ಕೆ.ಆರ್.ಪೇಟೆ-ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ 2024-25ಸಾಲಿನ ಗ್ರಾಮ ಸಭೆಗೆ ಗೈರು ಹಾಜರಾಗಿದ್ದ ನರೇಗಾ ತಾಂತ್ರಿಕ ಇಂಜಿನಿಯರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನೋಟೀಸ್ ನೀಡಲು ಗ್ರಾಮಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ದಿವಿಕುಮಾರ್ ನೇತೃತ್ವದಲ್ಲಿ ಬೆಳಿಗ್ಗೆ 11ಗಂಟೆಗೆ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು.ಗ್ರಾಮಸಭೆಗೆ ಎಲ್ಲಾ ಇಲಾಖೆಗಳಿಗೂ ಆಹ್ವಾನ ನೀಡಲಾಗಿತ್ತು. ಆದರೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ರೇಷ್ಮೇ ಇಲಾಖೆಯ ಅಧಿಕಾರಿಗಳನ್ನು ಹೊರತು ಪಡಿಸಿ ಉಳಿದ ಯಾವುದೇ ಅಧಿಕಾರಿಗಳು ಮಧ್ಯಾಹ್ನ 1ಗಂಟೆಯಾದರೂ ಆಗಮಿಸದೇ ಇರುವ ಕಾರಣ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.
ಕೇವಲ ಐವರು ಅಧಿಕಾರಿಗಳು ಮಾತ್ರ ಸಭೆಗೆ ಬಂದಿದ್ದಾರೆ. ಪ್ರಮುಖವಾಗಿ ನರೇಗಾ ಇಂಜಿನಿಯರ್ ಚಂದನ್ ಬಂದಿಲ್ಲ. ವಿದ್ಯುತ್ ಸಮಸ್ಯೆ ಹೇಳಿಕೊಳ್ಳಲು ಚೆಸ್ಕಾಂ ಅಧಿಕಾರಿಗಳು ಬಂದಿಲ್ಲ. ಬಿಸಿಎಂ ವಿಭಾಗದ ಅಧಿಕಾರಿಗಳು ಬಂದಿಲ್ಲ. ರೈತರಿಗೆ ಅತೀ ಅಗತ್ಯವಾಗಿರುವ ಕೃಷಿ, ತೋಟಗಾರಿಕೆ, ಅಧಿಕಾರಿಗಳು ಮಾಹಿತಿ ನೀಡಿಲು ಬಂದಿಲ್ಲ ಹಾಗಾಗಿ ಗ್ರಾಮ ಸಭೆಯನ್ನು ರದ್ದು ಮಾಡುವಂತೆ ತಾಲ್ಲೂಕು ಕರವೇ ಅಧ್ಯಕ್ಷರಾದ ಎ.ಎಸ್.ಶ್ರೀನಿವಾಸ್ ಮತ್ತು ಆರ್.ಟಿ.ಐ ಕಾರ್ಯಕರ್ತ ಗುಡ್ಡೇನಹಳ್ಳಿ ಕಿರಣ್ಕುಮಾರ್ ಅವರು ಪಿ.ಡಿ.ಓ ಹರ್ಷವರ್ಧನ್ ಮತ್ತು ಅಧ್ಯಕ್ಷ ದಿವಿಕುಮಾರ್ ಅವರನ್ನು ಒತ್ತಾಯ ಮಾಡಿದರು.
ಆಗ ಉತ್ತರಿಸಿದ ಪಿ.ಡಿ.ಓ ಅವರು ನಾವು ಗ್ರಾಮ ಪಂಚಾಯಿತಿ ವತಿಯಿಂದ ಅಧಿಕಾರಿಗಳಿಗೆ ಆಹ್ವಾನ ಪತ್ರವನ್ನು ನೀಡಿ ಸಹಿ ಪಡೆದಿರುವ ದಾಖಲೆಗಳನ್ನು ಬಿಡುಗಡೆ ಮಾಡಿ ಮುಂದಿನ ಸಭೆಗೆ ಎಲ್ಲಾ ಅಧಿಕಾರಿಗಳನ್ನು ಕಡ್ಡಾಯವಾಗಿ ಹಾಜರಿರುವಂತೆ ನೋಡಿಕೊಳ್ಳಲಾಗುವುದು.ಇಂದಿನ ಸಭೆಗೆ ಗೈರು ಹಾಜರಾಗಿರುವ ಇಲಾಖೆಯ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಪಿ.ಡಿ.ಓ ಹರ್ಷವರ್ಧನ್ ನಡಾವಳಿ ಪುಸ್ತಕದಲ್ಲಿ ದಾಖಲಿಸಿ, ಸಾರ್ವಜನಿಕರನ್ನು ಮನವೊಲಿಸಿ ಗ್ರಾಮಸಭೆಯನ್ನು ನಡೆಸಿದರು.
ಗ್ರಾ.ಪಂ.ಪಿಡಿಓ ಭರವಸೆ ನೀಡಿದ ನಂತರ ಸಭೆ ಮುಂದುವರೆಸಲು ಸಾರ್ವಜನಿಕರಿಂದ ಸಹಮತ ವ್ಯಕ್ತವಾಯಿತು.
ಸಭೆಯಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ದಿವಿಕುಮಾರ್,ಗ್ರಾಮ ಪಂಚಾಯಿತಿ ಎಂದರೆ ಸ್ಥಳೀಯ ಆಡಳಿತ ಎಂದು ಸರ್ಕಾರವು ಘೋಷಣೆ ಮಾಡಿದೆ. ಗ್ರಾಮ ಪಂಚಾಯಿತಿ ವತಿಯಿಂದ ಆಹ್ವಾನ ಪತ್ರಿಕೆಯನ್ನು ಒಂದು ವಾರ ಮುಂಚಿತವಾಗಿ ಎಲ್ಲಾ ಇಲಾಖೆಗಳಿಗೆ ನೀಡಿ ಮೊಹರಿನೊಂದಿಗೆ ಸಹಿ ಪಡೆದುಕೊಳ್ಳಲಾಗಿದೆ.ಆದರೂ ಐವರು ಅಧಿಕಾರಿಗಳನ್ನು ಹೊರತು ಪಡಿಸಿ ಉಳಿದ ಇಲಾಖೆಯಗಳ ಅಧಿಕಾರಿಗಳ ಬಾರದೇ ನಿರ್ಲಕ್ಷ್ಯ ಮಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ.ಇದು ಮುಂದಿನ ದಿನಗಳಲ್ಲಿ ಮರುಕಳಿಸಬಾರದು ಎಂದು ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಗೈರು ಹಾಜರಾಗಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದರು.ಸಾರ್ವಜನಿಕರು ಸಹ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದೇ ಇರುವುದು ಸರಿಯಲ್ಲ ಎಂದು ಗ್ರಾ.ಪಂ.ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರ್ಷವರ್ಧನ್ ಸಭೆಗೆ ಅಗತ್ಯ ಮಾಹಿತಿ ಒದಗಿಸಿದರು.
ಸಭೆಯಲ್ಲಿ ನೋಡಲ್ ಅಧಿಕಾರಿ ದಿವಾಕರ್, ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ರಮೇಶ್, ಚನ್ನೇಗೌಡ, ಚಿಕ್ಕೋಸಹಳ್ಳಿ ಕುಮಾರ್, ಸಾವಿತ್ರಮ್ಮ, ಶ್ರೀನಿವಾಸ್.ಆರ್. ಫಯಾಜ್, ಮುಖ್ಯ ಶಿಕ್ಷಕ ಎ.ಹೆಚ್.ಯೋಗೇಶ್, ಮುಖಂಡರಾದ ಸಿ.ಆರ್.ಪಿ.ಕುಮಾರ್, ದ್ಯಾವಯ್ಯ, ಹರೀಶ್, ಆನಂದ್, ರಾಜಸ್ವ ನಿರೀಕ್ಷಕ ಜ್ಞಾನೇಶ್, ಗ್ರಾಮ ಲೆಕ್ಕಾಧಿಕಾರಿ ಸುನಿಲ್, ಸುಧಾಕರ್, ರೇಷ್ಮೆ ಇಲಾಖೆಯ ಶಿವಾನಂದ್, ಬಿಲ್ ಕಲೆಕ್ಟರ್ ನರಸಿಂಹಯ್ಯ, ಡಿಇಓ ತ್ರಿವೇಣಿ, ಗ್ರಂಥಪಾಲಕಿ ಸೌಮ್ಯ, ನೇತ್ರಾವತಿ, ಮೆಣಸ ತ್ರಿವೇಣಿ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸಾರ್ವಜನಿಕರು, ರೈತರು, ರೈತ ಮಹಿಳೆಯರು ಮತ್ತಿತರರು ಉಪಸ್ಥಿತರಿದ್ದರು.
———-ಶ್ರೀನಿವಾಸ್ ಕೆ ಆರ್ ಪೇಟೆ