ಕೆ .ಆರ್.ಪೇಟೆ-ದೇಶದ-ಬಡವರು-ಮತ್ತು-ಶೋಷಿತ-ವರ್ಗಗಳಿಗೆ- ಅರಿವು-ಮತ್ತು-ಹಕ್ಕು-ಕೊಟ್ಟ-ಮಹಾನ್-ನಾಯಕ-ಅಂಬೇಡ್ಕರ್-ಸಾಮಾಜಿಕ-ಚಿಂತಕ-ಡಾ.ಹೆಚ್.ವಿ.ವಾಸು

ಕೆ .ಆರ್.ಪೇಟೆ: ದೇಶದ ಬಡವರು ಮತ್ತು ಶೋಷಿತ ವರ್ಗಗಳಿಗೆ ಅರಿವು ಮತ್ತು ಹಕ್ಕು ಕೊಟ್ಟ ಮಹಾನ್ ನಾಯಕ ಅಂಬೇಡ್ಕರ್ ಅವರ ಜೀವನದ ಹೋರಾಟದ ಗುಣಗಳನ್ನು ಎಲ್ಲರೂ ಬೆಳಸಿಕೊಂಡರೆ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ನಾಡಿನ ಹೆಸರಾಂತ ಸಾಮಾಜಿಕ ಚಿಂತಕ ಡಾ.ಹೆಚ್.ವಿ.ವಾಸು ಹೇಳಿದರು.

ಅವರು ಕೆ.ಆರ್.ಪೇಟೆ ಪಟ್ಟಣದ ಶತಮಾನದ ಶಾಲಾ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಆಗಮಿಸಿ ಅಂಬೇಡ್ಕರ್ ಅವರು ಸ್ವತಂತ್ರ ಭಾರತದ ದಲಿತರು, ಹಿಂದುಳಿದವರು, ಹಾಗೂ ಶೋಷಿತ ವರ್ಗಗಳಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಮಾಡಿದ ಕಾನೂನುಗಳು, ಹೋರಾಟಗಳು ಕಾರ್ಯಕ್ರಮಗಳನ್ನು ಕುರಿತು ಮಾತನಾಡಿದರು.

ಪ್ರಾಯಶಃ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯಲ್ಲಿ ಇಲ್ಲದೇ ಇದ್ದಿದ್ದರೆ ದೇಶದ ದಲಿತ ಬಂಧುಗಳು, ಎಲ್ಲಾ ವರ್ಗದ ಬಡವರು, ಕಾರ್ಮಿಕರು, ಮಹಿಳೆಯರಿಗೆ ಹಕ್ಕುಗಳನ್ನು ಬೇರೆ ಯಾರೂ ಸಹ ಕಾನೂನು ಪ್ರಕಾರ ನೀಡುತ್ತಿರಲಿಲ್ಲ. ಇಂತಹ ಅಪರೂಪದ ಮಾಣಿಕ್ಯ ಡಾ.ಬಿ.ಆರ್.ಅಂಬೇಡ್ಕರ್ ಅವರು ಇಡಿ ವಿಶ್ವವೇ ಮೆಚ್ಚುವಂತಹ ಶ್ರೇಷ್ಠ ಸಂವಿಧಾನವನ್ನು ರಚಿಸಿಕೊಡುವ ಮೂಲಕ ದೇಶದ ಜನತೆಗೆ ಆಧಾರಸ್ತಂಭವಾಗಿದ್ದಾರೆ. ದೇಶ ಸ್ವಾತಂತ್ರ್ಯ ಪಡೆದ ತಕ್ಷಣ 14ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯ ಶಿಕ್ಷಣ ನೀಡಿದರು. ಮಹಿಳೆಯರಿಗೂ ಮತದಾನದ ಹಕ್ಕು ನೀಡಿದರು. ಅಮೇರಿಕಾ, ಇಂಗ್ಲೆಂಡ್ ದೇಶಗಳು ಅಸ್ತಿತ್ವಕ್ಕೆ ಬಂದ ನೂರಾರು ವರ್ಷಗಳ ನಂತರ ಮಹಿಳೆಯರಿಗೆ ಮತದಾನ ಹಕ್ಕು ನೀಡಲಾಯಿತು. ಆದರೆ ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ದೇಶ ಸ್ವಾತಂತ್ರ್ಯ ಪಡೆದ ತಕ್ಷಣವೇ ನೀಡಲಾಯಿತು.

ದೇಶದ ಕಾರ್ಮಿಕರಿಗೆ ವಿಶೇಷ ಹಕ್ಕುಗಳನ್ನು ನೀಡುವ ಮೂಲಕ ದೇಶದ ಸರ್ವ ಜನಾಂಗದ ಆಸ್ತಿಯಾದರು. ಇಂತಹ ಅಂಬೇಡ್ಕರ್ ಅವರನ್ನು ರಾಜಕೀಯ ಪಕ್ಷಗಳು 80ರ ದಶಕದ ವರೆಗೆ ಕಡೆಗಸಿದವು. ಆಗ ಡಿ.ಎಸ್.ಎಸ್. ಸಂಘಟನೆಗಳು, ರೈತ ಚಳುವಳಿಗಳು ಅಂಬೇಡ್ಕರ್ ಚಿಂತನೆಗಳನ್ನು ಮುಂದಿಟ್ಟುಕೊಂಡು ಚಳುವಳಿ‌ನಡೆಸಿ ಅಂಬೇಡ್ಕರ್ ಅವರನ್ನು ಮರೆತ ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು ಮುಂದಾದವು ಇದರ ಪರಿಣಾಮವಾಗಿ ಮತ್ತೆ ರಾಜಕೀಯ ಪಕ್ಷಗಳು ಅಂಬೇಡ್ಕರ್ ಅನಿವಾರ್ಯತೆಯನ್ನು‌ ಮನಗಂಡು ಮತ್ತೆ ಅಂಬೇಡ್ಕರ್ ಜಪ ಮಾಡಲು ಆರಂಭಿಸಿದವು. ಈಗ ಅಂಬೇಡ್ಕರ್ ಅವರನ್ನು ಯಾವುದೇ ಪಕ್ಷಗಳು ಕಡೆಗಣಿಸದೇ ಆರಾಧಿಸುತ್ತಿವೆ.

ಇದು ದಲಿತ ಮತ್ತು ರೈತ ಚಳುವಳಿಯಿಂದ ಮಾತ್ರ ಸಾಧ್ಯವಾಯಿತು. ಹಾಗಾಗಿ ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟ ಸಿದ್ದಾಂತವನ್ನು ಸದಾ ಜೀವಂತವಾಗಿಡುವ ಮೂಲಕ ರಾಜಕೀಯ ಪಕ್ಷಗಳಿಗೆ ನಡುಕ ಹುಟ್ಟಿಸಬೇಕು. ಕಡ್ಡಾಯವಾಗಿ ಶಿಕ್ಷಣ ಪಡೆದುಕೊಳ್ಳಬೇಕು. ಸಂಘಟಿತರಾಗಬೇಕು. ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೆಚ್.ವಿ.ವಾಸು ಕರೆ ನೀಡಿದರು.

ಶಾಸಕ ಹೆಚ್.ಟಿ.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣದ ಯಾವುದಾದರೊಂದು ಪ್ರಮುಖ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು ನನ್ನ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎನ್.ತಿಮ್ಮೇಗೌಡ ಅಂಬೇಡ್ಕರ್ ಅವರ ಸಂವಿಧಾನ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷೆ ಪಂಕಜಾ ಪ್ರಕಾಶ್, ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್, ಪುರಸಭಾ ಸದಸ್ಯರಾದ ಡಿ.ಪ್ರೇಮಕುಮಾರ್, ಗಿರೀಶ್, ಕಲ್ಪನಾ ದೇವರಾಜು, ಎಸ್.ಸಿ.ಎಸ್.ಟಿ. ನೌಕರರ ಸಂಘದ ಅಧ್ಯಕ್ಷ ಹಳೆಯೂರು ಯೋಗೇಶ್, ಆರ್.ಟಿ.ಓ. ಅಧಿಕಾರಿ ಮಲ್ಲಿಕಾರ್ಜುನ್,ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾ.ಪಂ.ಇಓ ಸುಷ್ಮ, ಪುರಸಭಾ ಮುಖ್ಯಾಧಿಕಾರಿ ನಟರಾಜ್, ಜಿ.ಪಂ.ಮಾಜಿ ಸದಸ್ಯರಾದ ಡಾ.ಎಸ್.ಕೃಷ್ಣಮೂರ್ತಿ, ರಾಮ್ ದಾಸ್, ಬಸ್ತಿ ರಂಗಪ್ಪ, ಎನ್.ಜೆ.ರಮೇಶ್, ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜು, ಚಿಕ್ಕಳಲೆ ಗಿರೀಶ್,ಕಿಕ್ಕೇರಿ ಹೋಬಳಿ ಛಲವಾದಿ ಮಹಾಸಭಾ ಅಧ್ಯಕ್ಷ ಶಂಕರ್, ದಲಿತ ಸಂಘರ್ಷ ಸಮಿತಿ ರಂಗಸ್ವಾಮಿ, ಮಾಂಬಹಳ್ಳಿ ಜಯರಾಂ, ಬಂಡಿಹೊಳೆ ಕೃಷ್ಣಮೂರ್ತಿ, ಜಿಲ್ಲಾ ದಲಿತ ಸೇನೆ ಅಧ್ಯಕ್ಷ ಎನ್.ಜೆ.ಮಂಜು, ಕಿಕ್ಕೇರಿ ರಾಜಣ್ಣ, ಕೃಷ್ಣಾಪುರ ಗಿರೀಶ್, ಪೂಜಾರಿ ಯಾಲಕ್ಕಯ್ಯ, ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚಿಕ್ಕಗಾಡಿಗನಹಳ್ಳಿ ರಾಜಯ್ಯ,ಹೊಸಹೊಳಲು ನಿವೃತ್ತ ಶಿಕ್ಷಕ ಶಿವಣ್ಣ, ನ್ಯಾಯ ಬೆಲೆ ಅಂಗಡಿ ಮಂಜುನಾಥ್, ಜಿಲ್ಲಾ ದಿಶಾ ಸಮಿತಿ ಸದಸ್ಯ ನರಸನಾಯಕ್, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಡ್ರಾಮಾ ಮಾಸ್ಟರ್ ಚಿಕ್ಕಗಾಡಿಗನಹಳ್ಳಿ ಸುನಿಲ್ ಕುಮಾರ್,ಬಸವೇಶ್, ಪರಮೇಶ್, ಸಿಪಿಐ ಸುಮಾರಾಣಿ, ಆನಂದೇಗೌಡ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಡಾ.ದಿವಾಕರ್ ಸೇರಿದಂತೆ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಪ್ರವಾಸಿ ಮಂದಿರದಿಂದ ವೇದಿಕೆಯ ವರೆಗೆ ಬೆಳ್ಳಿ ಸಾರೋಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?