ಕೆ.ಆರ್.ಪೇಟೆ-ಸರ್ಕಾರವು-ರೂಪಿಸಿರುವ-ಜನಪದ- ಸಂಸ್ಕೃತಿಯಂತಹ-ಕಾರ್ಯಕ್ರಮಗಳು-ಜನರನ್ನು-ತಲುಪಬೇಕು-ಶಾಸಕ-ಹೆಚ್.ಟಿ.ಮಂಜು

ಕೆ.ಆರ್.ಪೇಟೆ: ದೇಸೀ ಸಂಸ್ಕೃತಿಯಾದ ಜನಪದ ಸಂಸ್ಕೃತಿ ಉಳಿವಿಗೆ ಕಾಲೇಜು ಶಿಕ್ಷಣ ಇಲಾಖೆ ಜನಪದ ಉತ್ಸವಗಳನ್ನು ಮಾಡುವ ಮೂಲಕ ಒಳ್ಳೆಯ ಹೆಜ್ಜೆಯನ್ನಿಟ್ಟಿದೆ. ಜಾನಪದ ನಮ್ಮ ಮೂಲ ಬೇರು. ಇಂದು ಬೇರನ್ನು ಸಾಯಿಸುವ ಕೆಲಸಗಳು ನಡೆಯುತ್ತಿವೆ. ಯುವಕರು ತಮ್ಮ ಸಂಸ್ಕೃತಿಯನ್ನು ಬಿಟ್ಟು ಅನ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಇಂತಹ ದಿನಗಳಲ್ಲಿ ಸರ್ಕಾರವು ರೂಪಿಸಿರುವ ಜನಪದ ಸಂಸ್ಕೃತಿಯಂತಹ ಕಾರ್ಯಕ್ರಮಗಳು ಜನರನ್ನು ತಲುಪಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಉತ್ತಮವಾದ ಕಾರ್ಯಕ್ರಮವನ್ನು ರೂಪಿಸಿದ್ದು ಇದರ ಉದ್ದೇಶ ಈಡೇರಲಿ, ಶಾಸಕ ಹೆಚ್.ಟಿ.ಮಂಜು ಹೇಳಿದರು.


ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಆಯೋಜಿಸಿದ್ದ ಜಾನಪದ ಉತ್ಸವದಲ್ಲಿ ಎತ್ತಿನಗಾಡಿಯನ್ನು ಚಾಲನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಮ್ಮ ವಿದ್ಯಾಭ್ಯಾಸದ ಅವಧಿಯ ಶಾಲಾ-ಕಾಲೇಜು ದಿನಗಳ ನೆನಪುಗಳನ್ನು ಮೆಲುಕು ಹಾಕಿದ ಶಾಸಕರು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಅವಧಿಯಲ್ಲಿ ಬೇರೆ ವಿಷಯಗಳತ್ತ ಗಮನ ಹರಿಸದೇ ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು. ಶ್ರದ್ದಾಭಕ್ತಿಯಿಂದ ವಿದ್ಯಾಭ್ಯಾಸ ಮಾಡಿ ತಮ್ಮ ಗುರಿ ಸಾಧನೆ ಮಾಡಬೇಕು.

ಈ ಮೂಲಕ ತಮ್ಮ ತಂದೆ-ತಾಯಿಗಳಿಗೆ, ಹುಟ್ಟೂರಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು. ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ, ಸಮಾಜ ಸೇವಕರು ಹಾಗೂ ತಾಲ್ಲೂಕು ರೋಟರಿ ಕ್ಲಬ್ ಅಧ್ಯಕ್ಷ ಆರ್‌ಟಿಓ ಮಲ್ಲಿಕಾರ್ಜುನ್, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕೆ.ಎಂ.ವಾಸು, ಪ್ರಾಂಶುಪಾಲ ಡಾ.ವಿ.ವಿ.ಜಗದೀಶ್ ಮತ್ತಿತರ ಗಣ್ಯರು ಎತ್ತಿನ ಬಂಡಿಯಲ್ಲಿ ಶಾಸಕರ ಜೊತೆಗೂಡಿ ಮೆರವಣಿಗೆಯಲ್ಲಿ ಸಾಗಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ, ರೋಟರಿ ಕ್ಲಬ್ ಅಧ್ಯಕ್ಷ ಆರ್‌ಟಿಓ ಮಲ್ಲಿಕಾರ್ಜುನ್ ಮಾತನಾಡಿ, ಇಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಗೂ ಕಾಲೇಜಿನಲ್ಲಿ ಹಳ್ಳಿ ಸೊಗಡು ಕಂಡು ಬರುತ್ತಿದೆ. ರೈತರು ಆಹಾರ ಧಾನ್ಯಗಳ ಸಂಸ್ಕರಣೆಗೆ ಉಪಯೋಗಿಸುವ ಕಣವನ್ನು ಮಾಡಲಾಗಿದೆ. ಕಣದಲ್ಲಿ ಭತ್ತದ ರಾಶಿ, ರಾಗಿಯ ರಾಶಿ, ಕಬ್ಬುಗಳು, ರಾಗಿಯ ತೆನೆಗಳು, ಹಿಂದೆ ಗ್ರಾಮೀಣ ಭಾಗದಲ್ಲಿ ಉಪಯೋಗಿಸುತ್ತಿದ್ದ ಮೊರ, ವಂದರಿ, ಒನಕೆ, ಮಡಿಕೆಗಳು, ಗುಡಾಣಗಳು ಹೀಗೆ ಹತ್ತು ಹಲವು ಜಾನಪದ ವಸ್ತುಗಳಿಂದ ಸಿಂಗರಿಸಲಾಗಿದೆ.

ರೈತರ ಜೀವನಾಡಿ ಎತ್ತುಗಳನ್ನು ಕಟ್ಟುವ ಮೂಲಕ ಗ್ರಾಮೀಣ ವೈಭವವನ್ನು ತರಿಸಲಾಗಿದೆ. ಎತ್ತಿನಗಾಡಿಗಳು ಮೆರವಣಿಗೆ, ಹಳ್ಳಿಕಾರ್ ಜೋಡೆತ್ತುಗಳ ಮೆರವಣಿಗೆ ನಿಜಕ್ಕೂ ನಮ್ಮ ಜನಪದ ಸಂಸ್ಕೃತಿಯೇ ಶ್ರೇಷ್ಠ ಎಂಬ ಭಾವನೆಯನ್ನು ಮೂಡಿಸಿದೆ ಇಷ್ಟೊಂದು ಸುಂದರವಾಗಿ ಕಾರ್ಯಕ್ರಮ ರೂಪಿಸಿರುವ ಕಾಲೇಜಿನ ಎಲ್ಲಾ ಉಪನ್ಯಾಸಕರಿಗೆ ನಾನು ಅಭಿನಂದಿಸುವುದಾಗಿ ಆರ್.ಟಿ.ಓ. ಮಲ್ಲಿಕಾರ್ಜುನ್ ತಿಳಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ ಧಾನ್ಯ ರಾಶಿ ಪೂಜೆಯನ್ನು ನೆರವೇರಿಸಿ ಮಾತನಾಡಿ, ಮಂಡ್ಯ ಹೇಳಿ ಕೇಳಿ ಜನಪದರ ತವರೂರು. ನಮ್ಮ ಚಡ್ಡಿ ಸಂಸ್ಕೃತಿ ಇಂಡಿಯಾದಲ್ಲಿಯೆ ಫೇಮಸ್. ಇಂತಹ ಸಂಸ್ಕೃತಿಯನ್ನು ಮಂಡ್ಯದ ಜನರಾದ ನಾವುಗಳು ಉಳಿಸಿ ಬೆಳೆಸಬೇಕು. ಇಂದು ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೂಡಾ ದೇಸಿ ಉಡುಗೆಗಳನ್ನು ತೊಟ್ಟು ಬಂದಿದ್ದೀರಿ. ಎಷ್ಟು ಚಂದ ಕಾಣುತ್ತಿದ್ದೀರಿ. ಇದು ನಿಜವಾಗಿಯೂ ನಮ್ಮ ಮಧ್ಯೆ ಉಳಿಯಬೇಕಾದದ್ದು. ಇಂದು ಕೆ.ಆರ್.ಪೇಟೆಯಲ್ಲಿ ಆ ಸಂಸ್ಕೃತಿ ಉಳಿದಿದೆ.

ನಿಜವಾಗಿಯೂ ವಿದ್ಯಾರ್ಥಿಗಳ ಶಿಸ್ತು ಎಲ್ಲರೂ ಮೆಚ್ಚುವಂತಹದ್ದು. ತಾವೆ ತಯಾರಿಸಿ ನಮಗೆ ಊಟವನ್ನು ಬಡಿಸಿದ್ದೀರಿ. ಹುರುಳಿಕಾಳು, ಹಲಸಂದೆ ಕಾಳುಗಳ ಪಲ್ಯ, ರಾಗಿಮುದ್ದೆ, ನಾಟಿಕೋಳಿ ಸಾರು, ಒಬ್ಬಟ್ಟು, ತಂಬಿಟ್ಟು ಒಂದಾ ಎರಡಾ. ಇದು ನಮ್ಮ ಹೆಣ್ಣು ಮಕ್ಕಳ ಸಂಸ್ಕೃತಿ. ಇದು ಹೀಗೆಯೆ ಮುಂದುವರೆಯಲಿ ಎಂದು ಆಶಿಸಿದರು.


ಜಾನಪದ ಪರಿಷತ್ ಅಧ್ಯಕ್ಷ ಕೆ.ಎಂ.ವಾಸು, ಮಾಜಿ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಕಾಲೇಜಿನ ಪ್ರಾಂಶುಪಾಲ ಡಾ.ವಿ.ವಿ.ಜಗದೀಶ್, ಪ್ರಾಧ್ಯಾಪಕರುಗಳಾದ ಡಾ.ಸಿ.ರಮೇಶ್, ಡಾ.ಸವಿತಾ, ಡಾ.ಮಹೇಶ್, ಡಾ.ಜಯಕೀರ್ತಿ, ಎಂ.ಬೋರೇಗೌಡ, ಕುಮಾರಸ್ವಾಮಿ, ಸುರೇಶ್, ಶಿವಕುಮಾರಸ್ವಾಮಿ, ರಘು, ಪ್ರಕಾಶ್, ಉಮೇಶ್, ರೂಪಾ, ಪುಷ್ಪ, ಶಿಲ್ಪ, ಪತ್ರಾಂಕಿತ ವ್ಯವಸ್ಥಾಪಕರುಗಳಾದ ಬಿ.ಎ.ಮಂಜುನಾಥ್, ಭುವನೇಶ್ವರಿ ಸೇರಿದಂತೆ ಕಾಲೇಜಿನ ಅಧ್ಯಾಪಕ ವರ್ಗ, ಉಪನ್ಯಾಸಕ ವರ್ಗ, ಆಡಳಿತ ಸಿಬ್ಬಂದಿ ವರ್ಗದವರು ಹಾಜರಿದ್ದರು.

-ಶ್ರೀನಿವಾಸ ಆರ್.

Leave a Reply

Your email address will not be published. Required fields are marked *

× How can I help you?