ಕೆ.ಆರ್.ಪೇಟೆ- ಕತ್ತರಘಟ್ಟ ಗ್ರಾಮದಲ್ಲಿ ದಲಿತ ಯುವಕನನ್ನು ಜೀವಂತ ದಹಿಸಿ ಹತ್ಯೆ ಮಾಡಿದ ಘಟನೆಯನ್ನು ಎಸ್.ಐ.ಟಿ ತನಿಖೆಗೆ ಆಗ್ರಹ- ಮೇ.27 ಕೆ.ಆರ್.ಪೇಟೆಯಲ್ಲಿ ಬೃಹತ್ ಪ್ರತಿಭಟನೆ- ಗುರುಪ್ರಸಾದ್ ಕೆರೆಗೋಡು

ಕೆ.ಆರ್.ಪೇಟೆ,ಮೇ.23: ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಸವರ್ಣೀಯ ವ್ಯಕ್ತಿಯೊಬ್ಬ ಜಮೀನು ಕಬಳಿಸಲು ದೌರ್ಜನ್ಯ ದಬ್ಬಾಳಿಕೆ ನಡೆಸಿ ಬೆಂಕಿಯಲ್ಲಿ ಬೇಯುತ್ತಿದ್ದ ಹುಲ್ಲಿನ ಮೆದೆಗೆ ತಳ್ಳಿ ದಲಿತ ಯುವಕನನ್ನು ಜೀವಂತ ದಹನ ಮಾಡಿ ಹತ್ಯೆ ಮಾಡಿರುವ ಪ್ರಕರಣವನ್ನು ಎಸ್.ಐ.ಟಿ ತನಿಖೆಗೆ ಒತ್ತಾಯಿಸಿ ಹಾಗೂ ಆರೋಪಿ ಸವರ್ಣೀಯ ಯುವಕನನ್ನು ಕೂಡಲೇ ಬಂಧಿಸಬೇಕು.

ಕರ್ತವ್ಯ ಲೋಪವೆಸಗಿರುವ ಪೊಲೀಸ್ ಅಧಿಕಾರಿಗಳ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿ ಇದೇ ಮೇ.27ರಂದು ಮಂಗಳವಾರ ಕೆ.ಆರ್.ಪೇಟೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು ತಿಳಿಸಿದರು.

ಅವರು ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಸವರ್ಣೀಯ ವ್ಯಕ್ತಿ ಅನಿಲ್‌ಕುಮಾರ್ ಎಂಬಾತನ ದೌರ್ಜನ್ಯದಿಂದ ಜೀವಂತ ದಹನವಾದ ದಲಿತ ಯುವಕ ಜಯಕುಮಾರ್ ಅವರ ನಿವಾಸ ಹಾಗೂ ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ, ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ದಲಿತ ಯುವಕ ಜಯಕುಮಾರ್ ಕತ್ತರಘಟ್ಟ ಜಮಾಬಂದಿಗೆ ಸೇರಿದ ಸರ್ವೆ ನಂಬರ್ 5.ಎಸ್.ಬಿ.ಪಿ1ರಲ್ಲಿ 3ಎಕರೆ ಜಮೀನನ್ನು ಹತ್ತಾರು ವರ್ಷಗಳಿಂದ ಸ್ವಾಧೀನಾನುಭವದಲ್ಲಿ ಇದ್ದುಕೊಂಡು ಬೇಸಾಯ ಮಾಡಿಕೊಂಡು ಬರುತ್ತಿದ್ದರು. ಸದರಿ ಜಮೀನನ್ನು ಕಬಳಿಸುವ ಹುನ್ನಾರದಿಂದ ಆರೋಪಿ ಅನಿಲ್‌ಕುಮಾರ್ ಆಗಾಗ್ಗೆ ಜಗಳ ಮಾಡುತ್ತಿದ್ದನು. ಇದೇ ರೀತಿ ಜಮೀನಿನ ವಿಚಾರವಾಗಿ ಮೇ.15ರಂದು ಅನಿಲ್‌ಕುಮಾರನು ದಲಿತ ಯುವಕ ಜಯಕುಮಾರ್ ಮೇಲೆ ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದನು. ಆಗ ಜಯಕುಮಾರ್ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿ ರಕ್ಷಣೆ ಕೊಡುವಂತೆ ಮನವಿ ಮಾಡಿದ್ದರು. ಆದರೆ ಪೊಲೀಸರು ಆರೋಪಿ ಅನಿಲ್‌ಕುಮಾರ್ ವಿರುದ್ದ ಜಾತಿನಿಂದನೆ ಕೇಸು ದಾಖಲಿಸದೇ ಇರುವ ಕಾರಣ ಆರೋಪಿ ಮರುದಿನ ಹುಲ್ಲಿನ ಮೆದೆಗೆ ಬೆಂಕಿ ಹಾಕಿ ಜಯಕುಮಾರನಿಗೆ ಪೆಟ್ರೋಲ್ ಎರಚಿ ಬೆಂಕಿಗೆ ನೂಕಿ ಹತ್ಯೆ ಮಾಡಿರುತ್ತಾನೆ.

ಒಂದು ವೇಳೆ ಪೊಲೀಸರು ಗುರುವಾರವೇ ಪ್ರಕರಣ ದಾಖಲಿಸಿದ್ದರೆ ಮೇ.17ರಂದು ಘಟನೆಯೇ ನಡೆಯುತ್ತಿರಲಿಲ್ಲ ಜಯಕುಮಾರ್ ಬದುಕುಳಿಯುತ್ತಿದ್ದರು. ಘಟನೆ ನಡೆದ ದಿನ ಮೃತ ಜಯಕುಮಾರ್ ಕುಟುಂಬದವರು ನೀಡಿದ ದೂರನ್ನು ಬದಿಗಿಟ್ಟು ಪೊಲೀಸರು ಬೇರೆ ರೀತಿ ಎಫ್.ಐ.ಆರ್. ದಾಖಲಿಸಿದ್ದಾರೆ. ಕೂಡಲೇ ಸೂಕ್ತ ತನಿಖೆ ನಡೆಸಿ ನ್ಯಾಯಯುತವಾಗಿ ಜಾರ್ಜ್ಶೀಟ್ ಸಲ್ಲಿಸಬೇಕು ಎಂದು ಆಗ್ರಹಿಸಿದರು. ಕತ್ತರಘಟ್ಟ ದಲಿತ ಯುವಕನ ಹತ್ಯೆ ಪ್ರಕರಣದಲ್ಲಿ ಪೊಲೀಸರ ಕರ್ತವ್ಯಲೋಪ ಎದ್ದು ಕಾಣುತ್ತದೆ ಹಾಗಾಗಿ ಕೂಡಲೇ ಕರ್ತವ್ಯ ಲೋಪ ಎಸಗಿರುವ ಪೊಲೀಸರನ್ನು ಕೂಡಲೇ ಅಮಾನತ್ತು ಮಾಡಬೇಕು. ಘಟನಾ ಸ್ಥಳಕ್ಕೆ ಡಿಸಿ, ಎಸ್.ಪಿ, ಬಂದ ದಿನ ಬಂದಿದ್ದ ಡಿವೈಎಸ್‌ಪಿ ಚಲುವರಾಜು ಅವರು ಈಚೆಗೆ ಇದೂವರೆವಿಗೂ ಬಂದಿಲ್ಲ. ಗ್ರಾಮಕ್ಕೆ ಬೇಟಿ ನೀಡಿಲ್ಲ. ನೊಂದ ಕುಟುಂಬಕ್ಕೆ ರಕ್ಷಣೆಯನ್ನೂ ನೀಡಿಲ್ಲ ಎಂದು ಗುರುಪ್ರಸಾದ್ ಕೆರೆಗೋಡು ಅಸಮಧಾನ ವ್ಯಕ್ತಪಡಿಸಿದರು.

ಈ ಎಲ್ಲಾ ಘಟನೆಯಲ್ಲಿ ಪೊಲೀಸರ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ಸರ್ಕಾರವು ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿ, ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ಅಮಾನತ್ತು ಮಾಡಬೇಕು. ಘಟನೆಯನ್ನು ಎಸ್.ಐ.ಟಿ ತನಿಖೆಗೆ ಒಳಪಡಿಸಬೇಕು. ಆರೋಪಿ ಜಯಕುಮಾರ್ ಎಂಬಾನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಇದೇ ಮೇ.27ರಂದು ಕೆ.ಆರ್.ಪೇಟೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು. ಹಾಗಾಗಿ ತಾಲ್ಲೂಕಿನಾದ್ಯಂತ ಇರುವ ದಲಿತ ಬಂಧುಗಳು ಹಾಗೂ ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಾವಿರಾರು ಸಂಖ್ಯೆಯಲ್ಲಿ ಬಂದು ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಗುರುಪ್ರಸಾದ್ ಕೆರೆಗೋಡು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್, ರಾಜ್ಯ ಸಂಘಟನಾ ಸಂಚಾಲಕ ಅಂಕಪ್ಪ, ಜಿಲ್ಲಾ ಸಂಚಾಲಕ ಮದ್ದೂರು ಶಿವು, ಜಿಲ್ಲಾ ಸಂಘಟನಾ ಸಂಚಾಲಕ ಲಕ್ಷಿö್ಮÃಪುರ ರಂಗಸ್ವಾಮಿ, ಬಂಡಿಹೊಳೆ ರಮೇಶ್, ಬಸ್ತಿ ರಂಗಪ್ಪ, ತಾಲ್ಲೂಕು ದಲಿತ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಯ್ಯ,, ತಾಲೂಕು ಛಲವಾದಿ ಮಹಾಸಭಾ ಗೌರವಾಧ್ಯಕ್ಷ ಸೋಮಸುಂದರ್, ಛಲವಾದಿ ಮಹಾಸಭಾದ ಹಾಸನ-ಮಂಡ್ಯ ಉಸ್ತುವಾರಿ ಜಿಲ್ಲಾಧ್ಯಕ್ಷ ಮಾಂಬಳ್ಳಿ ಜಯರಾಮ್, ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜ್, ತಾಲ್ಲೂಕು ಡಿ.ಎಸ್.ಎಸ್. ಸಂಘಟನಾ ವೆಂಕಟಗಿರಿ, ಸಂಘಟನಾ ಸಂಚಾಲಕ ಕತ್ತರಘಟ್ಟ ರಾಜೇಶ್, ತೆಂಡೇಕೆರೆ ನಿಂಗಯ್ಯ, ಸಂತೋಷ್‌ಕುಮಾರ್, ಜನ್ನಹಳ್ಳಿ ಹರೀಶ್, ಹರಿಹರಪುರ ನರಸಿಂಹ, ಎನ್.ಜೆ.ಮಂಜು, ಗಂಗಾಧರ್, ಸೇರಿದಂತೆ ಹಲವು ದಲಿತ ಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *