ಕೆ.ಆರ್.ಪೇಟೆ-ರೈತರು ಹಣದ ಆಸೆಗೆ ಒಳಗಾಗಿ ತಮ್ಮ ಭೂಮಿಯನ್ನು ಕಳೆದುಕೊಳ್ಳಬಾರದು-ಶಾಸಕ ದರ್ಶನ್ ಪುಟ್ಟಣ್ಣಯ್ಯ ಮನವಿ

ಕೆ.ಆರ್.ಪೇಟೆ-ರಾಜ್ಯದ ರೈತರ ಬದುಕನ್ನು ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ನ್ಯಾಯಮೂರ್ತಿ ಸ್ವಾಮೀನಾಥನ್ ವರದಿಯನ್ನು ಜಾರಿಗೆ ತರುವಂತೆ ರೈತ ಮುಖಂಡ ಹಾಗೂ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಗ್ರಹಿಸಿದರು.

ಅವರು ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಆನೆಗೊಳ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆನೆಗೊಳ, ಚಿಕ್ಕತಾರಳ್ಳಿ, ದೊಡ್ಡತಾರಹಳ್ಳಿ ಹಾಗೂ ಅಂಚೆಬೀರನಹಳ್ಳಿಯ ರೈತ ಸಂಘದ ಗ್ರಾಮ ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಸಧೃಡವಾಗಬೇಕಾದರೆ ಮೊದಲು ರೈತರು ಅರ್ಥಿಕವಾಗಿ ಸಭಲರಾಗಬೇಕು. ರೈತರು ಆರ್ಥಿಕವಾಗಿ ಸಭಲರಾಗಬೇಕಾದರೆ ಅವರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿಯಾಗಬೇಕು. ಇದಕ್ಕಾಗಿ ಸ್ವಾಮೀನಾಥನ್ ಆಯೋಗದ ವರದಿ ಜಾರಿಗಾಗಿ ರಾಜ್ಯ ಮಟ್ಟದಲ್ಲಿ ದೊಡ್ಡ ಹೋರಾಟ ಆಗಬೇಕಾಗಿದೆ. ಯಾರೋ ಹೊರಗಿನಿಂದ ಬಂದು ನಮ್ಮ ಗ್ರಾಮಗಳನ್ನು ಸರಿಪಡಿಸಬೇಕಾಗಿಲ್ಲ. ಗ್ರಾಮದ ಯುವಕರೇ ಸಂಘಟಿತರಾಗಿ ಹೋರಾಟ ಮಾಡಬೇಕು. ಯುವಕರು ರಾಜಕೀಯ ಬಿಟ್ಟು ರೈತಸಂಘ ಸೇರಬೇಕು. ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ದರ್ಶನ್ ಪುಟ್ಟಣ್ಣಯ್ಯ ಕರೆ ನೀಡಿದರು.

ಆನೆಗೊಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಆನೆಗೊಳ, ಚಿಕ್ಕತಾರಳ್ಳಿ, ದೊಡ್ಡತಾರಹಳ್ಳಿ, ಸ ಅಂಚೆಬೀರನಹಳ್ಳಿ ಮುಂತಾದ ಗ್ರಾಮಗಳ 92 ಜನರನ್ನು ಹಸಿರು ಟವಲ್ ಹಾಕಿ ರೈತ ಹೋರಾಟದ ದೀಕ್ಷೆ ನೀಡುವ ಮೂಲಕ ರೈತ ಸಂಘಕ್ಕೆ ದರ್ಶನ್ ಪುಟ್ಟಣ್ಣಯ್ಯ ಬರಮಾಡಿಕೊಂಡರು.

ರೈತಸಂಘ ಕೇವಲ ಹೋರಾಟದ ಸಂಘಟನೆಯಲ್ಲ. ರೈತರ ಬದುಕಿನ ಬದಲಾವಣೆಯ ಬಗ್ಗೆ ಚಿಂತಿಸುವ ಸಂಘಟನೆ. ಸಂಘಟನೆಯ ಮೂಲಕ ನಮ್ಮ ಜೀವನವನ್ನು ನಾವು ಬದಲಿಸಿಕೊಳ್ಳಬೇಕು. ರೈತಸಂಘ ಆರಂಭವಾದಾಗ ಇದ್ದ ರೈತರ ಸಮಸ್ಯೆಗಳಿಗೂ ಇಂದಿನ ಸಮಸ್ಯೆಗಳಿಗೂ ಸಾಕಷ್ಠು ವ್ಯತ್ಯಾಸವಿದೆ. ಜಾಗತೀಕರಣದ ನೀತಿಗಳ ಒತ್ತಡಕ್ಕೆ ರೈತರ ಬದುಕು ಸಿಲುಕಿದೆ. ಆಧುನಿಕ ಸಮಸ್ಯೆಗಳಿಗೆ ತಕ್ಕಂತೆ ರೈತಸಂಘದ ಹೋರಾಟವೂ ಬದಲಾಗಬೇಕಾಗಿದೆ. ರೈತರು ತಮ್ಮ ಕೃಷಿ ಪದ್ದತಿಯಲ್ಲಿಯೂ ಬದಲಾವಣೆ ಮಾಡಿಕೊಳ್ಳಬೇಕು. ಉಳುವವನಿಗೆ ಭೂಮಿ ಎನ್ನುವ ಕಾಯ್ದೆ ರದ್ದಾಗಿದ್ದು ಈಗ ಉಳ್ಳವರಿಗೆ ಭೂಮಿ ಎನ್ನುವ ನೀತಿ ಜಾರಿಯಾಗಿದೆ. ರೈತರು ಯಾವುದೇ ಕಾರಣಕ್ಕೂ ಹಣದ ಆಸೆಗೆ ಒಳಗಾಗಿ ತಮ್ಮ ಭೂಮಿಯನ್ನು ಕಳೆದುಕೊಳ್ಳಬಾರದು ಎಂದು ದರ್ಶನ್ ಪುಟ್ಟಣ್ಣಯ್ಯ ಮನವಿ ಮಾಡಿದರು.

ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ದೇಶದ ಮಾಲೀಕರು ರೈತರು. ನಾವು ಬೆಳೆಯುವ ಅನ್ನದಿಂದಲೇ ಎಲ್ಲರ ಬದುಕು ನಡೆಯುತ್ತಿದೆ. ಆದರೆ ರೈತರು ತಮ್ಮನ್ನು ತಾವು ದೊಡ್ಡವರೆಂದುಕೊಳ್ಳುವ ಬದಲು, ರಾಜಕಾರಣಿಗಳು, ಅಧಿಕಾರಿಗಳು ಮತ್ತು ಹಣವುಳ್ಳವರನ್ನು ದೊಡ್ಡವರೆಂದು ಬಿಂಬಿಸಲಾಗುತ್ತಿದೆ. ಇದು ಬದಲಾಗಬೇಕು. ಇಂದಿನ ರಾಜಕೀಯ ಸಂಸ್ಕೃತಿ ರೈತರಿಗೆ ವಿರುದ್ದವಾಗಿದೆ. ಇದಕ್ಕೆ ಕಾರಣ ಯುವಕರಿಗೆ ಮೌಲ್ಯಗಳಿಗಿಂತ ಇತರ ವಿಚಾರಗಳ ಬಗ್ಗೆ ಆಸಕ್ತಿ ಹೆಚ್ಚುತ್ತಿರುವುದು. ರೈತನಿಗೆ ಜಾತಿ, ಧರ್ಮವಿಲ್ಲ. ಉಳುವವರೆಲ್ಲರೂ ರೈತ ಕುಲಕ್ಕೆ ಸೇರಿದವರು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ದೇಶದ ಎಲ್ಲಾ ರಾಜಕೀಯ ಪಕ್ಷಗಳೂ ರೈತ ಸಮುದಾಯಕ್ಕೆ ವಿರುದ್ದವಾಗಿವೆ. ಕಾರ್ಪೋರೇಟ್ ಸಂಸ್ಥೆಗಳ 4ಲಕ್ಷ ಕೋಟಿ ಸಾಲಮನ್ನಾ ಮಡಲಾಗಿದೆ. ಆದರೆ ರೈತರ ಸಾಲಮನ್ನಾ ಮಾಡಲು ನಮ್ಮ ಸರ್ಕಾರಗಳಿಗೆ ಮನಸ್ಸಿಲ್ಲ. ಕರ್ನಾಟಕದಲ್ಲಿ 79ಲಕ್ಷ ರೈತ ಕುಟುಂಬಗಳಿವೆ. ರೈತಕುಟುಂಬದ ಪ್ರತಿಯೊಬ್ಬ ವ್ಯಕ್ತಿಯೂ ರೈತಸಂಘ ಸೇರಬೇಕು. ರೈತರು ಒಗ್ಗಟ್ಟಾದರೆ ಪಾರ್ಲಿಮೆಂಟ್, ವಿದಾನಸೌಧ ರೈತರ ಆಳ್ವಿಕೆಗೆ ಬರುತ್ತದೆ. ರೈತರೇ ದೇಶದ ಪ್ರಭುವಾದರೆ ನಮಗೆ ಬೇಕಾದ ರೈತ ನೀತಿಗಳನ್ನು ರೂಪಿಸಿ ರೈತರೇ ದೇಶದ ನಿಜವಾದ ಯಜಮಾನರಾಗಬಹುದು ಎಂದರು.

ಶಿಕ್ಷಣ ಇಲಾಖೆಯ ನಿವೃತ್ತ ಮುಖ್ಯೋಪಾಧ್ಯಾಯ ಆನೆಗೊಳ ರಾಮೇಗೌಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ರೈತಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಮುಖಂಡರಾದ ಕೆ.ಆರ್.ಜಯರಾಮ್, ಎಲ್.ಬಿ.ಜಗದೀಶ್, ನಂದಿನಿ ಜಯರಾಂ, ಬೂಕನಕೆರೆ ನಾಗರಾಜು, ಮಿಲ್ ರಾಜಣ್ಣ, ಮಾಕವಳ್ಳಿ ರವಿ, ಚೌಡೇನಹಳ್ಳಿ ಲತಾ, ಎ.ಆರ್.ಪುಟ್ಟರಾಜು, ಎನ್.ರಂಗಪ್ಪ, ಗದ್ದೆಹೊಸೂರು ಜಗದೀಶ್, ಎ.ಎನ್.ಚಾಮರಾ ಜೇಗೌಡ, ಕೆ.ಎನ್.ಮಂಜುನಾಥ್, ಎ.ಜಿ.ಮಂಜೇಗೌಡ, ಹಾಸನ ಜಿಲ್ಲಾ ರೈತಸಂಘದ ಅಧ್ಯಕ್ಷ ರಘು, ಕಾರ್ಯದರ್ಶಿ ಹರೀಶ್, ಕಾಮಾಕ್ಷಮ್ಮ ಸೇರಿದಂತೆ ಹಲವರು ನೂರಾರು ಮಂದಿ ಗ್ರಾಮ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು.

—————--ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?