ಕೆ.ಆರ್.ಪೇಟೆ-ರಾಜ್ಯದ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ ಸುಮಾರು ಒಂದು ಮುಕ್ಕಾಲು ವರ್ಷಗಳಾಯಿತು. ಆದರೂ ಸಹ ನನ್ನ ಕ್ಷೇತ್ರದ ಗ್ರಾಮ ಪಂಚಾಯಿತಿಗಳಿಗೆ ಒಂದೇ ಒಂದು ಆಶ್ರಯ ಮನೆ ಮಂಜೂರು ಮಾಡಿಲ್ಲ. ಇದು ಅತ್ಯಂತ ನೋವಿನ ಸಂಗತಿಯಾಗಿದೆ.ಇದು ಗ್ರಾಮ ಪಂಚಾಯಿತಿ ಸದಸ್ಯರಿಗೆ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರ್ಕಾರವು ಮಾಡುತ್ತಿರುವ ಅವಮಾನವಾಗಿದೆ. ಇದರಿಂದ ಗ್ರಾಮ ಪಂಚಾಯಿತಿ ಸದಸ್ಯರು ಹಳ್ಳಿಗಳಲ್ಲಿ ತಲೆ ಎತ್ತಿ ತಿರುಗಾ ಡಲು ಸಾಧ್ಯವಾಗುತ್ತಿಲ್ಲ. ಅಷ್ಟೋ, ಇಷ್ಟೋ ನರೇಗಾ ಕಾಮಗಾರಿಗಳ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಅವರು ರಾಜ್ಯ ಸರ್ಕಾರದ ವಿರುದ್ದ ಬೇಸರ ವ್ಯಕ್ತಪಡಿಸಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಸಾರಂಗಿ ಗ್ರಾಮ ಪಂಚಾಯತ್ ಕೇಂದ್ರದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಿರುವ ಭಾರತ್ ನಿರ್ಮಾಣ್ ರಾಜೀವ್ ಗಾಂಧೀ ಸೇವಾ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಶಾಸಕರು ನಾನು ಸಂಕಷ್ಟದ ಪರಿಸ್ಥಿತಿಯಲ್ಲಿ ಶಾಸಕನಾಗಿದ್ದೇನೆ.ರಾಜ್ಯದ ಸಚಿವರನ್ನು ಹೊರತು ಪಡಿಸಿ ನಾನು ಸೇರಿದಂತೆ ಯಾವುದೇ ಪಕ್ಷದ ಶಾಸಕರಿಗೆ ಕನಿಷ್ಠ ಅಭಿವೃದ್ಧಿಗಾದರೂ ಸೂಕ್ತ ಅನುಧಾನ ನೀಡುತ್ತಿಲ್ಲ. ಇದರಿಂದ ನನ್ನ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ತೀವ್ರ ಹಿನ್ನೆಡೆಯಾಗಿದೆ. ಈ ಬಗ್ಗೆ ನಾನು ಎಲ್ಲಿ ಬೇಕಾದರೂ ಘಂಟಾಘೋಷವಾಗಿ ಹೇಳಬಲ್ಲೆ ಎಂದು ಸರ್ಕಾರದಿಂದ ಅಭಿವೃದ್ಧಿಗೆ ಅನುಧಾನ ನೀಡದೇ ಇರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ಸಿ.ಎಂ.ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಒಂದು ಸಲ ಮಾತ್ರ ಪ್ರತಿ ಗ್ರಾಮ ಪಂಚಾಯಿತಿ ಸದಸ್ಯರ ಮೂಲಕ ಎರಡೆರಡು ಮನೆಗಳನ್ನು ಬಡವರಿಗೆ ಹಂಚಿಕೆ ಮಾಡಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ತಾಲ್ಲೂಕಿಗೆ ಒಂದೇ ಒಂದು ಆಶ್ರಯ ಮನೆಯನ್ನು ಮಂಜೂರು ಮಾಡದೇ ಇರುವುದು ಬಡವರಿಗೆ ಮಾಡಿದ ಮೋಸವಾಗಿದೆ. ಇದರಿಂದ ನಮ್ಮ ಗ್ರಾಮ ಪಂಚಾಯಿತಿ ಸದಸ್ಯರು ಸಹ ಇಂತಹ ಅವಧಿಯಲ್ಲಿ ಸದಸ್ಯರಾಗಬಾರದಿತ್ತು ಎಂದು ಹೇಳುವಂತಾಗಿದೆ. ಇನ್ನಾದರೂ ರಾಜ್ಯ ಸರ್ಕಾರವು ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ 100ಆಶ್ರಯ ಮನೆಗಳಂತೆ 34ಗ್ರಾಮ ಪಂಚಾಯಿತಿಗಳಿಗೆ ತಕ್ಷಣವೇ 3500ಮನೆಗಳನ್ನು ಮಂಜೂರು ಮಾಡಿಕೊಡುವ ಮೂಲಕ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಮುಂದುವರೆದು ಮಾತನಾಡಿದ ಶಾಸಕರು, ಗ್ರಾಮ ಪಂಚಾಯತಿಗಳು ಶ್ರೀ ಸಾಮಾನ್ಯರು ಹಾಗೂ ಗ್ರಾಮೀಣ ಜನರ ಕಲ್ಯಾಣಕ್ಕೆ ಪೂರಕವಾಗಿ ಕೆಲಸ ಮಾಡಿ ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು ಉದ್ಯೋಗ ಖಾತ್ರಿ ಯೋಜನೆಯನ್ನು ಸದು ಪಯೋಗ ಪಡಿಸಿಕೊಳ್ಳಬೇಕು. ನರೇಗಾದಿಂದ ರೈತರಿಗೆ ಬಂಡಿ ರಸ್ತೆ ನಿರ್ಮಾಣ, ಒಕ್ಕಣೆ ಕಣ, ಕ್ರೀಡಾಂಗಣ, ಬದುಗಳ ನಿರ್ಮಾಣ, ಹೂಳೆತ್ತುವುದು, ಕೆರೆ-ಕಟ್ಟೆಗಳ ಅಭಿವೃದ್ಧಿ, ಜಾನುವಾರು ಕೊಟ್ಟಿಗೆ ನಿರ್ಮಿಸುವುದು ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯರು, ಪಿಡಿಓ ಹಾಗೂ ಕಾರ್ಯದರ್ಶಿಗಳಿಗೆ ಶಾಸಕ ಮಂಜು ಕಿವಿ ಮಾತು ಹೇಳಿದರು.
ಸಾರಂಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಹೇಮಾಕ್ಷಮ್ಮಹೊನ್ನೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೆ.ಬಿ.ನಾಗೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಹಾಸ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸಿ.ಎಸ್.ರಾಜು, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಸುಷ್ಮಾ, ತಾಲೂಕು ಯೋಜನಾಧಿಕಾರಿ ಶ್ರೀನಿವಾಸ್, ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್, ನಂಜೇಗೌಡ, ಸೌಭಾಗ್ಯ, ಮಮತಾ, ಸಣ್ಣತಾಯಮ್ಮ, ಜೆ.ಎನ್.ಕಿಟ್ಟಿ, ಮೀನಾಕ್ಷಿ, ಮಹಾದೇವಿ, ಮಂಜುನಾಥ್, ಹೇಮಾ, ಬಸವರಾಜು, ಸುಲೋಚನಾ, ಸಾರಂಗಿ ಪಿಡಿಓ ಬಿ.ಕೆ.ಗಣೇಶ್, ಆಲಂಬಾಡಿಕಾವಲು ಗ್ರಾ.ಪಂ.ಅಧ್ಯಕ್ಷ ವೆಂಕಟೇಶ್, ಪಿಡಿಓ ಶಿವಕುಮಾರ್, ರಂಗನಾಥಪುರ ಕ್ರಾಸ್ ಗ್ರಾ.ಪಂ.ಪಿಡಿಓ ವಿನೋದ್, ತಮ್ಮಣ್ಣಾಚಾರಿ, ಇಮ್ರಾನ್ ಷರೀಫ್, ಸೇರಿದಂತೆ ಹಲವು ಗಣ್ಯರು ಹಾಗೂ ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
———————-ಶ್ರೀನಿವಾಸ್ ಆರ್