ಕೆ.ಆರ್.ಪೇಟೆ- ಹೆಣ್ಣು-ಗಂಡು ಎಂಬ ಬೇದಭಾವವಿಲ್ಲದೇ ಪ್ರತಿಯೊಬ್ಬರು ಆತ್ಮರಕ್ಷಣೆಗಾಗಿ ವಿದ್ಯಾರ್ಥಿ ಹಂತದಲ್ಲಿಯೇ ಕರಾಟೆ ಕಲಿಯುವುದು ಅಗತ್ಯವಿದೆ ಎಂದು ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.
ಅವರು ಪಟ್ಟಣದ ಪ್ರಗತಿ ಇಂಗ್ಲೀಷ್ ಶಾಲಾ ಮಕ್ಕಳು ಪಾಂಡುಪುರದಲ್ಲಿ ನಡೆದ ರಾಜ್ಯದ ಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಜಯಗಳಿಸಿದ ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರಧಾನ ಹಾಗೂ ಉಚಿತ ಕರಾಟೆ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು. ಪ್ರಗತಿ ಇಂಗ್ಲೀಷ್ ಶಾಲೆ ತನ್ನ ಶಾಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ಉಚಿತವಾಗಿ ಕರಾಟೆ ತರಬೇತಿಯನ್ನು ನೀಡಲು ಕೈಗೊಂಡು, ಪಠ್ಯದ ಜೊತೆ ಪಠೇತರ ಚಟುವಟಿಕೆ ವಿದ್ಯಾಭ್ಯಾಸ ಜೀವನಕ್ಕೆ ಭದ್ರ ಬುನಾದಿಗೆ ಉತ್ತಮ ವೇದಿಕೆ ಕಲ್ಪಿಸಿರುವುದು ನಿಜಕ್ಕೂ ಶ್ಲಾಘನೀಯ.
ಶಾಲಾ ವಿದ್ಯಾರ್ಥಿಗಳು ಸುವರ್ಣ ಅವಕಾಶವನ್ನು ಪ್ರಾಥಮಿಕ ಹಂತದಲ್ಲೇ ಸದುಪಯೋಗ ಪಡೆದು ಕೊಳ್ಳಬೇಕು.ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ನಿರಂತರ ಪರಿಶ್ರಮ ದಿಂದ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಪಡೆದು ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸಬೇಕೆಂದು ಸಲಹೆ ನೀಡಿದ ಅವರು ಮೊಬೈಲ್‌ನಲ್ಲಿ ಕಾಲಹರಣ ಮಾಡದೇ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಉಜ್ವಲ ಭವಿಷ್ಯ ರೂಪಿಸಿಕೊಂಡು ಪೋಷಕರಿಗೆ, ತಾಲ್ಲೂಕಿಗೆ ಕೀರ್ತಿ ತರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕು ವರ್ತಕರ ಸಂಘದ ಅಧ್ಯಕ್ಷ ಕೆ.ಎಸ್.ರಾಜೇಶ್ ಮಾತನಾಡಿ ಕರಾಟೆ ಕಲೆ ಆತ್ಮ ರಕ್ಷಣೆಗಿದ್ದು, ಇದನ್ನು ದುರುಪಯೋಗ ಮಾಡಿಕೊಳ್ಳಬಾರದು. ಕರಾಟೆ ತರಬೇತಿ ಪಡೆಯುವುದರಿಂದ ಆತ್ಮ ಬಲ ಮತ್ತು ಮಾನಸಿಕವಾಗಿ ಸದೃಢವಾಗಲು ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿರುವ ಕರಾಟೆ ಕೌಶಲ ತರಬೇತಿ ಸ್ವಯಂ ರಕ್ಷಣೆಗೆ ಸಹಕಾರಿಯಾಗಲಿದೆ ಹಾಗಾಗಿ ಪ್ರಗತಿ ಶಾಲಾ ವಿದ್ಯಾರ್ಥಿಗಳು ಈ ಉಚಿತ ಕರಾಟೆ ತರಬೇತಿ ಪಡೆದು ಇದರ ಲಾಭ ಪಡೆಯಬೇಕು. ಕರಾಟೆ ತರಬೇತಿಯಿಂದ ಉತ್ತಮ ಆರೋಗ್ಯ ವೃದ್ಧಿಯಾಗಲಿದೆ ಎಂದರು.

ಪ್ರಗತಿ ಶಾಲಾ ಸಂಸ್ಥಾಪಕ ಅಧ್ಯಕ್ಷ ಕೆ.ಕಾಳೇಗೌಡ ಮಾತನಾಡಿ ವಿದ್ಯಾರ್ಥಿಯ ಹಂತದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಕರಾಟೆ ತರಬೇತಿಯ ಅವಕಾಶ ಪಡೆದು ಭವಿಷ್ಯದಲ್ಲಿ ಇತರರಿಗೆ ತರಬೇತಿ ನೀಡುವಂತಾಗಲಿ. ಮಹಿಳಾ ಸಬಲೀಕರಣಕ್ಕೆ ದಿಟ್ಟ ನಿರ್ಧಾರಕ್ಕೆ ಕರಾಟೆ ಅತ್ಯವಶ್ಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕರಾಟೆ ತರಬೇತಿಯಲ್ಲಿ ಹಂತ ಹಂತವಾಗಿ ತರಬೇತಿ ಪಡೆದ ಕ್ರೀಡಾ ಪಟುಗಳಿಗೆ ದೃಢೀಕರಣ ಪತ್ರದ ಜೊತೆಗೆ ಹಳದಿ, ಕೇಸರಿ ಮತ್ತು ಹಸಿರು ಬೆಲ್ಟ್ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿ ಮೋನಿಕಾ ಕಾಳೇಗೌಡ, ಪುರಸಭಾ ಮಾಜಿ ಸದಸ್ಯ ಕೆ.ಆರ್.ನೀಲಕಂಠ, ಕರಾಟೆ ಮಾಸ್ಟರ್ ಹೇಮಂತ್, ಮುಖ್ಯ ಶಿಕ್ಷಕ ಗೋಪಾಲಕೃಷ್ಣ. ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.
- ಶ್ರೀನಿವಾಸ, ಕೆ.ಆರ್.ಪೇಟೆ