ಕೆ.ಆರ್.ಪೇಟೆ,ಮೇ.19: ತಾಲೂಕಿನ ಕತ್ತರಘಟ್ಟ ಗ್ರಾಮದ ಹುಲ್ಲಿನ ಮೆದೆಯಲ್ಲಿ ದಲಿತ ಯುವಕನ ಜೀವಂತ ದಹನ ಪ್ರಕರಣವು ಮಹತ್ತರ ತಿರುವು ಪಡೆದುಕೊಂಡಿದ್ದು, ಜಮೀನಿನ ವ್ಯಾಜ್ಯದ ಹಿನ್ನೆಲೆಯಲ್ಲಿ ಸವರ್ಣೀಯ ಯುವಕನೊಬ್ಬನ ಬೆದರಿಕೆಯ ಹಿನ್ನೆಲೆಯಲ್ಲಿ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬೆದರಿಕೆ ಹಾಕಿದ್ದ ಸವರ್ಣೀಯ ಯುವಕನ ವಿರುದ್ದ ಜಾತಿ ನಿಂದನೆ ಹಾಗೂ ಆತ್ಮಹತ್ಯೆ ಪ್ರಚೋದನೆ ಅನ್ವಯ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಕತ್ತರಘಟ್ಟ ಗ್ರಾಮದಲ್ಲಿರುವ ದಲಿತ ಯುವಕ ಜಯಕುಮಾರ್ ಅವರಿಗೆ ಜಮೀನಿನಲ್ಲಿ ಸವರ್ಣೀಯ ವ್ಯಕ್ತಿ ಅನಿಲ್‌ಕುಮಾರ್ ಎಂಬಾತ ಹುಲ್ಲಿನ ಮೆದೆಯನ್ನು ಹಾಕಿಕೊಂಡು ಬೇಸಾಯ ಮಾಡಲು ಹಲವು ದಿನಗಳಿಂದ ತೊಂದರೆ ನೀಡುತ್ತಿದ್ದನು. ಈ ವಿಚಾರವಾಗಿ ಮೇ.15ರಂದು ದಲಿತ ಯುವಕ ಜಯಕುಮಾರ್ ಮತ್ತು ಸವರ್ಣೀಯ ವ್ಯಕ್ತಿ ಅನಿಲ್‌ಕುಮಾರ್ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ಪರಸ್ಪರ ಗಲಾಟೆ ಗದ್ದಲ ನಡೆದಿದ್ದು ನಾನು ಹುಲ್ಲಿನ ಮೆದೆಯನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಲ್ಲ, ಮೆದೆಗೆ ಬೆಂಕಿ ಹಾಕ್ತಿನಿ ನೀನು ಬೆಂಕಿಯೊಳಗೆ ಬಿದ್ದು ಸಾಯಿ, ಇಲ್ಲದಿದ್ದರೆ ನಾನೇ ಬೆಂಕಿಯೊಳಗೆ ನೂಕಿ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದನು. ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಆದರೆ ಮೇ.17ರಂದು ಶನಿವಾರ ಮಧ್ಯಾಹ್ನ 3ಗಂಟೆ ಸಮಯಲ್ಲಿ ಅನಿಲ್‌ಕುಮಾರ್ ಶವವು ಹುಲ್ಲಿನ ಮೆದೆಗೆ ಹೊತ್ತಿಕೊಂಡಿದ್ದ ಬೆಂಕಿಯಲ್ಲಿ ಬೆಂದು ಹೋದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಶವಪತ್ತೆಯಾದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಗ್ರಾಮಾಂತರ ಪೋಲೀಸರಿಗೆ ಮೃತ ಜಯಕುಮಾರ್ ಪತ್ನಿ ಲಕ್ಷ್ಮಿ ದೂರು ನೀಡಿ, ನನ್ನ ಪತಿಯ ಸಾವಿಗೆ ಅನಿಲ್‌ಕುಮಾರ್ ಎಂಬಾತನ ಪ್ರಚೋದನೆ ಮತ್ತು ಬೆದರಿಕೆಯೇ ಮೂಲ ಕಾರಣವಾಗಿದೆ.
ಘಟನೆ ನಡೆದ ಬಳಿಕ ಆರೋಪಿ ಅನಿಲ್‌ಕುಮಾರ್ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

ಸ್ಥಳಕ್ಕೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ತಹಸೀಲ್ದಾರ್ ಡಾ.ಅಶೋಕ್, ನಾಗಮಂಗಲ ಡಿವೈಎಸ್‌ಪಿ ಚಲುವರಾಜು, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಡಾ.ದಿವಾಕರ್, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಆನಂದೇಗೌಡ ಮತ್ತಿತರರು ಬೇಟಿ ನೀಡಿ ಪರಿಶೀಲನೆ ನಡೆದ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ಹಾಸನ-ಮಂಡ್ಯ ಜಿಲ್ಲಾ ಉಸ್ತುವಾರಿ ಮಾಂಬಳ್ಳಿ ಜಯರಾಂ, ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜ್, ದಲಿತ ಮುಖಂಡರಾದ ಲಕ್ಷ್ಮೀಪುರ ರಂಗಸ್ವಾಮಿ, ಕತ್ತರಘಟ್ಟ ರಾಜೇಶ್, ತೆಂಡೇಕೆರೆ ನಿಂಗಯ್ಯ, ಬಂಡಿಹೊಳೆ ರಮೇಶ್, ಹೊಸಹೊಳಲು ಕುಮಾರ್, ಆಲೇನಹಳ್ಳಿ ಚೆಲುವರಾಜು, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಆನಂದೇಗೌಡ ಇತರರು ಮೃತ ಜಯಕುಮಾರ್ ಪತ್ನಿಗೆ ಸಾಂತ್ವನ ಹೇಳಿದರು.
ಪೊಲೀಸ್ ಭದ್ರತೆಯಲ್ಲಿ ಇಂದು ಸಂಜೆ ಕತ್ತರಘಟ್ಟ ಗ್ರಾಮದಲ್ಲಿ ಮೃತ ಜಯಕುಮಾರ್ ಅಂತ್ಯಸಂಸ್ಕಾರವು ನಡೆಯಿತು.
- ಶ್ರೀನಿವಾಸ್ ಆರ್.