ಕೆ.ಆರ್.ಪೇಟೆ-ಹಳ್ಳಿಗಳಿಗೆ ಹೋಗಲು ನೋವಾಗುತ್ತದೆ ಎಂದ ಶಾಸಕ ಹೆಚ್.ಟಿ ಮಂಜು-ರೈತರ ಮಕ್ಕಳಿಗೆ ಹೆಣ್ಣು ಸಿಗದಿರುವುದು ದುರ್ದೈವದ ಸಂಗತಿ-ಡ್ರೋನ್ ಪ್ರತಾಪ್

ಕೆ.ಆರ್.ಪೇಟೆ-ತಾಲೂಕಿನ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಶಾಸಕ ಸ್ಥಾನದ ಜವಾಬ್ದಾರಿ ನೀಡಿದ್ದಾರೆ.ಹಳ್ಳಿಗಳಿಗೆ ಹೋಗಲು ನಾಚಿಕೆಯಾಗುತ್ತಿದೆ.ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ.ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನದ ಕೊರತೆಯಿಂದಾಗಿ ಜನರ ನಿರೀಕ್ಷೆಯ ಮಟ್ಟಕ್ಕೆ ಸ್ಪಂದಿಸಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ ಎಂದು ಶಾಸಕ ಹೆಚ್.ಟಿ ಮಂಜು ತಿಳಿಸಿದರು.

ಅವರು ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಚಿಕ್ಕಸೋಮನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ದಾನಿಗಳ ಸಹಕಾರದಿಂದ ಒಂದೂವರೆ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಅಭಯಾಂಜನೇಯಸ್ವಾಮಿ ದೇವಾಲಯದ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. 

ಆಡಳಿತ ಪಕ್ಷದ ಶಾಸಕರೇ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಸಿಗುತ್ತಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ವಿರೋಧ ಪಕ್ಷದ ಶಾಸಕನಾಗಿರುವ ನನ್ನ ಪಾಡು ಎಂತಹದು ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ ಎನ್ನುವುದು ನನ್ನ ಭಾವನೆಯಾಗಿದೆ.ಈ ಅನ್ಯಾಯ ನೋಡಿಕೊಂಡು ಸುಮ್ಮನೆ ಕುಳಿತು ಕೊಳ್ಳುವ ಜಾಯಮಾನ ನನ್ನದಲ್ಲ. ಕೊನೆಗೆ ಬೀದಿಗಿಳಿದು ಹೋರಾಟ ಮಾಡಿಯಾದರೂ ಸರಿ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಶಾಸಕ ಹೆಚ್.ಟಿ.ಮಂಜು ಘೋಷಿಸಿದರು.

ಜೆಡಿಎಸ್ ಪಕ್ಷದ ಮೇಲೆ ನಂಬಿಕೆಯಿಟ್ಟು ಕ್ಷೇತ್ರದ ಜನ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಜೆಡಿಎಸ್ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ಸಂಸದರಾಗಿದ್ದು ಕೇಂದ್ರ ಸರ್ಕಾರದ ಪ್ರಬಾವಿ ಸಚಿವರಲ್ಲಿ ಒಬ್ಬರಾಗಿದ್ದಾರೆ.ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ನೂರು ಕಿ.ಮೀ ರಸ್ತೆಗಳಿಗೆ ಸಿ.ಎಸ್.ಆರ್ ಮತ್ತು ಸಿ.ಆರ್.ಎಫ್ ಅನುದಾನದಡಿಯಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ ಕೊಡಿಸುವುದಾಗಿ ತಿಳಿಸಿದ್ದಾರೆ.

ತಾಲೂಕಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗ ಸಮಸ್ಯೆ ನಿವಾರಣೆ ನಿಮ್ಮಿಂದ ಸಾಧ್ಯ ಎಂದು ಮನವಿ ಮಾಡಿದ್ದೇನೆ.ಅದಕ್ಕೆ ಕುಮಾರ ಸ್ವಾಮಿಯವರು ಪೂರಕವಾಗಿ ಸ್ಪಂದಿಸಿದ್ದಾರೆ. ಈಗಾಗಲೇ ತಾಲೂಕಿನ ರೈಲ್ವೆ ಅಭಿವೃದ್ಧಿಗೆ ಸುಮಾರು ನೂರು ಕೋಟಿಗೂ ಅಧಿಕ ಅನುದಾನವನ್ನ ಕೇಂದ್ರದಿoದ ಕೊಡಿಸಿದ್ದಾರೆ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಗ್‌ಬಾಸ್ ಖ್ಯಾತಿಯ ಡ್ರೋಣ್ ಪ್ರತಾಪ್ ಮಾತನಾಡಿ,ಬೇಸಾಯ ಶ್ರೇಷ್ಠ ವೃತ್ತಿ, ಆದರೆ ಕೃಷಿ ಕಸುಬನ್ನು ಮಾಡುತ್ತಿರುವ ರೈತರ ಮಕ್ಕಳಿಗೆ ಮದುವೆಯಾಗಲು ಹೆಣ್ಣು ಮಕ್ಕಳು ಸಿಗದಿರುವುದು ಬೇಸರದ ಸಂಗತಿಯಾಗಿದೆ.ಇಂದಿನ ದಿನ ಮಾನದಲ್ಲಿ ಐಟಿ-ಬಿಟಿ ಕ್ಷೇತ್ರದ ಉದ್ಯೋಗಿಗಳಿಗೆ ಸಿಗುತ್ತಿರುವ ಬೆಲೆ ಮತ್ತು ಗೌರವ ಕಷ್ಟಪಟ್ಟು ದುಡಿದು ಲಕ್ಷ-ಲಕ್ಷ ದುಡಿಯುತ್ತಿರುವ ಅನ್ನಧಾತರಿಗೆ ಸಿಗುತ್ತಿಲ್ಲ. ತನ್ನ ಶ್ರಮದ ದುಡಿಮೆಯ ಮೂಲಕ ನಮಗೆ ತಿನ್ನಲು ಅನ್ನವನ್ನು ನೀಡುತ್ತಿರುವ ರೈತನ ಬದುಕು ಇಂದು ಸಂಕಷ್ಠದಲ್ಲಿದೆ. ತಾವು ಬೆವರು ಹರಿಸಿ ಬೇಸಾಯ ಮಾಡಿ ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಲೆ ದೊರೆಯದ ಹಿನ್ನೆಲೆಯಲ್ಲಿ ಬೇಸಾಯದಲ್ಲಿ ಸತತವಾಗಿ ನಷ್ಠ ಅನುಭವಿಸುತ್ತಿರುವ ಅನ್ನಧಾತ ಈoದು ಆತ್ಮಹತ್ಯೆಯ ಹಾದಿಯನ್ನು ಹಿಡಿದಿದ್ದಾನೆ ಎಂದು ಬೇಸರ ಹೊರಹಾಕಿದರು.

ರೈತನನ್ನು ರಾಷ್ಟ್ರಕವಿ ಕುವೆಂಪು ಅವರು ನೇಗಿಲಯೋಗಿ ಎಂದು ಕರೆದಿದ್ದಾರೆ.ಮಳೆ ಬಿಸಿಲನ್ನು ಲೆಕ್ಕಿಸದೇ ದುಡಿಮೆ ಮಾಡುತ್ತಿರುವ ರೈತರ ಕಲ್ಯಾಣಕ್ಕೆ ರಾಜ್ಯ ಸರಕಾರ ಹಾಗೂ ಕೇಂದ್ರ ಸರ್ಕಾರಗಳು ಸಾಲಮನ್ನಾದ ಜೊತೆಗೆ ಸಬ್ಸಿಡಿ ದರದಲ್ಲಿ ಕೃಷಿ ಪರಿಕರಗಳು, ಬಿತ್ತನೆ ಬೀಜಗಳು, ರಸಗೊಬ್ಬರಗಳು ಹಾಗೂ ಕ್ರಿಮಿನಾಶಕಗಳನ್ನು ಕೊಡಿಸಿ ರೈತರ ನೆರವಿಗೆ ಧಾವಿಸಿ ಬರಬೇಕು. ಅನ್ನದಾತನ ಕಲ್ಯಾಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಎಂದು ದ್ರೋಣ್ ಪ್ರತಾಪ್ ಆಗ್ರಹಿಸಿದರು.

ದೇವಾಲಯಗಳು ನಮ್ಮ ಸಂಸ್ಕೃತಿ ಪರಂಪರೆಯ ಪ್ರತಿಬಿಂಬ ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಿಂದ ನಾವು ಮನಸ್ಸಿಗೆ ಶಾಂತಿ ನೆಮ್ಮದಿ ಪಡೆಯುವ ಜೊತೆಗೆ ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕೂಡಾ ಹೊಂದಬಹುದಾಗಿದೆ. ವಿಜ್ಞಾನ ತಂತ್ರಜ್ಞಾನದ ಇಂದಿನ ಜಾಗತಿಕ ಜಗತ್ತಿನ ಸ್ಪರ್ಧಾ ಪ್ರಪಂಚದಲ್ಲಿ ದೇವರು ಇಲ್ಲ ಎನ್ನುವ ಧೈರ್ಯ ಸ್ವತಃ ವಿಜ್ಞಾನಿಗಳಿಗೂ ಇಲ್ಲ. ನಾವು ನಂಬಿಕೆಯನ್ನು ಹೊಂದಬೇಕು ಆದರೆ ಮೂಡನಂಬಿಕೆಗಳನ್ನು ಸಾರಾ ಸಗಟಾಗಿ ತಿರಸ್ಕರಿಸಬೇಕು ಎಂದು ಗ್ರಾಮೀಣ ಜನರು ಹಾಗೂ ವಿದ್ಯಾರ್ಥಿಗಳಿಗೆ ಪ್ರತಾಪ್ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿಶ್ರಾಂತ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ಅಚಿಜನಾದ್ರಿ ಕಲ್ಯಾಣ ಮಂಟಪದ ಮಾಲೀಕ ಕುಮಾರೇಗೌಡ, ವಿಶ್ರಾಂತ ಶಿಕ್ಷಕರಾದ ನಂಜಪ್ಪ, ಸೇರಿದಂತೆ ಹಲವಾರು ಮುಖಂಡರು ಭಕ್ತಾಧಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೇರಳದ ಚಂಡೆಮದ್ದಳ ವಾಧ್ಯ ಹಾಗೂ ಅಕ್ಷತಾ ಅವರ ಭರತನಾಟ್ಯ ಪ್ರದರ್ಶನವು ಸಾರ್ವಜನಿಕರು ಹಾಗೂ ಭಕ್ತಾಧಿಗಳನ್ನು ರಂಜಿಸಿತು.

—————ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?