ಕೆ.ಆರ್.ಪೇಟೆ,ಮೇ.15: ತಾಲ್ಲೂಕಿನ ಸ್ಥಳೀಯ ಅರ್ಹ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡದಿದ್ದರೆ, ತಾಲ್ಲೂಕಿನ ಸಾವಿರಾರು ಉದ್ಯೋಗಾಕಾಂಕ್ಷಿ ನಿರುದ್ಯೋಗಿ ಯುವಕರೊಡಗೂಡಿ ಕಾರ್ಖಾನೆಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಶಾಸಕ ಹೆಚ್.ಟಿ.ಮಂಜು ಜಾಕೀ ಗಾರ್ಮೆಂಟ್ಸ್ ಕಾರ್ಖಾನೆಯ ಸ್ಥಳೀಯ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು.
ತಾಲೂಕಿನ ಶೀಳನೆರೆ ಹೋಬಳಿಯ ಹಾದನೂರು ಸಮೀಪವಿರುವ ಜಾಕಿ ಗಾರ್ಮೆಂಟ್ಸ್ ಗೆ ಭೇಟಿ ನೀಡಿ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಮತ್ತು ನೌಕರರಿಗೆ ಒದಗಿಸುವ ಮೂಲಭೂತ ಸೌಕರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳೀಯರಿಂದ ಕಾರ್ಖಾನೆಯ ಲೋಪದೋಷಗಳ ಬಗ್ಗೆಯೂ ಮಾಹಿತಿ ಪಡೆದ ನಂತರ ಮಾತನಾಡಿದದರು.

ಕಾರ್ಖಾನೆಯಲ್ಲಿ ಟೈರ‍್ಸ್, ಚೆಕ್ರ‍್ಸ ನಂತಹ ಸಣ್ಣಪುಟ್ಟ ಹುದ್ದೆಗಳನ್ನು ಮಾತ್ರ ಸ್ಥಳೀಯರಿಗೆ ನೀಡಲಾಗುತ್ತದೆ. ಕಾರ್ಖಾನೆಯಲ್ಲಿನ ಸೂಪರ್‌ವೈಸರ್, ಮ್ಯಾನೇಜರ್, ಅಕೌಂಟ್ಸ್ ಸೆಕ್ಷನ್ ನಂತರ ಉದ್ಯೋಗಗಳನ್ನು ಬೇರೆ ರಾಜ್ಯದವರಿಗೆ ನೀಡಲಾಗುತ್ತಿದೆ ಎಂಬ ದೂರುಗಳು ಸಾಕಷ್ಟು ಕೇಳಿ ಬರುತ್ತಿದೆ ಇದನ್ನು ಸರಿಪಡಿಸಿಕೊಳ್ಳಬೇಕು. ಎಲ್ಲಾ ಬಗೆಯ ಹುದ್ದೆಗಳನ್ನು ನಮ್ಮ ತಾಲ್ಲೂಕಿನ ಅದರಲ್ಲಿಯೂ ಕಾರ್ಖಾನೆಯ ಅಕ್ಕಪಕ್ಕದ ಗ್ರಾಮಗಳ ಯುವಕರಿಗೆ ಹಾಗೂ ನಮ್ಮ ತಾಲ್ಲೂಕಿನ ಅಭ್ಯರ್ಥಿಗಳಿಗೆ ಮೊದಲ ಆಧ್ಯತೆ ನೀಡಬೇಕು ಶಾಸಕ ಹೆಚ್.ಟಿ.ಮಂಜು ತಾಕೀತು ಮಾಡಿದರು.

ನನ್ನ ಕ್ಷೇತ್ರದಲ್ಲಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ಈ ಕಾರ್ಖಾನೆ ಸಹಕಾರಿಯಾಗಿದೆ. ಆದರೆ ಪ್ರಮುಖ ಉದ್ಯೋಗಕ್ಕೆ ಬಹುತೇಕ ಹೊರ ರಾಜ್ಯ ಜಿಲ್ಲೆ ನೌಕರರನ್ನೇ ನೇಮಕಾತಿ ಮಾಡಿಕೊಳ್ಳುತ್ತಿರುವುದು ಖಂಡನೀಯ ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಬದಲಾಗಬೇಕು ಏಕೆಂದರೆ ನನ್ನ ತಾಲೂಕಿನಲ್ಲಿ ಅರ್ಹ ವಿದ್ಯಾವಂತರಿದ್ದಾರೆ ಮೊದಲು ಅವರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ಕಾರ್ಖಾನೆಯ ಕೆಲವು ಮೇಲ್ವಿಚಾರಕರ ಅಹಂಕಾರದ ವರ್ತನೆ ಮಿತಿಮೀರಿದೆ ಅದಕ್ಕೂ ಕಡಿವಾಣ ಬೀಳಬೇಕು ಎಂದು ಕಾರ್ಖಾನೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಎರಡನೇ ಘಟಕದಲ್ಲಿ ತಾಲೂಕಿನ ಮಹಿಳೆಯರಿಗೆ ಮೊದಲ ಪ್ರಾಮುಖ್ಯತೆ ನೀಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಾರ್ಖಾನೆ ಅಧಿಕಾರಿಗಳಾದ ಬಾಬುರಾಜ್, ಶ್ರೀಧರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಶೀಳನೆರೆ ಗ್ರಾಮ ಪಂಚಾಯಿತಿ ಪಿಡಿಓ ನವೀನ್, ಯುವ ಮುಖಂಡ ಪಿ.ಬಿ.ಮಂಚನಹಳ್ಳಿ ಸತೀಶ್, ಬೇಲದಕೆರೆ ಮರೀಗೌಡ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಮತ್ತಿತರರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಆರ್.