ಕೆ.ಆರ್.ಪೇಟೆ-ಪಕ್ಷದ ಹಿತದೃಷ್ಟಿಯಿಂದ ಕಾರ್ಯಕರ್ತರ ಒಳಿತಿಗಾಗಿ ನಾನು ಮನ್ಮುಲ್ ನಿರ್ದೇಶಕರ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ದಿಸುವುದಾಗಿ ಶಾಸಕ ಹೆಚ್ ಟಿ ಮಂಜು ಘೋಷಣೆ ಮಾಡಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಬಸವೇಶ್ವರನಗರದಲ್ಲಿರುವ ತಾಲ್ಲೂಕು ಜೆಡಿಎಸ್ ಕಚೇರಿಯಲ್ಲಿ ಮನ್‌ಮುಲ್ ಚುನಾವಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ತಾಲ್ಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ನನಗೆ ಶಾಸಕ ಸ್ಥಾನ ಅತ್ಯಂತ ಶ್ರೇಷ್ಠ ಹುದ್ದೆಯಾಗಿದೆ.ಮನ್‌ಮುಲ್ ನಿರ್ದೇಶಕ ಸ್ಥಾನ ಶಾಸಕ ಸ್ಥಾನಕ್ಕಿಂತ ದೊಡ್ಡದಲ್ಲ.ಆದರೆ ಪಕ್ಷದ ಅಸ್ಥಿತ್ವಕ್ಕಾಗಿ ನನ್ನ ಸ್ಪರ್ಧೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ನನಗೆ ಪಕ್ಷ ಕಟ್ಟುವ ಶಕ್ತಿಯೂ ಇದೆ.ಉಳಿಸಿಕೊಳ್ಳುವ ಶಕ್ತಿಯೂ ಇದೆ.ನನ್ನ ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಆ ಶಕ್ತಿಯನ್ನು ನನಗೆ ತುಂಬಿದ್ದಾರೆ.ಪಕ್ಷವು ನನ್ನನ್ನು ಗುರುತಿಸಿ ಪವಿತ್ರವಾದ ಶಾಸಕ ಸ್ಥಾನ ನೀಡಿದೆ.ನಮ್ಮ ಜೆಡಿಎಸ್ ವರಿಷ್ಠರ ಹಾಗೂ ತಾಲೂಕಿನ ಜೆಡಿಎಸ್ ಪಕ್ಷದ ಕಾರ್ಯಕರ್ತರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ನಾನು ಜೆಡಿಎಸ್ ಪಕ್ಷವನ್ನು ಪ್ರಾಮಾಣಿಕವಾಗಿ ಸಂಘಟಿಸಿ ಉಳಿಸಿ ಬೆಳೆಸುವ ಕೆಲಸವನ್ನು ಮಾಡುತ್ತೇನೆ ಎಂದರು.
ಪ್ರಥಮ ಬಾರಿಗೆ ಬಹಿರಂಗವಾಗಿ ಡಾಲು ರವಿ ಮತ್ತು ತಮ್ಮ ನಡುವಿನ ಮುಸುಕಿನ ಗುದ್ದಾಟದ ಬಗ್ಗೆ ಮಾತನಾಡಿದ ಶಾಸಕರು,ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮನ್‌ಮುಲ್ ನಿರ್ದೇಶಕ ಡಾಲು ರವಿ ಜೆಡಿಎಸ್ ಸೇರಿದ ಸಂದರ್ಭದಲ್ಲಿ ಮುಂದಿನ ಮನ್‌ಮುಲ್ ಚುನಾವಣೆಗೆ ಡಾಲು ರವಿಯವರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ವರಿಷ್ಠರಲ್ಲಿ ಮನವಿ ಮಾಡಿದ್ದೆ.ಜೊತೆಗೆ ಮನ್‌ಮುಲ್ ಅಧ್ಯಕ್ಷ ಸ್ಥಾನಕ್ಕೆ ರಾಮಚಂದ್ರ ರಾಜೀನಾಮೆ ನೀಡಿದ ಸಂದರ್ಭದಲ್ಲೂ ಡಾಲು ರವಿಯವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರ ಬಳಿ ಬೇಡಿಕೆ ಇಟ್ಟಿದ್ದೆ.ಆದರೆ ನೆರವೇರಲಿಲ್ಲ.ಆದರೂ ಜೆಡಿಎಸ್ ಪಕ್ಷದಲ್ಲಿದ್ದುಕೊಂಡು ಡಾಲು ರವಿಯವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮನ್‌ಮುಲ್ ಚುನಾವಣೆಯಲ್ಲಿ ಮತ ಚಲಾಯಿಸಿದರು ಎಂದರು.
ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗೆ ಸಹಕಾರ ನೀಡಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕಾಗಿ ಇದ್ಯಾವುದನ್ನು ಪರಿಗಣಿಸದೆ ನಾನು ಡಾಲು ರವಿಯರನ್ನು ಜೊತೆಯಲ್ಲಿ ಕರೆದುಕೊಂಡು ಪಕ್ಷದ ಚಟುವಟಿಕೆಗಳು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೂ ಸಕ್ರಿಯವಾಗಿ ಭಾಗವಹಿಸುತ್ತಿದ್ದೆನು.ರವಿ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯವಾಗಲಿ,ಯಾವುದೇ ಗಲಾಟೆ ಗದ್ದಲಗಳು ನಡೆದಿಲ್ಲ.ಆದರೂ ಸಹ ಡಾಲು ರವಿ ಬೇರೆಯವರ ಎದುರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿಕೊಂಡು ನನ್ನ ಬಗ್ಗೆ ಅವಾಚ್ಯ ಶಬ್ದ ಬಳಸಿ ನನ್ನ ವಿರುದ್ಧ ಮಾತನಾಡಿದಾಗ ಅನಿವಾರ್ಯವಾಗಿ ಅವರ ಸಂಪರ್ಕ ಕಡಿತಗೊಂಡಿತು ಎಂದು ಕಿಡಿಕಾರಿದರು.
ಇನ್ನು ಎರಡನೇ ಅಭ್ಯರ್ಥಿಯನ್ನಾಗಿ ಮನ್‌ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ರವರನ್ನು ಆಯ್ಕೆ ಮಾಡಲಾಗಿತ್ತು. ಒಂದು ವಾರ ಸಮಯ ಕೇಳಿ ಹೋದ ಹರೀಶ್ ಎರಡು ತಿಂಗಳಾದರೂ ನನ್ನ ಹತ್ತಿರಕ್ಕೆ ಸುಳಿಯಲಿಲ್ಲ. ಇವರೆಲ್ಲರೂ ಯಾರ ಸಂಪರ್ಕದಲ್ಲಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದ ಶಾಸಕರು ಈ ಎಲ್ಲಾ ಬೆಳವಣಿಗೆಗಳಿಗೆ ಮನನೊಂದು ಅಂತಿಮವಾಗಿ ಮನ್‌ಮುಲ್ ಚುನಾವಣೆಗೆ ಮತ್ತೊಮ್ಮೆ ಸ್ಪರ್ಧೆ ಮಾಡುವ ಈ ತೀರ್ಮಾನಕ್ಕೆ ಬಂದಿದ್ದೇನೆ.
ಮತ್ತೊಬ್ಬ ಅಭ್ಯರ್ಥಿಯನ್ನಾಗಿ ಜೆಡಿಎಸ್ ಕಟ್ಟಾ ಕಾರ್ಯಕರ್ತ ನಾಟನಹಳ್ಳಿ ಬೋರ್‌ವೆಲ್ ಮಹೇಶ್ ಅವರನ್ನು ಸ್ಪರ್ಧಿಸಲು ಕಾರ್ಯಕರ್ತರ ಒತ್ತಾಯದ ಮೇರೆಗೆ ಆಯ್ಕೆ ಮಾಡಲಾಗಿದೆ.
ನನ್ನ ವಿರುದ್ಧ ಆರೋಪಗಳು, ಟೀಕೆಗಳು ಕೇಳಿ ಬಂದಿವೆ.ನಾನು ಎಲ್ಲಾ ಹಂತವನ್ನು ದಾಟಿಕೊಂಡೆ ಬಂದಿದ್ದೇನೆ. ಒಬ್ಬ ಸಾಮಾನ್ಯ ರೈತನ ಮಗನಾಗಿ ಹೋರಾಟದ ಜೀವನದಲ್ಲಿ ಇಂದು ಶಾಸಕ ಸ್ಥಾನವನ್ನು ಪಡೆದುಕೊಂಡಿದ್ದೇನೆ.ಇದನ್ನು ನನ್ನ ಟೀಕಾಕಾರ ವಿರೋಧಿಗಳು ತಿಳಿದುಕೊಳ್ಳಬೇಕು ಎಂದು ತಮ್ಮ ವಿರೋಧಿಗಳಿಗೆ ಶಾಸಕ ಹೆಚ್.ಟಿ.ಮಂಜು ಪರೋಕ್ಷವಾಗಿ ಟಾಂಗ್ ನೀಡಿದರು.
ಸಭೆಯಲ್ಲಿ ಸೇರಿದ್ದ ಮುಖಂಡರು ಕಾರ್ಯಕರ್ತರು ಶಾಸಕರನ್ನು ನೀವೇ ಅಭ್ಯರ್ಥಿಯಾಗಬೇಕೆಂದು ಒತ್ತಡ ಹಾಕಿದರು.ಈ ವೇಳೆ ಮಾತನಾಡಿದ ಶಾಸಕರು ನಾನೇ ಅಭ್ಯರ್ಥಿಯಾಗಬೇಕೆಂಬ ಆಸೆ ನನಗಿಲ್ಲ.ನಮ್ಮ ಕಾರ್ಯಕರ್ತರು ಯಾರೇ ಸ್ಪರ್ಧೆ ಮಾಡಿದರು ನಾನೇ ಅಭ್ಯರ್ಥಿ ಎಂಬ ರೀತಿಯಲ್ಲಿ ತನು, ಮನ, ಧನದೊಂದಿಗೆ ಅವರ ಗೆಲುವಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಸಭೆಯಲ್ಲಿದ್ದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಂತಿಮವಾಗಿ ಶಾಸಕ ಹೆಚ್.ಟಿ.ಮಂಜು ಹಾಗು ನಾಟನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬೋರ್‌ವೆಲ್ ಮಹೇಶ್ ರವರನ್ನು ಮನ್‌ಮುಲ್ ಚುನಾವಣೆಯ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಲಾಯಿತು.
ಮನ್‌ಮುಲ್ ನಿರ್ದೇಶಕರಾದ ಡಾಲು ರವಿ ಅವರು ನಮ್ಮ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿಲ್ಲ. ಅಥವಾ ಯಾವುದೇ ಪದಾಧಿಕಾರಿ ಹುದ್ದೆಯಲ್ಲಿಲ್ಲ ಹಾಗಾಗಿ ಅವರನ್ನು ಉಚ್ಚಾಟನೆ ಮಾಡುವುದಾದರೂ ಹೇಗೆ ಎಂದು ಜೆಡಿಎಸ್ ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸಿ ಸಮಜಾಯಿಸಿ ನೀಡಿದರು.
ಸಭೆಯಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ಜಿಲ್ಲಾ ಉಪಾಧ್ಯಕ್ಷ ನಾಗೇಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಮಾಜಿ ತಾ.ಪಂ.ಸದಸ್ಯರಾದ ಎ.ಎಂ.ಸAಜೀವಪ್ಪ, ಮಲ್ಲೇನಹಳ್ಳಿ ಮೋಹನ್, ಮೆಣಸ ವಿ.ಎನ್.ಮಹಾದೇವೇಗೌಡ, ತೋಟಪ್ಪಶೆಟ್ಟಿ, ತಾಲ್ಲೂಕು ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ವಿಎಸ್.ಧನಂಜಯಕುಮಾರ್, ಜಿಲ್ಲಾ ದಿಶಾ ಸಮಿತಿ ಸದಸ್ಯ ನರಸನಾಯಕ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಬಿ.ವಿ.ನಾಗೇಶ್, ತಾಲ್ಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ, ಹೋಬಳಿ ಜೆಡಿಎಸ್ ಅಧ್ಯಕ್ಷರುಗಳಾದ ಕಸಬಾ ಹೋಬಳಿ ಅಧ್ಯಕ್ಷ ವಸಂತಕುಮಾರ್, ಅಕ್ಕಿಹೆಬ್ಬಾಳು ಬಸವಲಿಂಗಪ್ಪ, ಸ್ವಾಮೀಗೌಡ, ಬಲ್ಲೇನಹಳ್ಳಿ ನಂದೀಶ್, ಆನೆಗೊಳ ಕೃಷ್ಣೇಗೌಡ, ಸಂತೇಬಾಚಹಳ್ಳಿ ರವಿಕುಮಾರ್, ವಿಎಸ್.ಧನಂಜಯಕುಮಾರ್, ರವಿ, ಸ್ವಾಮಿಗೌಡ, ಜೆಡಿಎಸ್ ಮುಖಂಡರಾದ ಹೆಳವೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಬೊಮ್ಮೇನಹಳ್ಳಿ ಮಂಜುನಾಥ್, ಸೇರಿದಂತೆ ಹಲವಾರು ಮುಖಂಡರು ಕಾರ್ಯಕರ್ತರು ಹಾಜರಿದ್ದರು.
———————ಶ್ರೀನಿವಾಸ್ ಕೆ.ಆರ್ ಪೇಟೆ