ಕೆ.ಆರ್.ಪೇಟೆ-ರೈತರು-ಯಾರೂ-ಸಹ-ತಮ್ಮ-ಭೂಮಿಯನ್ನು-ಕಡಿಮೆ ಬೆಲೆಗೆ-ಮಾರಾಟ-ಮಾಡಬಾರದು-ಶ್ರೀ.ಡಾ.ನಿಶ್ಚಲಾನಂದನಾಥ-ಸ್ವಾಮೀಜಿ-ಸಲಹೆ

ಕೆ.ಆರ್.ಪೇಟೆ- ರೈತರ ಭೂಮಿಗೆ ಇನ್ನೂ ಕೆಲವೇ ವರ್ಷಗಳಲ್ಲಿ ಬಂಗಾರದ ಬೆಲೆ ಬರಲಿದೆ. ರೈತರಿಗೆ ಸರ್ಕಾರಿ ನೌಕರರಿಗಿಂತಲೂ ಹೆಚ್ಚಿನ ಗೌರವ ಸಿಗಲಿದೆ. ಹಾಗಾಗಿ ರೈತರು ಯಾರೂ ಸಹ ತಮ್ಮ ಭೂಮಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬಾರದು ಎಂದು ಬೆಂಗಳೂರಿನ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಡಾ.ನಿಶ್ಚಲಾನಂದನಾಥಸ್ವಾಮೀಜಿ ರೈತರಿಗೆ ಸಲಹೆ ನೀಡಿದರು.


ಅವರು ಕೆ.ಆರ್.ಪೇಟೆ ಪಟ್ಟಣದ ಸುಲೋಚನಮ್ಮ-ರಾಮದಾಸ್ ಸಭಾಂಗಣದಲ್ಲಿ ತಾಲ್ಲೂಕು ಮಾಜಿ ಸ್ಪೀಕರ್ ದಿ.ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಪ್ರಸ್ತುತ ಕೃಷಿ ಬಿಕ್ಕಟ್ಟುಗಳು ಹಾಗೂ ಪರಿಹಾರಗಳು ಕುರಿತಾದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಇಂದು ರೈತರು ಭೂಮಿಯಲ್ಲಿ ಶೇ.48ರಷ್ಟು ಮಂದಿ ಮಾತ್ರ ಕೃಷಿಯಲ್ಲಿ ನಿರತರಾಗಿದ್ದು, ಉಳಿದ ಶೇ.52ರಷ್ಟು ಮಂದಿಗೆ ಆಹಾರವನ್ನು ನೀಡುತ್ತಿದ್ದಾರೆ. ಇದರಿಂದ ಆಹಾರದ ಸಮಸ್ಯೆ ಕಾಡುತ್ತಿಲ್ಲ. ಈ ಅನುಪಾತದಲ್ಲಿ ವ್ಯತ್ಯಾಸದಲ್ಲಿ ಕೃಷಿ ಮಾಡುವವರು ಕಡಿಮೆ ಆದರೆ ಆಹಾರಕ್ಕೆ ಹಾಹಾಕಾರ ಉಂಟಾಗಲಿದೆ. ಆದ್ದರಿಂದ ರೈತರು ಕೃಷಿಯನ್ನು ಮರೆಯಬಾರದು.

ತಮ್ಮ ಭೂಮಿಯನ್ನು ಎಷ್ಟೇ ಕಷ್ಟವಾದರೂ ಸರಿಯೇ ಮಾರಾಟ ಮಾಡದೇ ಉಳಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ರೈತರಿಗೆ ಸರ್ಕಾರಿ ನೌಕರರಷ್ಟೇ ಬೆಲೆ ಬರಲಿದೆ. ರೈತರನ್ನು ಹುಡುಕಿಕೊಂಡು ಟೌನಿನ ನಿವಾಸಿಗಳು ಬರಲಿದ್ದಾರೆ. ನಗರ ಪ್ರದೇಶದಲ್ಲಿ ಕಲುಷಿತಗೊಂಡಿರುವ ವಾತಾವರಣದಿಂದಾಗಿ ಆರೋಗ್ಯ ಇಲ್ಲದಂತಾಗಿದೆ. ಹಾಗಾಗಿ ಆರೋಗ್ಯವನ್ನು ಹರಸಿ ಗ್ರಾಮೀಣ ಪ್ರದೇಶಕ್ಕೆ ಬರಲಿದ್ದಾರೆ. ಇನ್ನು ೧೦-೧೫ 10-15 ವರ್ಷಗಳಲ್ಲಿ ಇಂತಹ ವಾತಾವರಣ ಸೃಷ್ಠಿಯಾಗಲಿದೆ ಎಂದು ಕೆಂಗೇರಿ ಶ್ರೀಗಳು ಭವಿಷ್ಯ ನುಡಿದರು.

ಇಂದು ರೈತ ಕುಟುಂಬದ ಗಂಡು ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣವೇನೆಂದರೆ, ಹೆಣ್ಣು ಭ್ರೂಣ ಹತ್ಯೆ ಆಗುತ್ತಿದ್ದು, ಲಿಂಗಾನುಪಾತದಲ್ಲಿ ವ್ಯತ್ಸಾಸ ಉಂಟಾಗಿರುವುದೇ ಮೂಲ ಕಾರಣವಾಗಿದೆ ಹಾಗಾಗಿ ಇನ್ನಾದರೂ ಹೆಣ್ಣು ಭ್ರೂಣ ಹತ್ಯೆಯನ್ನು ಯಾರೂ ಸಹ ಮಾಡಬಾರದು ಎಂದು ಶ್ರೀಗಳು ಕರೆ ನೀಡಿದರು.

ಮಾಜಿ ಸ್ಪೀಕರ್ ಕೃಷ್ಣ ಅವರು ಈ ನಾಡು ಕಂಡ ಅಪರೂಪದ ಸರಳ ಸಜ್ಜನ ರಾಜಕಾರಣಿಗಳಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇವರ ಸರಳತೆಗೆ ಸಾಕ್ಷಿ ಎಂದರೆ ಅವರು ಜನಸಾಮಾನ್ಯರಂತೆ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಓಡುತ್ತಿದರು. ಆಟೋ ಟೋಕನ್ ಪಡೆಯಲು ಸರತಿಯ ಸಾಲಿನಲ್ಲಿ ನಿಲ್ಲುತ್ತಿದ್ದರು. ಮತ ಹಾಕುವಾಗವಾಗಲು ಕ್ಯೂನಲ್ಲಿ ಬಂದು ಮತ ಹಾಕುತ್ತಿದ್ದರು. ನಾನು ಸ್ಪೀಕರ್, ಶಾಸಕ, ಮಂತ್ರಿ, ಸಂಸದ ಎಂಬ ಯಾವುದೇ ಹಮ್ಮು ಬಿಮ್ಮು, ಅಹಂಕಾರ ಇರಲಿಲ್ಲ. ಇಂತಹ ಸರಳ ವ್ಯಕ್ತಿತ್ವದ ರಾಜಕಾರಣಿಗಳು ಪ್ರಾಯಶಃ ಇಡೀ ದೇಶದಲ್ಲಿಯೇ ಅಪರೂಪ ಎಂದರೂ ತಪ್ಪಾಗಲಾರದು ಎಂದು ಮೆಚ್ಚುಗೆ ನಿಶ್ಚಲಾನಂದನಾಥ ಶ್ರೀಗಳು ವ್ಯಕ್ತಪಡಿಸಿದರು.

ಜೊತೆಗೆ ಸೋಮಾರಿ ಅಧಿಕಾರಿಗಳಿಗೆ, ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನವಾಗಿದ್ದರು. ರಾಜ್ಯ ಮಟ್ಟದಲ್ಲಿ ಭ್ರಷ್ಟಾಚಾರಿ ವಿರೋಧಿ ಆಂದೋಲನ ನಡೆಸುವ ಮೂಲಕ ಭ್ರಷ್ಠಾಚಾರದ ವಿರುದ್ಧ ಧ್ವನಿ ಎತ್ತುತ್ತಿದ್ದರು. ಇಂತಹ ನೇರ, ನಡೆ, ನುಡಿ ಹಿನ್ನೆಲೆಯುಳ್ಳ ಕೃಷ್ಣ ಅವರಿಂದ ಕೆ.ಆರ್.ಪೇಟೆ ತಾಲ್ಲೂಕು ಶೈಕ್ಷಣಿಕ ಕಾಶಿಯಾಗಿ ರೂಪುಗೊಂಡಿದೆ ಇಲ್ಲದಿದ್ದರೆ ಕೃಷ್ಣರಾಜಪೇಟೆ ತಾಲ್ಲೂಕು ಇಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಶ್ರೀಗಳು ಹೇಳಿದರು.


ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೇಹೊಸಹಳ್ಳಿ ಜವರಾಯಿಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣ ಪ್ರತಿಷ್ಠಾನದ ಗೌರವಾಧ್ಯಕ್ಷೆ ಪ್ರೊ.ಇಂದಿರಾ ಕೃಷ್ಣ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಸೇರಿದ್ದ ಕೃಷ್ಣ ಅವರ ಅಪಾರ ಅಭಿಮಾನಿಗಳನ್ನು ಕಂಡು ಸಂತಸ ವ್ಯಕ್ತಪಡಿಸಿದರು.


ನಿವೃತ್ತ ಪ್ರಾಂಶುಪಾಲರು ಹಾಗೂ ಸಹಜ ಕೃಷಿಕ ಬಾಳೆಕಾಯಿ ಶಿವನಂಜಯ್ಯ ಪ್ರಸ್ತುತ ಕೃಷಿ ಬಿಕ್ಕಟ್ಟುಗಳು ಹಾಗೂ ಪರಿಹಾರಗಳನ್ನು ಕುರಿತು ಉಪನ್ಯಾಸ ನೀಡಿದರು. ಸಾವಯವ ಕೃಷಿಕರಾದ ಸಿ.ಪಿ. ಕೃಷ್ಣ ನೀರಾವತಿ ಪ್ರದೇಶದಲ್ಲಿ ಸಾವಯವ ಕೃಷಿ ಕುರಿತು ಭಾಷಣ ಮಾಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಸರ್ಕಾರದಿಂದ ರೈತರಿಗೆ ಸಿಗುವ ಸವಲತ್ತುಗಳನ್ನು ಕುರಿತು ವಿಷಯ ಮಂಡಿಸಿದರು. ಕರ್ನಾಟಕ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಎಂ.ನಾಗರಾಜೇಗೌಡ ಬ್ಯಾಂಕುಗಳಿಂದ ರೈತರಿಗೆ ಸಿಗುವ ಸೌಲಭ್ಯಗಳನ್ನು ಕುರಿತು ಮಾಹಿತಿ ನೀಡಿದರು. ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಹಣಾಧಿಕಾರಿ ಎನ್.ಕೇಶವಮೂರ್ತಿ ಕೃಷಿ ಕುರಿತು ವಿಶೇಷ ಉಪನ್ಯಾಸ ನೀಡಿದರು.


ಕಾರ್ಯಕ್ರಮದಲ್ಲಿ ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕತ್ತರಘಟ್ಟ ವಾಸು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್, ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಅಂಚಿ ಸಣ್ಣಸ್ವಾಮೀಗೌಡ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ತಾಲ್ಲೂಕು ಪಂಚಯತ್ ಮಾಜಿ ಅಧ್ಯಕ್ಷ ಬಿ.ಜವರಾಯಿಗೌಡ, ನಿವೃತ್ತ ಅರಣ್ಯ ಇಲಾಖೆಯ ಜಿಲ್ಲಾ ಅಧಿಕಾರಿ ಕಟ್ಟೆಕ್ಯಾತನಹಳ್ಳಿ ಚಂದ್ರೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಶಿವಣ್ಣ, ಬಣ್ಣೇನಹಳ್ಳಿ ಶ್ರೀನಿವಾಸ್, ಸಂತೇಬಾಚಹಳ್ಳಿ ನಾಗರಾಜು, ತಾ.ಪಂ.ಮಾಜಿ ಅಧ್ಯಕ್ಷ ಮೆಣಸ ಮಹದೇವೇಗೌಡ, ಆರ್.ಎಸ್.ಶಿವರಾಮೇಗೌಡ, ಪ್ರಗತಿ ಪರ ರೈತ ಸೋಮಶೇಖರ್, ರೋಬೋ ಮಂಜೇಗೌಡ, ಹೊಸಹೊಳಲು ಮಂಜುಳಾಚನ್ನಕೇಶವ ಸೇರಿದಂತೆ ಹಲವು ಗಣ್ಯರು, ಸಾವಿರಾರು ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

× How can I help you?