ಕೆ.ಆರ್.ಪೇಟೆ-ರೈತ ಬಾಂಧವರು-ಹಾಲು-ಉತ್ಪಾದಕರ-ಸಹಕಾರ- ಸಂಘಗಳ-ಅಭಿವೃದ್ಧಿಗೆ-ಹಾಗೂ-ಮಂಡ್ಯ-ಹಾಲು-ಒಕ್ಕೂಟದ- ಅಭಿವೃದ್ಧಿಗೆ-ಸಹಕರಿಸಬೇಕು-ಮನ್‌ಮುಲ್-ನಿರ್ದೇಶಕ-ಡಾಲು-ರವಿ

ಕೆ.ಆರ್.ಪೇಟೆ: ತಾಲ್ಲೂಕಿನ ರೈತ ಬಾಂಧವರು ಹಾಗೂ ಹಾಲು ಉತ್ಪಾದಕರು ತಮ್ಮ ಗ್ರಾಮದ ಡೇರಿಗಳಿಗೆ ಗುಣಮಟ್ಟದ ಹಾಲನ್ನು ಸರಬರಾಜು ಮಾಡಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗೆ ಹಾಗೂ ಮಂಡ್ಯ ಹಾಲು ಒಕ್ಕೂಟದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನ್‌ಮುಲ್ ನಿರ್ದೇಶಕ ಡಾಲು ರವಿ ಮನವಿ ಮಾಡಿದರು.


ತಾಲೂಕಿನ ಶೀಳನೆರೆ ಹೋಬಳಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಿಂದ ನೂತನವಾಗಿ ಮನ್ ಮುಲ್ ನಿರ್ದೇಶಕರಾಗಿ ಆಯ್ಕೆಯಾಗಿ ಇತಿಹಾಸ ನಿರ್ಮಿಸಿರುವ ಡಾಲು ರವಿ ಹಾಗೂ ಮಡುವಿನಕೋಡಿ ಹರೀಶ್ ಅವರಿಗೆ ಮಂಡ್ಯ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್ ನೇತೃತ್ವದಲ್ಲಿ ಶೀಳನೆರೆ ಗ್ರಾಮದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಡಾಲು ರವಿ ಹಾಲು ಉತ್ಪಾದಕರಿಗೆ ಮನವಿ ಮಾಡಿದರು.


ಹಾಲು ಒಕ್ಕೂಟದ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ನ್ಯಾಯ ಗೆದ್ದಿದೆ, ಅನ್ಯಾಯ ಅಧರ್ಮಕ್ಕೆ ಸೋಲುಂಟಾಗಿದೆ. ತಾಲ್ಲೂಕಿನಲ್ಲಿ ದಬ್ಬಾಳಿಕೆ ದೌರ್ಜನ್ಯ ನಡೆಯಲ್ಲ, ಹಣ ಬಲದ ಮುಂದೆ ಅಂತಿಮವಾಗಿ ಜನಬಲವೇ ಗೆಲ್ಲೋದು ಎನ್ನುವುದನ್ನು ನಮ್ಮಿಬ್ಬರ ಗೆಲುವಿನ ಮೂಲಕ ತೋರಿಸಿ ಕೊಟ್ಟಿದ್ದಾರೆ ಎಂದು ಡಾಲು ರವಿ ಕಿಡಿ ಕಾರಿದರು.


ಮನ್‌ಮುಲ್ ನೂತನ ನಿರ್ದೇಶಕ ಎಂ.ಬಿ.ಹರೀಶ್ ಮಾತನಾಡಿ ಜೆಡಿಎಸ್ ಪಕ್ಷದ ಸರ್ವೋಚ್ಛ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿ ಯವರೇ ಡಾಲುರವಿ ಹಾಗೂ ಎಂ.ಬಿ. ಹರೀಶ್ ಆದ ನನ್ನನ್ನು ಮನ್ ಮುಲ್ ಚುನಾವಣೆಗೆ ಅಧಿಕೃತ ಅಭ್ಯರ್ಥಿಗಳೆಂದು ಘೋಷಣೆ ಮಾಡಿದ್ದರೂ ನಮ್ಮನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡದೇ ಅಧಿಕಾರದ ದುರಾಸೆಯಿಂದ ತಾವೇ ಅಭ್ಯರ್ಥಿಯಾಗಿ ಘೋಷಣೆ ಮಾಡಿಕೊಂಡು ನಮಗೆ ಮೋಸ ಮಾಡಿದ್ದರಿಂದ ಶಾಸಕರಿಗೆ ಪ್ರಜ್ಞಾವಂತ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಹರೀಶ್ ಹೇಳಿದರು.


ಅಭಿನಂದನಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್ ಮಾತನಾಡಿ ಶಾಸಕ ಸ್ಥಾನ ದೊಡ್ಡ ಹುದ್ದೆಯಾಗಿದ್ದು ಮನ್‌ಮುಲ್ ಚುನಾವಣೆಯಲ್ಲಿ ಸೋತಿರುವ ಶಾಸಕರು ಜನತಾ ತೀರ್ಪನ್ನು ಒಪ್ಪಿಕೊಳ್ಳಬೇಕು. ಒಬ್ಬರ ಮೇಲೆ ಮತ್ತೊಬ್ಬರು ಟೀಕೆ ಟಿಪ್ಪಣಿ ಮಾಡಿಕೊಂಡು ಪರಸ್ಪರ ಕೆಸರನ್ನು ಎರಚಿಕೊಳ್ಳುವುದು ರಾಜಕೀಯದಲ್ಲಿ ಒಳ್ಳೆಯದಲ್ಲ. ಶಾಸಕರು ಇನ್ನು ಮುಂದೆ ಯಾರ ವಿರುದ್ಧವೂ ವಯಕ್ತಿಕವಾಗಿ ಟೀಕೆ ಮಾಡಬಾರದು. ನಾವುಗಳು ಕೂಡಾ ವಯಕ್ತಿಕವಾಗಿ ಯಾರ ವಿರುದ್ಧವೂ ಮಾತನಾಡಲ್ಲ. ಇದೇ ವೇದಿಕೆಯಲ್ಲಿ ಆರೋಪ ಪ್ರತ್ಯಾರೋಪಗಳು ಕೊನೆಯಾಗಬೇಕು ಎಂದು ಅಂಬರೀಶ್ ಮನವಿ ಮಾಡಿದರು.


ಕಾರ್ಯಕ್ರಮಕ್ಕೂ ಮುನ್ನ ಡಾಲು ರವಿ, ಎಂ.ಬಿ.ಹರೀಶ್ ಹಾಗೂ ಶೀಳನೆರೆ ಅಂಬರೀಶ್ ಅವರನ್ನು ಪಟಾಕಿ ಮತ್ತು ಪುಷ್ಪ ವೃಷ್ಟಿಯ ಮೂಲಕ ಸ್ವಾಗತಿಸಿ ವೇದಿಕೆಗೆ ಕರೆ ತಂದರು.


ಕಾರ್ಯಕ್ರಮದಲ್ಲಿ ಮುಖಂಡರಾದ ಹಾದನೂರು ಪರಮೇಶ್, ಶೀಳನೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಶರತ್ ಕುಮಾರ್, ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ನಾಗೇಶ್, ಹಾಲು ಒಕ್ಕೂಟದ ವಿಸ್ತರಣಾಧಿಕಾರಿಗಳಾದ ನಾಗಪ್ಪ ಅಲ್ಲಿಬಾದಿ, ಭಾವನಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ವಿವಿಧ ಡೈರಿ ಕಾರ್ಯದರ್ಶಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

-ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?