಾಹ್ನ ಸರಿ ಸುಮಾರು 3ಗಂಟೆಗೆ ಗ್ರಾಮದ ಯಜಮಾನರುಗಳು ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಶ್ರೀ ಲಕ್ಷ್ಮೀ ದೇವಿ ಅಮ್ಮನವರ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದರು. ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾಧಿಗಳು ರಥಕ್ಕೆ ಹಣ್ಣು-ಜವನ ಸಮರ್ಪಿಸಿ ಉಘೇ.. ಲಕ್ಷ್ಮೀ ದೇವಿ, ಉಘೇ… ಬಾಚಳ್ಳಮ್ಮ ಉಘೇ… ಉಘೇ… ಎಂಬ ಜಯಘೋಷಗಳನ್ನು ಕೂಗುತ್ತಾ ರಥವನ್ನು ಎಳೆದು ತಮ್ಮ ಭಕ್ತಿ-ಭಾವ ಸಮರ್ಪಿಸಿದರು.

ಅರಳೀಮರ ವೃತ್ತದಿಂದ ಆರಂಭವಾದ ರಥೋತ್ಸವವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ಬೀದಿ, ಶ್ರೀ ಚನ್ನಕೇಶವಸ್ವಾಮಿ ದೇವಾಲಯದಬ್ರಾಹ್ಮಣರು ಮುಂಭಾಗದ ಹೊಲ-ಗದ್ದೆ-ಬದುಗಳು ಇರುವ ಕ್ಲಿಷ್ಟಕರ ದಾರಿಯಲ್ಲಿ ಯಾವುದೇ ವಿಘ್ನಗಳಿಲ್ಲದಂತೆ ಸಾಗಿ, ಬ್ರಾಹ್ಮಣರ ಬೀದಿಯ ಹಾಗೂ ರಂಗದ ಬೀದಿಯಲ್ಲಿ ಹೊರಟ ಲಕ್ಷ್ಮೀದೇವಿ ವಿರಾಜಮಾನಳಾಗಿದ್ದ ರಥವು ರಂಗಸ್ಥಳದಲ್ಲಿ ಸಂಪನ್ನಗೊಂಡಿತು. ರಥೋತ್ಸವದಲ್ಲಿ ಭಾಗವಹಿಸಿದ್ದ ಎಲ್ಲಾ ಭಕ್ತಾಧಿಗಳಿಗೆ ಗ್ರಾಮದ ಸರ್ಕಾರಿ ನೌಕರರ ಸಂಘದ ವತಿಯಿಂದ ಅನ್ನಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ರಥೋತ್ಸವಕ್ಕೂ ಮುನ್ನ ಗ್ರಾಮದ ಬ್ರಾಹ್ಮಣ ಸೇವಾ ಸಮಿತಿ ವತಿಯಿಂದ ಶ್ರೀ ಲಕ್ಷ್ಮೀ ದೇವಿ ಅಮ್ಮನವರ ಹಾಗೂ ಶ್ರೀ ಚನ್ನಕೇಶವ ಸ್ವಾಮಿಯವರ ಉತ್ಸವ ಮೂರ್ತಿಯ ನೆರಳು ಚಪ್ಪರದ ಮೆರವಣಿಗೆಯು ಬ್ರಾಹ್ಮಣರ ಬೀದಿಯಿಂದ ಆರಂಭವಾಗಿ ಪ್ರಮುಖ ರಾಜಬೀದಿಯಲ್ಲಿ ಸಾಗಿ ದೇವಾಲಯದ ವರೆಗೆ ನಡೆಯಿತು. ತಾಲ್ಲೂಕಿನ ಹಲವು ಗ್ರಾಮಗಳಿಂದ ಆಗಮಿಸಿದ್ದ ಬ್ರಾಹ್ಮಣರ ಸೇವಾ ಸಮಿತಿಯ ಸದಸ್ಯರು ದೇವರ ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿದ್ದರು.

ರಥೋತ್ಸವದ ಅಂಗವಾಗಿ ಏ.24ರಂದು ಗುರುವಾರ ರಂಗಕುಣಿತ, ಬಹುರೂಪಿ ನಾಟಕ ಪ್ರದರ್ಶನ ಕಾರ್ಯಕ್ರಮಗಳು ರಾತ್ರಿಯಿಡೀ ನಡೆದವು. ಹೂವಿನ ತೇರಿನಲ್ಲಿ ಭಾಗವಹಿಸಿದ್ದ ಎಲ್ಲಾ ಭಕ್ತಾಧಿಗಳಿಗೆ ಪ್ರಗತಿಪರ ರೈತ ಎ.ಎಸ್.ಪರಮೇಶ್ ಸಿಂಗೇಗೌಡ ಅವರು ಪ್ರಸಾದ ವ್ಯವಸ್ಥೆ ಏರ್ಪಡಿಸಿದ್ದರು. ಏ.25ರಶುಕ್ರವಾರದಂದು ಬೆಳಿಗ್ಗೆ ಹೂವಿನ ತೇರು ನಡೆಯಿತು. ರಾತ್ರಿ ಸಿಡಿ ಉತ್ಸವ, ಹರಕೆ ಹೊತ್ತ ಭಕ್ತರಿಂದ ಬಾಯಿಬೀಗ, ಎಡೆ-ಮಡೆ ಉತ್ಸವ, ಕನ್ನಂಕಾಡಿ ಉತ್ಸವ, ಕೊಂಡೋತ್ಸವ, ಸರ್ವಾಲಂಕೃತ ವಾಹನದಲ್ಲಿ ಶ್ರೀ ಲಕ್ಷ್ಮೀದೇವಿ ಅಮ್ಮನವರ ಭವ್ಯ ಮೆರವಣಿಗೆ, ರಥದ ಕಳಸ ಮೆರವಣಿಗೆ ಮತ್ತು ರಥಕ್ಕೆ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮಗಳು ನಡೆದವು.

ರಥೋತ್ಸವದಲ್ಲಿ ಮಡುವಿನಕೋಡಿಕೋಡಿ, ಚಿಕ್ಕೋಸಹಳ್ಳಿ, ಹರೀನಹಳ್ಳಿ, ಚಿಲ್ಲದಹಳ್ಳಿ, ಬೇಲದಕೆರೆ, ನಗರೂರು-ಮಾರ್ಗೋನಹಳ್ಳಿ, ಬೊಮ್ಮನಾಯಕನಹಳ್ಳಿ, ವಳಗೆರೆಮೆಣಸ, ಗುಡ್ಡೇನಹಳ್ಳಿ, ಅರೆಬೊಪ್ಪನಹಳ್ಳಿ, ಕೆ.ಆರ್.ಪೇಟೆ, ದಡಿಘಟ್ಟ, ಮೈಸೂರು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಸುಮಾರು 10ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು, ನೂರಾರು ಗಣ್ಯರು ರಥೋತ್ಸವ ಹಾಗೂ ಸಿಡಿ ಹಬ್ಬದಲ್ಲಿ ಭಾಗವಹಿಸಿದ್ದರು.
ಟೌನ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸುಮಾರಾಣಿ ಮತ್ತು ಸಬ್ ಇನ್ಸ್ ಪೆಕ್ಟರ್ ನವೀನ್ ಅವರ ನೇತೃತ್ವದಲ್ಲಿ ರಥೋತ್ಸವಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
- ಶ್ರೀನಿವಾಸ ಆರ್.