ಕೆ ಆರ್ ಪೇಟೆ-ನಮ್ಮ ಪೂರ್ವಿಕರು ಆಚರಿಸಿಕೊಂಡು ಬರುತ್ತಿರುವ ಗಣೇಶೋತ್ಸವ ಹಬ್ಬವು ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದೆ.ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶೋತ್ಸವವನ್ನು ಸ್ವಾತಂತ್ರ್ಯ ಪ್ರೇಮಿಗಳನ್ನು ಎಚ್ಚರಿಸಲು ಸಂಪರ್ಕ ಸೇತುವೆಯಾಗಿ ಗಣೇಶನನ್ನು ಆರಾಧಿಸಿ ಉತ್ಸವ ಮಾಡಿದರೆ ಇಂದಿನ ದಿನಮಾನದಲ್ಲಿ ಒಡೆದ ಮನಸ್ಸುಗಳನ್ನು ಒಗ್ಗೂಡಿಸಲು, ಹಿಂದೂ ಮುಸ್ಲಿಂ ಬಾಂಧವರಲ್ಲಿ ಭಾವೈಕ್ಯತೆಯ ಸಂದೇಶವನ್ನು ಸಾರಲು ಗಣೇಶೋತ್ಸವ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂದು ಪೋಲಿಸ್ ಇನ್ಸ್ಪೆಕ್ಟರ್ ಆನಂದೇಗೌಡ ಅಭಿಮಾನದಿಂದ ಹೇಳಿದರು.
ಪಟ್ಟಣದ ನಾಗಮಂಗಲ ರಸ್ತೆಯಲ್ಲಿರುವ ಗಣಪತಿ ಪೆಂಡಾಲ್ ನಲ್ಲಿ ಮುಸ್ಲಿಂ ಬಾಂಧವರು ಗಣೇಶೋತ್ಸವ ಸಮಾರಂಭವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಸಾರ್ವಜನಿಕರಿಗೆ ಮಜ್ಜಿಗೆ ಪಾನಕ, ಜ್ಯೂಸ್ ವಿತರಿಸಿ ಸಂಭ್ರಮಿಸಿದ್ದಕ್ಕೆ ಸಾಕ್ಷಿಯಾಗಿ ಅವರು ಮಾತನಾಡಿದರು.
ಪಟ್ಟಣದ ಮುಸ್ಲಿಂ ಯುವಕರು ಗಣೇಶನನ್ನ ಪೂಜೆ ಮಾಡಿ,ಮಜ್ಜಿಗೆ ಪಾನಕ ಜ್ಯೂಸ್ ವಿತರಿಸಿ ಪರಸ್ಪರ ಶುಭಾಶಯಗಳು ವಿನಿಮಯ ಮಾಡಿಕೊಳ್ಳುತ್ತಿರುವುದು ಇಡೀ ನಾಗರಿಕ ಸಮಾಜವೇ ಮೆಚ್ಚುವ ಸಂಗತಿ ಆಗಿದೆ. ಇದು ನಮ್ಮ ನಿಜವಾದ ಭಾರತ,ದೇಶದಲ್ಲಿ ದ್ವೇಷ ಕರಗಿ ಸೌಹಾರ್ದತೆ ಶಾಂತಿ ನೆಲೆಸಲಿ ಎಂದು ವಿಘ್ನನಿವಾರಕನಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನವೀನ್, ಕೃಷ್ಣರಾಜಪೇಟೆ ಪುರಸಭೆ ಮಾಜಿ ಅಧ್ಯಕ್ಷ ಕೆ.ಟಿ. ಗಂಗಾಧರ್, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಪುರಸಭೆ ಮಾಜಿ ಅಧ್ಯಕ್ಷ ಕೆ. ಗೌಸ್ ಖಾನ್, ಸದಸ್ಯ ಹೇಮಂತ್ ಕುಮಾರ್, ಸದಸ್ಯರಾದ ಡಿ. ಪ್ರೇಮಕುಮಾರ್, ಕೆ.ಸಿ. ಮಂಜುನಾಥ್, ಹೆಚ್.ಆರ್. ಲೋಕೇಶ್, ಸಾಬಿದ್ ಖಾನ್, ಸೌಧಿ ಫಯಾಜ್, ಸೈಯ್ಯದ್ ಜಮೀಲ್,ಮುಖ್ಯಾಧಿಕಾರಿ ರಾಜು ಕೆ.ವಠಾರ ಸೇರಿದಂತೆ ನೂರಾರು ಯುವಕ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
—————-ವರದಿ.ಡಾ.ಕೆ.ಆರ್.ನೀಲಕಂಠ,