ಕೆ.ಆರ್.ಪೇಟೆ,ಮೇ.24: ಜಮೀನಿನ ಬಳಿ ಮೇಯುತ್ತಿದ್ದ ಹಸುವಿನ ಮೇಲೆ ಚಿರತೆಯು ದಾಳಿ ನಡೆಸಿ ತಿಂದು ಹಾಕಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಗ್ರಹಾರಬಾಚಹಳ್ಳಿ ಗ್ರಾಮದ ಕೃಷ್ಣೇಗೌಡ ಎಂಬುವವರಿಗೆ ಸೇರಿದ ಸುಮಾರು 50ಸಾವಿರ ಬೆಲೆ ಬಾಳುವ ಹಸುವನ್ನು ಚಿರತೆಯು ಶುಕ್ರವಾರ ಸಂಜೆ ದಾಳಿ ಮಾಡಿ ಕೊಂದು ಭಾಗಶಃ ತಿಂದು ಪರಾರಿಯಾಗಿದೆ. ಖಾಸಗಿ ಫೈನಾನ್ಸ್ ನಲ್ಲಿ ಸಾಲ ಮಾಡಿ ಹಸುವನ್ನು ಖರೀದಿ ಮಾಡಿದ್ದ ಕೃಷ್ಣೇಗೌಡ ಅವರಿಗೆ ಸಾಲ ತೀರಿಸುವ ದಾರಿ ಇಲ್ಲದೇ ಕಂಗಾಲಾಗಿದ್ದಾರೆ.

ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್ ಇತ್ತೀಚಿನ ದಿನಗಳಲ್ಲಿ ಚಿರತೆಗಳು ಕಾಡನ್ನು ಬಿಟ್ಟು ರೈತರ ಜಮೀನಿನ ಕಡೆ ಬರುತ್ತಿವೆ. ಇದರಿಂದ ರೈತರು ಸಾಕುವ ಪ್ರಾಣಿಗಳಾದ ಹಸು, ಎಮ್ಮೆ, ಮೇಕೆ, ಕುರಿ, ನಾಯಿಗಳನ್ನು ತಿಂದು ಹಾಕುತ್ತಿರುವ ಪ್ರಕರಣಗಳು ನಿತ್ಯ ಒಂದಲ್ಲ ಒಂದು ಕಡೆ ವರದಿಯಾಗುತ್ತಿವೆ. ಇದರಿಂದ ರೈತರು ತಮ್ಮ ಹೊಲ ಗದ್ದೆಗಳ ಬಳಿಗೆ ಹೋಗುವುದಕ್ಕೂ ಭಯಪಡುತ್ತಿದ್ದಾರೆ. ಹಾಗಾಗಿ ಸಂಬAಧಪಟ್ಟ ಅರಣ್ಯ ಅಧಿಕಾರಿಗಳು ಬೋನನ್ನು ಇಟ್ಟು ಚಿರತೆಯನ್ನು ಸೆರೆ ಹಿಡಿಯಬೇಕೆಂದು ಮನವಿ ಮಾಡಿದರು.
ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳಾದ ತಾಲ್ಲೂಕು ಅರಣ್ಯಾಧಿಕಾರಿ ಅನಿತಾ, ಪ್ರಸಾಂತ್, ತಾಲ್ಲೂಕು ಪಶು ವೈದ್ಯಾಧಿಕಾರಿಗಳಾದ ಡಾ.ದೇವರಾಜ್, ಗ್ರಾಮಸ್ಥರಾದ ಉದ್ದಾನಿ ಮಹದೇವೇಗೌಡ, ಎ.ಸಿ.ಅಭಿ, ನಿಶಾಂತ್, ಪ್ರಮೋದ್, ಪ್ರತಾಪ್, ರಾಜೇಗೌಡ, ಪ್ರತಾಪ್ ಮತ್ತಿತರರು ಉಪಸ್ಥಿತರಿದ್ದರು.
- ಶ್ರೀನಿವಾಸ್ ಆರ್.