ಕೆ.ಆರ್.ಪೇಟೆ-ಕನ್ನಡಿಗರಾದ ನಾವು ನವೆಂಬರ್ ಕನ್ನಡಿಗರಾಗದೆ,ನೈಜ ಕನ್ನಡಿಗರಾಗಿ ಕನ್ನಡ ನೆಲ, ಜಲ, ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಂಡು ನಿರಂತರ ಹೋರಾಟ ಮಾಡಬೇಕು ಎಂದು ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ದಿವಿಕುಮಾರ್ ಮನವಿ ಮಾಡಿದರು.
ಅವರು ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಾಡ ಧ್ವಜಾರೋಹಣ ಮಾಡಿ ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ಪೂಜೆ ಮಾಡಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ನಾವು ಕೇವಲ ತೋರಿಕೆಗಾಗಿ ಕನ್ನಡಿಗರಾಗದೆ ಕನ್ನಡ ನೆಲ, ಜಲ, ಭಾಷೆಯನ್ನು ಗೌರವಿಸಿ ಆರಾಧಿಸುವ ಮೂಲಕ ನೈಜ ಕನ್ನಡಿಗರಾಗಿ ಹೊರ ಹೊಮ್ಮಬೇಕು. ಕನ್ನಡ ನೆಲದಲ್ಲಿ ವಾಸಿಸುವ ಕನ್ನಡ ಭಾಷೆ ಗೊತ್ತಿಲ್ಲದ ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸಿಕೊಡುವ ಕೆಲಸವನ್ನು ಅಭಿಮಾನದಿಂದ ಮಾಡಬೇಕು ಎಂದು ಹೇಳಿದರು.
ವಿಶ್ವದಲ್ಲಿಯೇ ಅತೀ ಹೆಚ್ಚಿನ ಜನರು ಮಾತನಾಡುವ ಶ್ರೀಮಂತ ಭಾಷೆಯಾಗಿರುವ ಕನ್ನಡ ಭಾಷೆಗೆ ಇಂದು ಕನ್ನಡದ ನೆಲದಲ್ಲಿಯೇ ಆಪತ್ತು ಎದುರಾಗಿದೆ.ತಮಿಳು, ತೆಲುಗು, ಮರಾಠಿ , ಹಿಂದಿ ಸೇರಿದಂತೆ ಅನ್ಯ ಭಾಷಿಕರು ಕನ್ನಡಿಗರ ಮೇಲೆ ಸವಾರಿ ಮಾಡುತ್ತಾ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿದ್ದಾರೆ. ಕನ್ನಡಿಗರಾದ ನಾವು ನಿರಭಿಮಾನಿಗಳಾಗದೆ ಕನ್ನಡ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಂಡು ಹೆಜ್ಜೆ ಹಾಕಬೇಕು ಎಂದು ಕರೆ ನೀಡಿದರು.
ಗ್ರಾಮ ಪಂಚಾಯಿತಿ ಪಿ.ಡಿ.ಓ ಹರ್ಷವರ್ಧನ್, ಉಪಾಧ್ಯಕ್ಷೆ ಸುನಿತಾದ್ಯಾವಯ್ಯ, ಸದಸ್ಯರಾದ ಆರ್.ರಮೇಶ್, ಚನ್ನೇಗೌಡ, ಚಿಲ್ಲದಹಳ್ಳಿ ಶ್ರೀನಿವಾಸ್, ಆಶಾಆನಂದ್, ನೇತ್ರಾವತಿ ರಮೇಶ್, ಸಾವಿತ್ರಮ್ಮಗೋವಿಂದಶೆಟ್ಟಿ, ಸಿ.ಆರ್.ಪಿಕುಮಾರ್, ಚಂದ್ರಶೇಖರ್, ಬಿಲ್ ಕಲೆಕ್ಟರ್ ನರಸಿಂಹಯ್ಯ, ಡಿ.ಇ.ಓ ತ್ರಿವೇಣಿ, ಗ್ರಂಥಪಾಲಕಿ ಸೌಮ್ಯ, ಸೇರಿದಂತೆ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನೌಕರರು ಉಪಸ್ಥಿತರಿದ್ದರು.
ಚಿಲ್ಲದಹಳ್ಳಿ ವರದಿ
ತಾಲ್ಲೂಕಿನ ಚಿಲ್ಲದಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ.ಎನ್.ಸತೀಶ್ ಅಧ್ಯಕ್ಷತೆ ನಡೆಯಿತು.
ಗ್ರಾಮ ಪಂಚಾಯಿತಿ ಸದಸ್ಯ ಆರ್.ಶ್ರೀನಿವಾಸ್ ಧ್ವಜಾರೋಹಣ ಮಾಡಿ ಧ್ವಜ ಸಂದೇಶ ನೀಡಿದರು.
ಮುಖ್ಯ ಶಿಕ್ಷಕ ರಮೇಶ್ ನಾಡು-ನುಡಿ ಕುರಿತು ಮಾತನಾಡಿದರು. ಸಹ ಶಿಕ್ಷಕ ಕೃಷ್ಣಯ್ಯ, ಎಸ್.ಡಿ.ಎಂ.ಸಿ ಸದಸ್ಯರಾದ ಮಂಜೇಗೌಡ, ಪಟೇಲ್ ನಾಗೇಗೌಡ, ವೆಂಕಟೇಶ್ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
————-ಶ್ರೀನಿವಾಸ್ ಕೆ ಆರ್ ಪೇಟೆ