ಕೆ.ಆರ್.ಪೇಟೆ: ಸರ್ಕಾರಿ ನೌಕರಿಯಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದೆ. ಶಿಕ್ಷಕರಾಗಿ ಸೇವೆ ಸಲ್ಲಿಸಲು ಅವಕಾಶ ಸಿಗುವುದು ಪೂರ್ವ ಜನ್ಮದ ಪುಣ್ಯವಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್.ಪೂರ್ಣಚಂದ್ರತೇಜಸ್ವಿ ಹೇಳಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಅರೆಬೊಪ್ಪನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತ ಕೃಷ್ಣೇಗೌಡ ಅವರಿಗೆ ಶಾಲೆಯ ಎಸ್.ಡಿ.ಎಂ.ಸಿ ಸಮಿತಿ, ಗ್ರಾಮಸ್ಥರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ, ನಿವೃತ್ತರಾದ ಕೃಷ್ಣೇಗೌಡರಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ಅರೆಬೊಪ್ಪನಹಳ್ಳಿಯ ಶಾಲೆಯ ಪರಿಸರವನ್ನು ಕೈತೋಟದ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಮೂಲಕ ಗಮನ ಸೆಳೆದಿರುವ ಕೃಷ್ಣೇಗೌಡರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಶಾಲೆಗೆ ಉತ್ತಮ ಪರಿಸರ ಪ್ರಶಸ್ತಿಯನ್ನು ಪಡೆದುಕೊಳ್ಳುವ ಮೂಲಕ ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಇವರ ಜೊತೆಗೆ ಶಾಲೆಯ ಶೈಕ್ಷಣಿಕ ಅಭಿವೃದ್ದಿ ಮತ್ತು ಶಾಲಾ ಪರಿಸರ ಅಭಿವೃದ್ಧಿಗೆ ಕೈಜೋಡಿಸಿರುವ ಸಹ ಶಿಕ್ಷಕಿ ವಾಣಿ ರವಿಕುಮಾರ್ ಅವರ ಪರಿಶ್ರಮದಿಂದ ಅರೆಬೊಪ್ಪನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯು ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಹೆಸರು ಗಳಿಸಲು ಸಾಧ್ಯವಾಯಿತು.

12ವರ್ಷಗಳ ಹಿಂದೆ ಕೃಷ್ಣೇಗೌಡರು ಶಾಲೆಗೆ ಬಂದಾಗ ಕೇವಲ ಏಳೆಂಟು ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದರು. ನಂತರ ಮುಖ್ಯ ಶಿಕ್ಷಕ ಕೃಷ್ಣೇಗೌಡ ಮತ್ತು ಸಹ ಶಿಕ್ಷಕಿ ವಾಣಿ ರವಿಕುಮಾರ್ ಅವರು ಶಾಲೆಗೆ ಬಂದ ನಂತರ ಪೋಷಕರ ಮನವೊಲಿಸಿ, ಶಾಲೆಯ ದಾಖಲಾತಿಯನ್ನು ಹೆಚ್ಚಿಸಲು ಮೊದಲ ಆಧ್ಯತೆ ನೀಡಿದರು. ಪರಿಣಾಮವಾಗಿ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಇಬ್ಬರೂ ಶಿಕ್ಷಕರಾದ ಕೃಷ್ಣೇಗೌಡ ಮತ್ತು ವಾಣಿ ಅವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವುದು ಶಾಲೆಯ ಶೈಕ್ಷಣಿಕ ಪ್ರಗತಿ ಹಾಗೂ ಶಾಲಾ ಪರಿಸರ ಪ್ರಗತಿಯನ್ನು ಸೂಚಿಸುತ್ತದೆ. ಇಂತಹ ಅರ್ಪಣಾ ಭಾವನೆಯಿಂದ ಸೇವೆ ಸಲ್ಲಿಸುವ ಶಿಕ್ಷಕರು ಇರುವ ಗ್ರಾಮಗಳಲ್ಲಿ ಶಾಲೆಯು ಸಮಗ್ರ ಅಭಿವೃದ್ಧಿ ಕಾಣುತ್ತದೆ. ಇಂತಹ ಜನಮನ್ನಣೆ ಗಳಿಸಿರುವ ಕೃಷ್ಣೇಗೌಡರ ಬೀಳ್ಕೊಡುಗೆ ಸಮಾರಂಭಕ್ಕೆ ನೂರಾರು ಗ್ರಾಮಸ್ಥರು. ಪೋಷಕರು ಭಾಗವಹಿಸಿರುವುದು ಕೃಷ್ಣೇಗೌಡರ ವೃತ್ತಿ ಬದುಕಿನ ಸಾರ್ಥಕತೆಯನ್ನು ಸೂಚಿಸುತ್ತದೆ ಎಂದು ಹೇಳಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ರಾಜೇನಹಳ್ಳಿ ಪದ್ಮೇಶ್ ಮಾತನಾಡಿ, ಕೃಷ್ಣೇಗೌಡ ಅವರು 12 ವರ್ಷಗಳ ಹಿಂದೆ ಈ ಶಾಲೆಯಲ್ಲಿ ಶಿಕ್ಷಕರಾಗಿ ಬಂದಾಗ ಈ ಶಾಲೆಯು ಹಾಳು ಕೊಂಪೆಯಂತಿತ್ತು. ಶಾಲೆಯ ಮಧ್ಯೆ ಬಂಡೆ ಇತ್ತು. ಅನುಪಯುಕ್ತ ಗಿಡಗಂಟಿಗಳು ಬೆಳೆದುಕೊಂಡು ಹಾವು-ಹಲ್ಲಿಗಳ ವಾಸಸ್ಥಾನವಾಗಿತ್ತು. 10ವರ್ಷಗಳ ಹಿಂದೆ ಶಾಲೆಗೆ ಬಂದ ಸಹ ಶಿಕ್ಷಕಿ ವಾಣಿ ಮತ್ತು ಮುಖ್ಯ ಶಿಕ್ಷಕ ಕೃಷ್ಣೇಗೌಡ ಅವರು ಜೋಡೆತ್ತುಗಳಂತೆ ಶಾಲೆಯನ್ನು ಅಭಿವೃದ್ಧಿಪಡಿಸಿ ಶಾಲೆಗೆ ಪರಿಸರ ಪ್ರಶಸ್ತಿಯನ್ನು ತಂದು ಕೊಟ್ಟಿದ್ದಾರೆ. ಶಾಲೆಯಲ್ಲಿ ಎಲ್ಲಾ ಬಗೆಯ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಶಾಲೆಯ ಪರಿಸರವನ್ನು ನೋಡಿದರೆ ಸುಂದರ ಉದ್ಯಾನವನಕ್ಕೆ ಬಂದಂತೆ ಭಾಸವಾಗುತ್ತದೆ. ಹೀಗೆ ಶಾಲೆಯನ್ನು ಅಭಿವೃದ್ದಿ ಪೋಷಕರು ಮತ್ತು ಮಕ್ಕಳನ್ನು ಆಕರ್ಷಣೆ ಮಾಡಿ ಮಕ್ಕಳು ಸರ್ಕಾರಿ ಶಾಲೆಯತ್ತ ಮುಖ ಮಾಡುವಂತೆ ಮಾಡಿ ದಾಖಲಾತಿಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೃಷ್ಣೇಗೌಡರು ಮುಖ್ಯ ಶಿಕ್ಷಕರಾಗಿ ಗ್ರಾಮದಲ್ಲಿ ಒಳ್ಳೆಯ ಹೆಸರು ಮತ್ತು ಪ್ರೀತಿ ವಿಶ್ವಾಸವನ್ನು ಸಂಪಾದನೆ ಮಾಡಿದ್ದಾರೆ. ಇಂತಹ ಉತ್ತಮ ಶಿಕ್ಷಕರು ನಿವೃತ್ತರಾಗುತ್ತಿರುವುದು ಶಿಕ್ಷಕ ವೃಂದಕ್ಕೆ ನೋವುಂಟು ಮಾಡಿದೆ. ಆದರೂ ಸರ್ಕಾರಿ ಸೇವೆಯಿಂದ ನಿವೃತ್ತಯಾಗುವುದು ಅನಿವಾರ್ಯವಾಗಿದೆ. ಗ್ರಾಮದಲ್ಲಿ ಒಳ್ಳೆಯ ಹೆಸರು ಗಳಿಸಿ ನೂರಾರು ಜನರ ಸಮ್ಮುಖದಲ್ಲಿ ನಿವೃತ್ತಿಯಾಗುತ್ತಿರುವ ಕೃಷ್ಣೇಗೌಡರ ನಿವೃತ್ತಿ ಜೀವನವು ಸುಖಮಯವಾಗಿರಲಿ ಎಂದು ಪದ್ಮೇಶ್ ಶುಭ ಹಾರೈಸಿದರು.
ಗ್ರಾಮಸ್ಥರು ಹಾಗೂ ವೃತ್ತಿ ಬಾಂಧವರು ನೀಡಿದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಕೃಷ್ಣೇಗೌಡ ಅವರು ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕನಾಗಿ ಮಕ್ಕಳೊಂದಿಗೆ ಕರ್ತವ್ಯ ನಿರ್ವಹಿಸಲು ನನಗೆ ದೊರೆತ ಅವಕಾಶ ನನಗೆ ದೇವರು ನೀಡಿದ ವರ ಎಂದು ಭಾವಿಸಿ ಆತ್ಮ ಸಂತೋಷದಿಂದ ಕೆಲಸ ಮಾಡಿದ್ದೇನೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಕಂಡು ನನಗೆ ಸಂತೋಷವಾಗಿದೆ. ಶಾಲೆಯಲ್ಲಿ 29ವರ್ಷಗಳನ್ನು ನಾನು ಕಳೆದಿರುವುದೆ ಗೊತ್ತಾಗಲಿಲ್ಲ. ನಾನು ಕರ್ತವ್ಯ ನಿರ್ವಹಿಸಿದ ಶಾಲೆಗಳಲ್ಲಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನನಗೆ ಸಂಪೂರ್ಣ ಸಹಕಾರ ನೀಡಿದ್ದಾರೆ.
ಅದರಲ್ಲೂ ಅರೆಬೊಪ್ಪನಹಳ್ಳಿ ಗ್ರಾಮದ ಶಾಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯವಾಗಿದೆ ಏಕೆಂದರೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅಪಾರವಾಗಿದೆ. ಇಂತಹ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುವ ಸೌಭಾಗ್ಯ ನನಗೆ ಸಿಕ್ಕಿದ್ದು ನನ್ನ ಸೌಭಾಗ್ಯವಾಗಿದೆ. ನನಗೆ ಸಿಕ್ಕ 12ವರ್ಷಗಳ ಅವಧಿಯಲ್ಲಿ ಪ್ರಾಮಾಣಿಕವಾಗಿ ಶಾಲೆ ಮತ್ತು ಮಕ್ಕಳ ಅಭಿವೃದ್ಧಿಗೆ ಕರ್ತವ್ಯ ನಿರ್ವಹಿಸಿ ಸಂತೋಷದಿದ ನಿವೃತ್ತಿಯಾಗುತ್ತಿದ್ದೇನೆ ಎಂದು ಭಾವುಕರಾಗಿ ತಿಳಿಸಿದರು. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸತೀಶ್ ಬೀಳ್ಕುಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ತಾಲ್ಲೂಕು ಟಿಎಪಿಸಿಎಂಎಸ್ ನಿರ್ದೇಶಕ ಅಶೋಕ್, ಗ್ರಾಮ ಪಂಚಾಯಿತಿ ಸದಸ್ಯರಾದ ದಿನೇಶ್, ರೇವತಿ ಹರೀಶ್, ಪುಟ್ಟಸ್ವಾಮೀಗೌಡ, ನವೀನ್‌ಕುಮಾರ್, ವಕೀಲೆ ಮಂಜುಳಾ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಲ್.ಎಸ್.ಧರ್ಮಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ರಾಜೇನಹಳ್ಳಿ ಪದ್ಮೇಶ್ ತಾಲ್ಲೂಕು ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ರಮೇಶ್, ನಿರ್ದೇಶಕ ಎ.ಹೆಚ್.ಯೋಗೇಶ್, ಹಳೆಯೂರು ಯೋಗೇಶ್, ದೊರೆಸ್ವಾಮಿ, ಕೆ.ಆರ್.ಚಿಕ್ಕಸ್ವಾಮಿ, ರಾಮಕೃಷ್ಣ, ಸಂಧ್ಯಾರಾಣಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ.ಪಿ.ಬೋರೇಗೌಡ, ಸಿ.ಆರ್.ಪಿ.ಮಂಜುನಾಥ್, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಪಿ.ಬಿ.ನಾಗರಾಜು, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಜಿ.ಎಸ್.ಮಂಜು, ಶೀಳನೆರೆ ಶಿವಕುಮಾರ್, ಶಂಕರೇಗೌಡ, ಎಸ್.ಸಿ.ನಾಗೇಶ್, ಚಿಲ್ಲದಹಳ್ಳಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಮೇಶ್, ಅಗ್ರಹಾರಬಾಚಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಯೋಗೇಶ್, ತಮ್ಮಯ್ಯ, ಶಾಂತಕುಮಾರಿ, ದಕ್ಷಿಣ ಶಾಲೆಯ ಮುಖ್ಯ ಶಿಕ್ಷಕ ಸಣ್ಣೇಗೌಡ, ಹಳೆಯೂರು ಯೋಗೇಶ್, ಮಂದಗೆರೆ ಉರ್ದು ಶಾಲೆಯ ಶಿಕ್ಷಕ ಕೆ.ದೇವರಾಜು, ಬಲರಾಂ, ಬೀರುವಳ್ಳಿ ಲೋಕೇಶ್, ಭಾರತೀಪುರ ಶಾಲೆಯ ಶಿಕ್ಷಕ ರವಿಕುಮಾರ್ ಸೇರಿದಂತೆ ಶಾಲೆಯ ಎಸ್.ಡಿ.ಎಂ.ಸಿ ಸಮಿತಿಯ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ನೂರಾರು ಗ್ರಾಮಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು
– ಶ್ರೀನಿವಾಸ್ ಆರ್.