ಕೆ.ಆರ್.ಪೇಟೆ:ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕೆ.ಆರ್.ಪೇಟೆ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.
ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚಿಕ್ಕಗಾಡಿಗನಹಳ್ಳಿ ರಾಜಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಮಿತ್ ಷಾ ಅವರು ಗುಜರಾತ್ ನಲ್ಲಿ ರಾಜ್ಯ ಸರ್ಕಾರದ ಗೃಹಮಂತ್ರಿಗಳಾಗಿದ್ದ ವೇಳೆ ಹಲವಾರು ನಕಲಿ ಎನ್ಕೌಂಟರ್ ಮಾಡಿಸಿ ನರಹತ್ಯೆ ಮಾಡಿಸಿದ ಕುಖ್ಯಾತಿಗೆ ಒಳಗಾಗಿದ್ದಾರೆ.
ಇಂತಹ ವ್ಯಕ್ತಿ ಕೇಂದ್ರ ಸಚಿವರಾಗಿದ್ದು, ತಮ್ಮ ಜವಾಬ್ದಾರಿ ಅರಿತು ಪ್ರಭುದ್ದತೆಯಿಂದ ನಡೆದುಕೊಳ್ಳುವ ಬದಲು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕುರಿತು ಅವಹೇಳನಕಾರಿಯಾಗಿ ಟೀಕೆ ಮಾಡಿದ್ದಾರೆ ಇದು ದೇಶದ ಕೋಟಿ ಕೋಟಿ ಅಂಬೇಡ್ಕರ್ ಅನುಯಾಯಿಗಳಿಗೆ ತುಂಬಾ ನೋವಾಗಿರುತ್ತದೆ.ಮಾನ್ಯ ಪ್ರಧಾನಿಗಳು ಕೂಡಲೇ ಅಮಿತ್ ಷಾ ಅವರನ್ನು ಸಂಪುಟದಿಂದ ಕೈಬಿಡಬೇಕು ಹಾಗೂ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದರು.
ಅಮಿತ್ ಷಾ ಅವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸ ಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಬಸ್ತಿ ರಂಗಪ್ಪ, ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜ್, ಗೌರವಾಧ್ಯಕ್ಷ ಸೋಮಸುಂದರ್, ನರಸಿಂಹ, ತೆಂಡೇಕೆರೆ ನಿಂಗಯ್ಯ, ಬೂಕನಕೆರೆ ತಮ್ಮಯ್ಯ, ಮಾಕವಳ್ಳಿ ಸುನಿಲ್ ಸಣ್ಣಯ್ಯ, ಛಲವಾದಿ ಮಹಾಸಭಾ ಹಾಸನ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಮಾಂಬಳ್ಳಿ ಜಯರಾಂ, ಮಂಡ್ಯ ಜಿಲ್ಲಾ ಮಾತಂಗಿ ಮಾದಿಗ ಸಮಾಜದ ಜಿಲ್ಲಾಧ್ಯಕ್ಷ ಹೊಸಹೊಳಲು ಕುಮಾರ್, ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಷ್ಮೀಪುರ ರಂಗಸ್ವಾಮಿ, ಬಂಡಿಹೊಳೆ ರಮೇಶ್, ಕತ್ತರಘಟ್ಟ ರಾಜೇಶ್, ಕರ್ನಾಟಕ ರಾಜ್ಯ ಕುಳುವ ಮಹಾ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಕ್ಕಿಹೆಬ್ಬಾಳು ಜಯಶಂಕರ್, ದಲಿತ ಸಂಘಟನೆಗಳ ಮುಖಂಡರಾದ ನಾಟನಹಳ್ಳಿ ಸೋಮರಾಜು, ಎನ್.ಜೆ.ಮಂಜು, ಗಂಗಾ, ಯರಗನಹಳ್ಳಿ ಪರಮೇಶ್, ಗಣೇಶ್, ಚಿಕ್ಕಗಾಡಿಗನಹಳ್ಳಿ ಬಸವೇಶ್, ನಗರೂರು ಮಂಜಯ್ಯ, ಜಕ್ಕನಹಳ್ಳಿ ರಾಜೇಶ್, ಸಿಂಧುಘಟ್ಟ ಪುಟ್ಟರಾಜು, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಯ ನಂತರ ಗ್ರೇಡ್-2 ತಹಸೀಲ್ದಾರ್ ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.
————–—-ಶ್ರೀನಿವಾಸ್ ಆರ್