ಕೆ.ಆರ್.ಪೇಟೆ-ತಾಲ್ಲೂಕಿನ ರಸ್ತೆಗಳು ಮತ್ತು ಒಡೆದುಹೋಗಿರುವ ಕೆರೆಗಳ ಅಭಿವೃದ್ಧಿಗೆ ಅಗತ್ಯ ಅನುಧಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿರುವ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಿರುವ ಕೆ.ಎನ್.ಕೆಂಗೇಗೌಡ ಸಹಕಾರ ಭವನ ಹಾಗೂ ಪಡಿತರ ದಾಸ್ತಾನು ಗೋದಾ ಮು ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಎಲ್ಲಾ ಭಾಗಗಳಲ್ಲಿಯೂ ಉತ್ತಮವಾಗಿ ಮಳೆ ಬಂದಿದೆ.ಇದರಿಂದಾಗಿ ರಸ್ತೆಗಳು ಹಾಳಾಗಿವೆ ಎಂಬ ದೂರುಗಳಿವೆ.ಜೊತೆಗೆ ಕೆರೆ ಕಟ್ಟೆಗಳು ಒಡೆದು ಹೋಗಿ ನೀರಿನ ಶೇಖರಣೆಗೂ ಹೊಡೆತ ಬಿದ್ದಿದೆ.ಇದರಿಂದ ರೈತರಿಗೆ ತೊಂದರೆಗಳಾಗಲಿದ್ದು ತಾಲೂಕಿನ ಈ ಅವ್ಯವಸ್ಥೆಗಳ ಬಗೆಗೂ ಶಾಸಕ ಹೆಚ್.ಟಿ ಮಂಜು ಮಾತನಾಡಿದ್ದಾರೆ.ರಸ್ತೆಗಳ ಹಾಗು ಕೆರೆಗಳ ಅಭಿವೃದ್ಧಿಗೆ ಹಣಕಾಸು ನೆರವನ್ನು ಒದಗಿಸುತ್ತೇನೆ.ನನಗೆ ಪಕ್ಷಬೇಧವಿಲ್ಲ ಎಂದು ತಿಳಿಸಿದರು.
ಒಬ್ಬ ಮುಖ್ಯಮಂತ್ರಿ ಜವಾಬ್ದಾರಿಯುತವಾಗಿ ಕೆಲಸವನ್ನು ಮಾಡಿದರೆ ಬಡಜನರು ನೆಮ್ಮದಿಯಿಂದ ಇರಲು ಸಾಧ್ಯ. ಬಡವರಿಗೆ ನೀಡುವ ಸವಲತ್ತುಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಟೀಕಿಸಬಾರದು.ಬಡವರ ಅಭಿವೃದ್ದಿಯೂ ಕೂಡಾ ರಾಜ್ಯದ ಅಭಿವೃದ್ಧಿಯೆ.ಒಂದು ಕುಟುಂಬಕ್ಕೆ ನಮ್ಮ ಸರಕಾರ ಅನ್ನಭಾಗ್ಯ,ಶಕ್ತಿ, ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ ಕಾರ್ಯಕ್ರಮಗಳ ಮೂಲಕ ಸಾವಿರಾರು ರೂಪಾಯಿಗಳು ನೇರವಾಗಿ ಯಾವುದೆ ಮಧ್ಯವರ್ತಿಯ ನೆರವಿಲ್ಲದೆ ತಲುಪುತ್ತಿದೆ. ಗ್ಯಾರಂಟಿ ಯೋಜನೆಗಳಿಗಾಗಿ ವರ್ಷಕ್ಕೆ ಸುಮಾರು 60ಸಾವಿರ ಕೋಟಿ ಅನುಧಾನವನ್ನು ನೀಡಲಾಗುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ಬಿಜೆಪಿಯು ಇತ್ತೀಚೆಗೆ ನಡೆದ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಇದೇ ರೀತಿಯ ಹಲವು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಅಧಿಕಾರಕ್ಕೇರಿದೆ ಎಂದರು.ಗ್ಯಾರಂಟಿ ಯೋಜನೆಗಳಿಂದಾಗಿ ನಮ್ಮ ಕರ್ನಾಟಕ ರಾಜ್ಯ ಸುಖೀ ರಾಜ್ಯವಾಗಿ ರೂಪುಗೊಂಡಿರುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ರಾಜ್ಯದ ಯಾವೊಬ್ಬ ಬಡ ಜನರು ಕೂಡಾ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯನ್ನು ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಜಾರಿಗೆ ತಂದಿದ್ದೆ. ಇದರಿಂದಾಗಿ ರಾಜ್ಯದ ಬಡವರು ಹಸಿವು ಮಕ್ತರಾಗಿ ಜೀವನವನ್ನು ಸಾಗಿಸುತ್ತಿದ್ದಾರೆ, ಇದು ನನಗೆ ಅತ್ಯಂತ ಹೆಮ್ಮೆ ತಂದಿದೆ ಎಂದರು.
ಕರ್ನಾಟಕ ರಾಜ್ಯವು ಜಿಡಿಪಿಯಲ್ಲಿ ಅತ್ಯುನ್ನತವಾಗಿ ಬೆಳವಣಿಗೆಯನ್ನು ಹೊಂದಿದೆ.ನಮ್ಮ ಸರಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ ಎಂದು ಟೀಕಿಸುವ ವಿರೋಧ ಪಕ್ಷಗಳಿಗೆ ನಮ್ಮ ಪ್ರಗತಿಯಿಂದಲೇ ಉತ್ತರವನ್ನು ನೀಡಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದರು.
ದೇಶದಲ್ಲಿ ಸಹಕಾರ ಕ್ಷೇತ್ರ ಅಭಿವೃದ್ದಿಯಾದಷ್ಟು ರೈತರ ಅಭಿವೃದ್ದಿ ಸಾಧ್ಯವಾಗುತ್ತದೆ.
ತಾವು ಬೆಳೆದ ಕೃಷಿ ಉತ್ಪನ್ನಗಳಿಗೆ ತಾವುಗಳೇ ಬೆಲೆ ನಿಗದಿಪಡಿಸುವಂತಹ ಸಾಮರ್ಥ್ಯ ರೈತರಿಗೆ ಬರಬೇಕು. ಅಲ್ಲಿಯವರೆಗೆ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ, ಗೊಬ್ಬರ, ಬಿತ್ತನೆ ಬೀಜ, ಕೃಷಿ ಉಪಕರಣಗಳಿಗೆ ಸಬ್ಸಿಡಿಗಳು ದೊರೆಯಬೇಕು. ಹಾಗಾಗಿ ನಮ್ಮ ಸರ್ಕಾರವು ಬಡ್ಡಿ ಇಲ್ಲದ ಸಾಲ ಯೋಜನೆ ಜಾರಿಗೆ ತಂದಿದೆ ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿ ಸಹಕಾರ ಕ್ಷೇತ್ರದ ಅಭಿವೃದ್ದಿಯಿಂದಾಗಿ ದೇಶದ ಜಿಡಿಪಿ ಹೆಚ್ಚಿದೆ. ದೇಶದ ಅಸಮಾನತೆ ದೂರವಾಗಬೇಕಾದರೆ ದೇಶದ ಜನರಿಗೆ ಆರ್ಥಿಕ, ಸಾಮಾಜಿಕ ಸಮಾನತೆ ಯಾಗಬೇಕು. ಕೇಂದ್ರ ಸರಕಾರವು ಶೇಕಡ 58% ನಷ್ಟು ನಬಾರ್ಡ್ನ ಸಾಲವನ್ನು ಕಡಿಮೆ ಮಾಡಿದೆ. ಕೇಂದ್ರ ಸರಕಾರವು ಹಿಂದೆ 5500ಕೋಟಿ ನೀಡುತ್ತಿತ್ತು. ಈಗ ಕೇವಲ 2500ಕೋಟಿ ಮಾತ್ರ ನಬಾರ್ಡ್ ಅನುದಾನವನ್ನು ನೀಡಿದೆ. ಇದನ್ನು ಪ್ರಶ್ನಿಸುವುದು ಅನ್ಯಾಯವೆ? ಇದು ನೇರವಾಗಿ ರೈತರಿಗೆ ಕೇಂದ್ರ ಸರಕಾರ ಮಾಡುತ್ತಿರುವ ಅನ್ಯಾಯ. ನಾನು ಪ್ರಧಾನಿ ಮತ್ತು ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿದ್ದೆ. ಆಗಿರುವ ಅನ್ಯಾಯವನ್ನು ಸರಿಪಡಿಸಲು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ತಾಲೂಕಿನ ಸಹಕಾರ ಸಂಘಗಳಲ್ಲಿ ಒಳ್ಳೆಯ ನಾಯಕತ್ವ ಇರುವುದು ಕಾಣುತ್ತಿದೆ. ಕಿಕ್ಕೇರಿ ಸಹಕಾರ ಸಂಘವು 26ಕೋಟಿಯಷ್ಟು ಸ್ವಂತ ಬಂಡವಾಳವನ್ನು ಹೊಂದಿದೆ ಎಂದು ತಿಳಿದು ಸಂತೋಷವಾಯಿತು. ಕೆ.ಆರ್.ಪೇಟೆಯ ಕಸಬಾ, ಹಾಗೂ ಹೊಸಹೊಳಲು ಸಹಕಾರ ಸಂಘಗಳು ಕೂಡಾ ಉತ್ತಮವಾಗಿ ಕೆಲಸ ಮಾಡುತ್ತಿವೆ. ಇದರಿಂದಾಗಿ ಮೂರು ಸಂಘಗಳು ಅಭಿವೃದ್ದಿಯ ದಿಕ್ಕಿನಲ್ಲಿ ಸಾಗುತ್ತಿವೆ. ಸಹಕಾರ ಸಂಘಗಳು ಅಭಿವೃದ್ದಿಯನ್ನು ಹೊಂದಬೇಕು. ಹೆಗ್ಗಣಗಳು ಸೇರಿಕೊಂಡರೆ ಅಭಿವೃದ್ಧಿ ಕಷ್ಟ. ಮನ್‌ಮುಲ್ ಕೂಡಾ ಪ್ರಗತಿಯ ಹಾದಿಯಲ್ಲಿದೆ. ಪ್ರತಿ ದಿನ ರಾಜ್ಯದಲ್ಲಿ 1ಕೋಟಿ ಹಾಲು ಉತ್ಪಾದನೆ ಆಗುತ್ತಿದೆ. ಇಲ್ಲಿನ ಹಾಲನ್ನು ದೆಹಲಿಯಲ್ಲಿ ಮಾರಾಟ ಮಾಡಲು ಯೋಜನೆ ರೂಪಿಸಲಾಗಿದೆ. ಇದು ಯಶಸ್ವಿಯಾಗದರೆ ಹೈನುಗಾರಿಕೆ ನಿರತ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ.5ಲಕ್ಷದವರಿಗೆ ಶೂನ್ಯ ಬಡ್ಡಿ ಸಾಲ ನೀಡಲಾಗುತ್ತಿದೆ. 5ಲಕ್ಷದಿಂದ 15ಲಕ್ಷದವರಿಗೆ 3% ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದೇವೆ. ಇದು ರೈತಪರವಾದ ಆಡಳಿತವನ್ನು ನೀಡುತ್ತಿರುವ ಸರಕಾರ ಅಕದಕ್ಕಾಗಿಯೇ ವಿರೋಧ ಪಕ್ಷಗಳಿಗೆ ಭಯ ಬಂದಿರುವುದು ಎಂದು ಸಿದ್ದರಾಮಯ್ಯ ಛೇಡಿಸಿದರು.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಮಾತನಾಡಿ,ಒಂದು ಸಹಕಾರಿ ಸಂಸ್ಥೆ ಸುಮಾರು 50 ವರ್ಷಗಳ ಕಾಲ ಸೇವೆ ಸಲ್ಲಿಸಿರುವುದೆ ದೊಡ್ಡ ಸಾಧನೆ, ಈ ನಗರದಲ್ಲಿ 50 ರ ಹಿಂದೆಯೇ ಸ್ಥಾಪಿತವಾದ ಸಹಕಾರಿ ಸಂಸ್ಥೆಯು ತನ್ನ ಸ್ವಂತ ಹಣದಿಂದಲೇ ನಿವೇಶನವನ್ನು ಖರೀದಿಸಿ ಕೊಟ್ಟಿದ್ದ ಕೆಂಗೇಗೌಡರ ಸ್ಮರಣಾರ್ಥವಾಗಿ ಕಟ್ಟಡ ನಿರ್ಮಿಸಿರೋದು ಸಹಕಾರಿ ಸಂಸ್ಥೆಗಳು ಅವರಿಗೆ ನೀಡಿರುವ ಗೌರವ ಎಂದರು.
ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ ಎಂಬ ತತ್ವದ ಮೇಲೆ ಸಹಕಾರಿ ಸಂಸ್ಥೆಗಳು ಕಾರ್ಯ ನಿರ್ವಾಹಿಸುತ್ತವೆ,ರೈತರು ಆರ್ಥಿಕವಾಗಿ ಸದೃಢರಾಗಬೇಕು ರೈತರ ಬದುಕು ಸಮೃದ್ಧಗೊಳ್ಳಬೇಕು ಎಂಬ ಉದ್ದೇಶದಿಂದ ಸಹಕಾರಿ ಸಂಸ್ಥೆಗಳು ಪ್ರಾರಂಭಗೊಂಡವು ಎಂದು ತಿಳಿಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ,ರೈತರ ಬದುಕು ಹಸನಾಗಿಸುವುದು ಸಹಕಾರಿ ಕ್ಷೇತ್ರದ ಉದ್ದೇಶ. ಆದ್ದರಿಂದ ಸಹಕಾರವೂ ರೈತರ ಪರವಾಗಿಯೇ ಇರಬೇಕು ರೈತರಿಗೆ ಬೇಕಾಗುವ ಎಲ್ಲಾ ಅನುಕೂಲಗಳನ್ನು ಒದಗಿಸಿ ಕೊಡಬೇಕು ಎಂದು ತಿಳಿಸಿದರು.
ಸಹಕಾರಿ ಕ್ಷೇತ್ರ ಸರ್ಕಾರಿ ಕ್ಷೇತ್ರದ ಸಮಾನವಾಗಿ ಕಾರ್ಯನಿರ್ವಹಿಸುತ್ತಿದೆ, ದೈನಂದಿಕವಾಗಿ ಹೆಚ್ಚು ಸಾರ್ವಜನಿಕ ರೊಂದಿಗೆ ಸಂಪರ್ಕ ಹೊಂದಿರುವುದು ಸಹಕಾರಿ ಕ್ಷೇತ್ರ.ಸಹಕಾರ ಸಂಸ್ಥೆಗಳು ರಾಜಕೀಯದಿಂದ ದೂರ ಇರಬೇಕು. ಪಕ್ಷಾತೀತ,ಜಾತ್ಯಾತೀತವಾಗಿ ಕೆಲಸ ಮಾಡಬೇಕು ಎಂದರು.
ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ. ಪುರುಷೋತ್ತಮ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಟಿ. ಮಂಜು, ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಬಿ.ಪ್ರಕಾಶ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್. ದೇವರಾಜು,ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಉಪಾಧ್ಯಕ್ಷ ಅಶೋಕ್, ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಕಾಂಗ್ರೆಸ್ ಮುಖಂಡರಾದ ಎಂ.ಡಿ ಕೃಷ್ಣಮೂರ್ತಿ,ಜಿಲ್ಲಾ ಕುರುಬರಬಸಂಘದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಶಶಿಧರ್, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ವಿಶ್ವನಾಥ್, ತಾಲ್ಲೂಕು ಕಾಂಗ್ರೆಸ್ ಮುಖಂಡರಾದ ವಿಜಯ್ ರಾಮೇಗೌಡ, ಕೋಡಿಮಾರನಹಳ್ಳಿ ದೇವರಾಜು, ಅಗಸರಹಳ್ಳಿ ಗೋವಿಂದರಾಜು, ಎಂ.ಜೆ.ಶಶಿಧರ್, ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು, ಮೂಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್,ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ನಾಗಮಂಗಲ ಆರ್.ಟಿ.ಓ.ಮಲ್ಲಿಕಾರ್ಜುನ್, ತಹಸೀಲ್ದಾರ್ ಅಶೋಕ್, ತಾ.ಪಂ.ಇಓ ಸುಷ್ಮಾ, ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಭರತ್‌ಕುಮಾರ್, ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಹಿರೀಕಳಲೆ ಶೋಭಾಬಸವರಾಜು,ಸಂಘದ ಸಿಇಓ ಬಿ.ಎನ್.ಕಾಂತರಾಜು, ಸಂಘದ ಮೇಲ್ವಿಚಾರಕರಾದ ಆದಿಲ್‌ಪಾಷ, ರಾಘವೇಂದ್ರ, ಜಲೇಂದ್ರ, ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾದ ಕೆ.ಎನ್.ಕಾಳೇಗೌಡ, ಕೆ.ಎಸ್.ಚಂದ್ರು, ಜವರೇಗೌಡ, ಕೆ.ಟಿ.ಚಕ್ರಪಾಣಿ, ಚಂದ್ರಶೇಖರ್, ಸಿ.ಜೆ.ಮಂಜೇಗೌಡ, ಬಲರಾಮೇಗೌಡ, ರಾಜನಾಯಕ್, ರಾಜಯ್ಯ ಹಾಗೂ ಕೆ.ಆರ್.ರಘು,ಸಣ್ಣ ನಿಂಗೇಗೌಡ,ಶಾಮಣ್ಣ ಸೇರಿದಂತೆ ನೂರಾರು ಗಣ್ಯರು, ಸಾವಿರಾರು ಮಂದಿ ಸಾರ್ವಜನಿಕರು, ಮಹಿಳೆಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಮೈಸೂರು ಲ್ಯಾಂಪ್ಸ್ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು ಸ್ವಾಗತಿಸಿದರು.ಸಂಘದ ಸಿಇಓ ಬಿ.ಎನ್.ಕಾಂತರಾಜು ವಂದಿಸಿದರು.ಭವಾನಿ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.
ಶಾಸಕ ಹೆಚ್.ಟಿ.ಮಂಜು ಮಾತನಾಡಿ,ನಮ್ಮ ತಾಲ್ಲೂಕಿನಲ್ಲಿ ಇತ್ತೀಚೆಗೆ ಕುಂಭದ್ರೋಣ ಮಳೆಯಿಂದ ರಸ್ತೆಗಳು ಮಂಡಿಯುದ್ದ ಗುಂಡಿ ಬಿದ್ದಿವೆ.ಸೇತುವೆಗಳು,ಕೆರೆಕಟ್ಟೆಗಳು ಶಿಥಿಲಗೊಂಡಿಗೆ ಹಾಗಾಗಿ ಕೂಡಲೆ ಅಗತ್ಯ ಅನುಧಾ ನಕೊಡಬೇಕು. ಜಿಲ್ಲೆಯ ಏಕೈಕ ಜೆಡಿಎಸ್ ಶಾಸಕ ಎಂದು ಕಡೆಗಣಿಸಬಾರದು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಪಡಿತರ ಚೀಟಿ ಬಡವರಿಗೆ ಮಾತ್ರ ಸಿಗಬೇಕು.ಅರ್ಹರಲ್ಲದವರಿಗೆ ಬಿಪಿಎಲ್ ಕಾರ್ಡ್ ಸಿಗಬಾರದು.ಶ್ರೀಮಂತರಿಗೆ,ಟ್ಯಾಕ್ಸ್ ಕಟ್ಟುವವರಿಗೆ ಇರುವ ಬಿಪಿಎಲ್ ಕಾರ್ಡ್ ಇದ್ದರೆ ವಾಪಸ್ ಪಡೆಯುವಂತೆ ಮಾತ್ರ ಆದೇಶ ನೀಡಲಾಗಿದೆ. ಬಡವರ ಕಾರ್ಡ್ ಕೀಳುತ್ತಿಲ್ಲ. 1ಕೋಟಿ 20ಲಕ್ಷ ಮಹಿಳೆಯರಿಗೆ ಗೃಹ ಲಕ್ಷ್ಮೀ ಯೋಜನೆ ಜಾರಿ ಮಾಡಿ, ಕುಟುಂಬದ ಮುಖ್ಯಸ್ಥ ಮಹಿಳೆಗೆ ತಲಾ 2ಸಾವಿರ ರೂ ನೀಡಲಾಗುತ್ತಿದೆ. ವರ್ಷಕ್ಕೆ ಸುಮಾರು 60ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ 7ಕೆಜಿ ಉಚಿತವಾಗಿ ನೀಡಿದ್ದೆ. ನಂತರ ಬಂದ ಬಿಜೆಪಿಯವರು 5ಕೆಜಿಗೆ ಇಳಿಸಿದರು.ಮತ್ತೆ ನಾವು ಅಧಿಕಾರಕ್ಕೆ ಬಂದಿದ್ದೇವೆ ಮತ್ತೆ 10ಕೆಜಿ ಅಕ್ಕಿ ನೀಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
——-—ಶ್ರೀನಿವಾಸ್ ಕೆ.ಆರ್ ಪೇಟೆ