ಕೆ.ಆರ್.ಪೇಟೆ-ಬಿಸಿಲು ಮಳೆಯೇನ್ನದೆ ತಮ್ಮ ಶ್ರಮದ ದುಡಿಮೆಯ ಮೂಲಕ ಬಗೆ ಬಗೆಯ ತಿಂಡಿ ತಿನಿಸುಗಳು ಹಾಗೂ ಊಟವನ್ನು ತಯಾರಿಸಿ ಕೊಡುವ ಬೀದಿ ಬದಿಯ ವ್ಯಾಪಾರಿಗಳಿಗೆ ಪೊಲೀಸರು ಹಾಗೂ ಪುರಸಭೆ ಸಿಬ್ಬಂದಿಗಳು ತೊಂದರೆ ನೀಡಿ, ಶ್ರಮ ಜೀವಿಗಳ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನು ಯಾರೂ ಮಾಡಬಾರದು. ರಸ್ತೆ ಬದಿಯ ಫುಟ್ ಪಾತ್ ನಲ್ಲಿ ವ್ಯಾಪಾರ ಮಾಡುವ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ನಂತರವಷ್ಟೇ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸ್ಥಳಾಂತರ ಮಾಡಬೇಕು, ವಿನಾ ಕಾರಣ ಬೀದಿ ವ್ಯಾಪಾರಿಗಳಿಗೆ ತೊಂದರೆ ನೀಡಿದರೆ ನಾನೇ ಹೋರಾಟದ ನಾಯಕತ್ವ ವಹಿಸಬೇಕಾಗುತ್ತದೆ ಎಂದು ಶಾಸಕ ಮಂಜು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ಮೈಸೂರು ಚನ್ನರಾಯಪಟ್ಟಣ ರಸ್ತೆಯ ಎಂ.ಕೆ.ಬೊಮ್ಮೆಗೌಡ ವೃತ್ತದ ಬಳಿ ನೂತನ ವಾಗಿ ಆರಂಭವಾದ ಬೆನಕ ಫಾಸ್ಟ್ ಫುಡ್ ಮತ್ತು ಚಾಟ್ಸ್, ರಸ್ತೆ ಬದಿಯ ವ್ಯಾಪಾರಿಗಳ ಸಂಘವನ್ನು ಶಾಸಕ ಹೆಚ್.ಟಿ.ಮಂಜು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಬೀದಿ ಬದಿಯ ವ್ಯಾಪಾರಿಗಳು ಕೂಡಾ ಸ್ವಚ್ಛತೆ, ಸಾರ್ವಜನಿಕರು ಹಾಗೂ ವಾಹನಗಳ ಓಡಾಟಕ್ಕೆ ತೊಂದರೆಯಾಗದoತೆ ವ್ಯಾಪಾರ ವ್ಯವಹಾರ ನಡೆಸಬೇಕು ಎಂದು ಶಾಸಕರು ಕಿವಿಮಾತು ಹೇಳಿದರು.
ಪುರಸಭೆ ಸದಸ್ಯ ಬಸ್ ಸಂತೋಷ್ ಮಾತನಾಡಿ ಬೀದಿ ಬದಿ ವ್ಯಾಪಾರಿಗಳು ಸ್ವಾಭಿಮಾ ನಿಗಳಾಗಿದ್ದು ಯಾರಿಗೂ ಮೋಸ ಮಾಡದೇ ತಮ್ಮ ಶ್ರಮದ ದುಡಿಮೆಯ ಮೂಲಕ ಬದುಕು ನಡೆಸುತ್ತಿದ್ದಾರೆ.ಸುಗಮ ಸಂಚಾರದ ಹೆಸರಿನಲ್ಲಿ ಬೀದಿ ವ್ಯಾಪಾರಿಗಳಿಗೆ ತೊಂದರೆ ನೀಡುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.
ಸಮಾಜ ಸೇವಕರು ಹಾಗೂ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಆರ್.ಟಿ.ಓ ಮಲ್ಲಿಕಾರ್ಜುನ್ ಮಾತನಾಡಿ, ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಪಟ್ಟಣಕ್ಕೆ ಬರುವ ಬಡ ಜನರಿಗೆ ರಿಯಾಯಿತಿ ದರದಲ್ಲಿ ತಿಂಡಿ ಹಾಗೂ ಊಟ ನೀಡುತ್ತಿರುವ ಬೀದಿ ಬದಿ ವ್ಯಾಪಾರಿಗಳ ಶ್ರಮ ಹಾಗೂ ದುಡಿಮೆಯು ದೊಡ್ಡದಿದೆ. ಕಡಿಮೆ ಖರ್ಚಿನಲ್ಲಿ ಹಸಿದ ಕಾರ್ಮಿಕರು ಮತ್ತು ಬಡವರ ಹೊಟ್ಟೆಯನ್ನು ತುಂಬಿಸುವ ಪುಣ್ಯದ ಕೆಲಸ ಮಾಡುತ್ತಿರುವ ಕ್ಯಾಂಟೀನ್, ಮೆಸ್ ಹಾಗೂ ರಸ್ತೆ ಬದಿ ಕ್ಯಾಂಟೀನ್ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆಯುವ ಕೆಲಸವನ್ನು ಯಾರೂ ಮಾಡಬಾರದು ಎಂದು ಹೇಳಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರಬಾಬು ಬೆನಕ ಬೀದಿ ಬದಿಯ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿ, ಬೀದಿ ಬದಿಯ ವ್ಯಾಪಾರಿಗಳು ಸಾರ್ವಜನಿಕರ ಸುರಕ್ಷತೆ, ಸ್ವಚ್ಛತೆ ಹಾಗೂ ವಾಹನಗಳ ಸುಗಮ ಓಡಾಟಕ್ಕೆ ಒತ್ತು ನೀಡಿ ವ್ಯಾಪಾರ ವ್ಯವಹಾರ ಮಾಡಬೇಕು.ಒಬ್ಬನೇ ವ್ಯಕ್ತಿ ಎರಡು ಮೂರು ಅಂಗಡಿಗಳನ್ನು ಇಟ್ಟುಕೊಂಡು ತಮ್ಮ ಇತರೆ ಸಹೋದ್ಯೋಗಿ ವ್ಯಾಪಾರಿಗಳಿಗೆ ತೊಂದರೆ ನೀಡಬಾರದು. ನಿಮ್ಮ ಯಾವುದೇ ಸಮಸ್ಯೆಗಳಿಗೆ ಪುರಸಭೆಯನ್ನು ಸಂಪರ್ಕಿಸಬೇಕು, ರಸ್ತೆ ಬದಿ ವ್ಯಾಪಾರಿಗಳಿಗೆ ಪುರಸಭೆ ವತಿಯಿಂದ ನೀಡುವ ಸಾಲ ಸೌಲಭ್ಯ ಪಡೆದುಕೊಂಡು, ಮೀಟರ್ ಬಡ್ಡಿ ದಂಧೆ ನಡೆಸುವ ದಲ್ಲಾಳಿಗಳ ಕಿರುಕುಳದಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ನಟರಾಜ್, ಸದಸ್ಯ ಡಿ.ಪ್ರೇಮಕುಮಾರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ವೈದ್ಯಾಧಿಕಾರಿ ಡಾ.ವಿನಯ್, ನೀರಾವರಿ ಇಲಾಖೆ ಇಂಜಿನಿಯರ್ ಬಸವೇಗೌಡ, ಕಂದಾಯ ಅಧಿಕಾರಿ ರವಿ, ಮುಖಂಡರಾದ ವಿಶ್ವನಾಥ್, ವಕೀಲ ಶ್ರೀನಿವಾಸ್ ಕೇಸರಿ, ದಿನೇಶ್, ಬೆನಕ ಪಾಸ್ಟ್ ಫುಡ್ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಕೆ.ಮಂಜುನಾಥ್, ಉಪಾಧ್ಯಕ್ಷ ಕೆ.ಎನ್.ಮಂಜುನಾಥ್, ಗೌರವಾಧ್ಯಕ್ಷ ಚಂದ್ರಾಚಾರ್, ಖಜಾಂಚಿ ಜೀವರಾಜ್, ಚೇತನ್, ಬಜಾಜ್ ಕಿರಣ್, ಕೆ.ಪಿ.ಜಯರಾಮ್, ಕಾರ್ಯದರ್ಶಿ ಕಬಾಬ್ ಮಂಜು, ಸೋಮಶೇಖರ್, ಗಂಗನಹಳ್ಳಿ ಯೋಗೇಶ್, ಸಾಸಲು ಕೃಷ್ಣ, ಮಂಜುನಾಥಶೆಟ್ಟಿ, ರಾಧಾ, ಶ್ರೀ ಚಂದನ ಸೇರಿದಂತೆ ಬೆನಕ ಪಾಸ್ಟ್ ಫುಡ್ ಬೀದಿ ಬದಿ ವ್ಯಾಪಾರಿಗಳ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
—————ಶ್ರೀನಿವಾಸ್ ಆರ್