ಕೆ.ಆರ್.ಪೇಟೆ:ಮಕ್ಕಳಲ್ಲಿ ದೇಶಪ್ರೇಮವನ್ನು ತುಂಬಿ ದೇಶದ ಅತ್ಯುನ್ನತ ಆಸ್ತಿಯನ್ನಾಗಿಸುವ ಮಹತ್ತರ ಪಾತ್ರವನ್ನು ಶಿಕ್ಷಕರು ನಿರ್ವಹಿಸಬೇಕಿದೆ-ಶಾಸಕ ಹೆಚ್ ಟಿ ಮಂಜು ಕರೆ

ಕೆ.ಆರ್.ಪೇಟೆ:ದೇಶವನ್ನು ಉನ್ನತೀಕರಣದತ್ತ ಕೊಂಡೊಯ್ಯುವ ಜವಾಬ್ದಾರಿ ಇಂದಿನ ಮಕ್ಕಳ ಮೇಲಿದೆ.ಅವರಲ್ಲಿ ದೇಶಪ್ರೇಮವನ್ನು ತುಂಬಿ ದೇಶದ ಅತ್ಯುನ್ನತ ಆಸ್ತಿಯನ್ನಾಗಿಸುವ ಮಹತ್ತರ ಪಾತ್ರವನ್ನು ಶಿಕ್ಷಕರು ನಿರ್ವಹಿಸಬೇಕಿದೆ ಎಂದು ಶಾಸಕ ಹೆಚ್ ಟಿ ಮಂಜು ಕರೆ ನೀಡಿದರು.

ಅವರು,ಪಟ್ಟಣದ ಶಿಕ್ಷಕರ ಭವನದಲ್ಲಿ ಕರ್ನಾಟಕ ರಾಜ್ಯ ಎಸ್.ಸಿ.ಎಸ್.ಟಿ ನೌಕರರ ಪ್ರಾಥಮಿಕ ಮಾಧ್ಯಮಿಕ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ತಾಲ್ಲೂಕು ಸ್ವಾಭಿಮಾನಿ ನೌಕರರ ಬಳಗದಿಂದ ತಾಲ್ಲೂಕು ಎಸ್ಸಿ.ಎಸ್ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿಕ್ಷಕ ಹಳೆಯೂರು ಯೋಗೇಶ್ ನೇತೃತ್ವದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಯ ಬದುಕು ಬೆಳಗುವುದು ಉತ್ತಮ ಶಿಕ್ಷಕರಿಂದ ಮಾತ್ರ ಸಾಧ್ಯ. ಗುರುವಿನಿಂದ ಶಾಲೆಯಲ್ಲಿ ಪೆಟ್ಟು ತಿಂದವನು ಕೆಟ್ಟ ಮಾರ್ಗಕ್ಕೆ ಒಳಗಾಗುವುದಿಲ್ಲ.ಶಿಕ್ಷಕ ಇರದೆ ಇದ್ದರೆ ಸಮಾಜದಲ್ಲಿ ಬದುಕು ಅಸಾಧ್ಯ ಎಂದರು.

ವಿದ್ಯಾರ್ಥಿಗಳು ಹೆಚ್ಚಿನ ಬೆಳವಣಿಗೆ ಹೊಂದಿ ಉನ್ನತ ಹುದ್ದೆ ಅಲಂಕರಿಸಿದಾಗ ಶಿಕ್ಷಕರಿಗೆ ಆನಂದವಾಗುತ್ತದೆ. ಆದ್ದರಿಂದ ಶಿಕ್ಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕೆಂದು ಭಾವನೆಯ ಜೊತೆಗೆ ಪ್ರತಿಭಾವಂತ ಮಕ್ಕಳಿಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಲು ಸಂಘಟನೆಯ ಮೂಲಕ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ಹೆಚ್.ಟಿ ಮಂಜು ಹೇಳಿದರು

ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಮಾತನಾಡಿ ಪ್ರತಿಭಾವಂತ ವಿದ್ಯಾರ್ಥಿಗಳು ಎಷ್ಟೇ ಕಷ್ಟ ಬಂದರೂ ಅವುಗಳನ್ನು ಎದುರಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಬೇಕು. ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಂಡು ಉತ್ತಮ ಸ್ಥಾನಮಾನಗಳನ್ನು ಪಡೆದು ಸಮಾಜ ಮೇಲೆ ಕಳಕಳಿಯನ್ನಿಟ್ಟುಕೊಂಡು ಸೇವೆಯನ್ನು ಮಾಡುವಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅತಿ ಹೆಚ್ಚು ಅಂಕಗಳನ್ನ ಗಳಿಸುವುದರ ಜೊತೆಗೆ ಸಂಸ್ಕಾರ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳಲ್ಲಿ ವಿಚಾರವಂತರಿಂದ ನಮ್ಮ ದೇಶದ ಸಂಸ್ಕಾರ ಸಂಸ್ಕೃತಿ ಇತಿಹಾಸವನ್ನು ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬ ಯುವಕರು ತಿಳಿದುಕೊಳ್ಳಬೇಕು ಎಂದರು.

ಪ್ರೊ.ಪ್ರಕಾಶ್ ಹೆಚ್.ಡಿ ಕೋಟೆ ಮಾತನಾಡಿ ಅಂಬೇಡ್ಕರ್ ಅವರು ಮೇಧಾವಿ ಹಾಗೂ ವಿದ್ಯಾವಂತ ವ್ಯಕ್ತಿ,ಇಂತವರ ಬಗ್ಗೆ ಓದಿ ತಿಳಿದುಕೊಂಡು ಅವರ ಮೌಲ್ಯಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಮಕ್ಕಳಿಗೆ ಅತ್ಯಾವಶ್ಯಕ .ಸ್ವಾತ್ಯಂತ್ರ ಹೋರಾಟದ ಸಮಯದಲ್ಲಿ ಸಮಾನತೆಗಾಗಿ ಗಾಂಧೀಜಿಯವರ ಜೊತೆಗೆ ನಡೆದ ಒಪ್ಪಂದ ಹಾಗೂ ಸಮಾನತೆಯ ಹೋರಾಟವನ್ನು ಬಳಸಿಕೊಂಡು, ಸ್ವಾತಂತ್ರ್ಯದ ಹೋರಾಟವನ್ನು ಚುರುಕುಗೊಳಿಸಲು ಮಾಡಿದ ಉಪಾಯಗಳ ಬಗ್ಗೆ ಈಗಿನ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು.ಯಾವುದೇ ವ್ಯಕ್ತಿಗೆ ಸಾಮಾಜಿಕ ಸ್ಥಾನಮಾನಗಳನ್ನ ಅವಕಾಶಗಳನ್ನ ಅವರ ಹುಟ್ಟಿನ, ಲಿಂಗದ, ಜಾತಿಯ, ಆಧಾರದಮೇಲೆ ನೀಡುವಂತದ್ದಲ್ಲ ಅದೂ ಅವರ ಪ್ರತಿಭೆಯ ಆಧಾರದಮೇಲೆ ಸಿಗುವಂತಾಗಬೇಕು.ಸಮಾಜದಲ್ಲಿ ರಾಜಕೀಯ ಸ್ವತಂತ್ರ ಅಥವಾ ರಾಜಕೀಯ ಸಮಾನತೆ ದೊರೆತಿರಬಹುದು. ಆದರೆ, ಸಮಾಜದ ಮನೋಭಾವ ಬದಲಾಗುವವರೆಗೆ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಸಿಗುವುದಿಲ್ಲ. ಇಂತಹ ಮನೋಭಾವನೆಗಳು ಬದಲಾವಣೆಯ ಜೊತೆಗೆ ಮೊದಲು ವೈಯಕ್ತಿಕವಾಗಿ ಬದಲಾವಣೆ ಬರಬೇಕು ಆಗ ಮಾತ್ರ ಸಾಮಾಜಿಕವಾಗಿ ಬದಲಾವಣೆ ಕಾಣಲು ಸಾಧ್ಯ ಎಂದು ತಿಳಿಸಿದರು.

ಬಳಿಕ ಅತಿ ಹೆಚ್ಚು ಅಂಕಗಳಿಸಿದ ಎಸ್.ಎಸ್ ಎಲ್ ಸಿ ಮತ್ತು ಪಿಯುಸಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಎಸ್ಸಿ ಎಸ್ಟಿ ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿದರು. ಹಾಗೂ ಸುಧೀರ್ಘ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಗೊಂಡ ಶಿಕ್ಷಕರಿಗೂ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷರಾದ ದುಂಡಯ್ಯ, ಜಿಲ್ಲಾ ಅಧ್ಯಕ್ಷ ಶಿವಲಿಂಗಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ್,ತಾಲ್ಲೂಕು ಅಧ್ಯಕ್ಷರಾದ ಹಳೆಯೂರು ಯೋಗೇಶ್, ಜನಾರ್ದನ್,ಡಾ.ಅರುಣ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ತಾಲ್ಲೂಕು ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷೆ ಸುಲೋಚನಾ, ಮದ್ದೂರು ತಾಲೂಕು ಅಧ್ಯಕ್ಷ ಶಿವಣ್ಣ, ಮಂಡ್ಯ ದಕ್ಷಿಣ ತಾಲ್ಲೂಕಿನ ಅಧ್ಯಕ್ಷ ಡಿ.ಕೆ.ನಾಗರಾಜು, ತಾಲ್ಲೂಕಿನ ಪದಾಧಿಕಾರಿಗಳಾದ ಅರುಣ್ ಕುಮಾರ್, ನಂಜುಂಡ, ಅಣ್ಣಯ್ಯ, ಗೋಪಾಲಕೃಷ್ಣ,ರತ್ನಮ್ಮ, ಮೋಹನ್, ಮಹೇಶ್, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಕೆ.ಎಸ್ ರಾಜು , ಶಿಕ್ಷಣ ಸಂಯೋಜಕರಾದ ವೀರಭದ್ರಯ್ಯ, ಕೃಷ್ಣ ನಾಯಕ್ ಹಾಗೂ ತಾಲ್ಲೂಕಿನ ಸ್ವಾಭಿಮಾನಿ ನೌಕರರು ಭಾಗವಹಿಸಿದ್ದರು.

————————ಮನು ಮಾಕವಳ್ಳಿ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?