
ಕೆ.ಆರ್.ಪೇಟೆ-ತಾಲೂಕಿನ ಜನತೆಗೆ ಚುನಾವಣಾ ಸಮಯದಲ್ಲಿ ಕೊಟ್ಟಂತಹ ಭರವಸೆಗಳನ್ನು ಈಡೇರಿಸಲಾಗದೆ ಸಂಕಟವನ್ನು ಅನುಭವಿಸುತ್ತಿದ್ದೇನೆ.ಗ್ಯಾರಂಟಿ ಯೋಜನೆಗಳಿಗೆ ಅತೀ ಹೆಚ್ಚು ಹಣವನ್ನು ವ್ಯಯಿಸುತ್ತಿರುವ ಸರಕಾರ ಇತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ನೀಡುವಲ್ಲಿ ವಿಫಲವಾಗುತ್ತಿದ್ದು,ನ್ಯಾಯ ಕೇಳುವ ಸಲುವಾಗಿ ಬೆಂಗಳೂರು ಚಲೋ ನಡೆಸಲು ಚಿಂತಿಸಲಾಗಿದೆ ಎಂದು ಶಾಸಕ ಹೆಚ್.ಟಿ ಮಂಜು ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಪುರ ಗ್ರಾಮದ ಶ್ರೀ ಮಲೆ ಮಹದೇಶ್ವರ ಸ್ವಾಮಿಯವರ ಶ್ರೀ ಕ್ಷೇತ್ರದಲ್ಲಿ ಸಂಕ್ರಾoತಿಯ ಅಂಗವಾಗಿ ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಬಸಪ್ಪ ಗುರುಗಳ ನೇತೃತ್ವದಲ್ಲಿ ನಡೆದ ಸಂಕ್ರಾoತಿ ಹುಣ್ಣಿಮೆಯ ಬೆಳದಿಂಗಳ ಧಾರ್ಮಿಕ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಈಗ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಶಾಸಕನಾಗಿದ್ದೇನೆ.ರಾಜ್ಯ ಸರ್ಕಾರವು ಐದು ಗ್ಯಾರಂಟಿಗಳಿಗೆ ಹೊರತು ಪಡಿಸಿ ಬೇರೆ ಯಾವುದೇ ಮೂಲಸೌಕರ್ಯಕ್ಕಾಗಲಿ, ಅಭಿವೃದ್ದಿ ಕೆಲಸಗಳಿಗಾಗಿ ಅನುಧಾನ ನೀಡುತ್ತಿಲ್ಲ. ಇದರಿಂದಾಗಿ ನನ್ನ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಆಗುತ್ತಿಲ್ಲ ಎಂದು ಶಾಸಕರು ರಾಜ್ಯ ಸರ್ಕಾರದ ವಿರುದ್ದ ಬೇಸರ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಾದರೂ ಅನುಧಾನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಾಗುವರೆoಬ ಆಶಾಭಾವನೆಯೊಂದಿಗೆ ಕ್ಷೇತ್ರದ ಜನತೆಗೆ ಅಭಿವೃದ್ದಿಗೆ ಅನುಧಾನ ಕೇಳಿದವರಿಗೆ ಭರವಸೆ ನೀಡುತ್ತಿದ್ದೇನೆ. ಒಂದು ವೇಳೆ ರಾಜ್ಯ ಸರ್ಕಾರವು ಅನುಧಾನ ನೀಡದೇ ಇದ್ದರೆ ವಿಧಾನಸೌಧಕ್ಕೆ ಪಾದಯಾತ್ರೆ ಮಾಡಿ ಸರ್ಕಾರದ ಗಮನ ಸೆಳೆದು ಅನುಧಾನ ತರುವ ಬಗ್ಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದ ಶಾಸಕರು, ಪುರ ಗ್ರಾಮದ ಶ್ರೀ ಮಲೆ ಮಹದೇಶ್ವರ ಶ್ರೀ ಕ್ಷೇತ್ರದ ಅಭಿವೃದ್ದಿಗೆ ಸರ್ಕಾರ ನೀಡದೇ ಇದ್ದರೂ ಸಹ ನನ್ನ ವಯಕ್ತಿಕವಾಗಿಯಾದರೂ ಕೈಲಾದ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಕಳೆದ 10ವರ್ಷಗಳಲ್ಲಿ ಶ್ರೀ ಮಲೆ ಮಹದೇಶ್ವರ ಕ್ಷೇತ್ರವು ಅಭಿವೃದ್ದಿಯ ದಿಕ್ಕಿನತ್ತ ಸಾಗುತ್ತಿದೆ. ಕ್ಷೇತ್ರದ ಮುಖ್ಯಸ್ಥರಾದ ಶ್ರೀ ಬಸಪ್ಪ ಗುರೂಜಿ ಅವರ ಪರಿಶ್ರಮದಿಂದ ಇಷ್ಟೊಂದು ಅರ್ಥಪೂರ್ಣವಾಗಿ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯವಾದುದು ಎಂದು ಹೇಳಿದರು.

ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರ ಶ್ರೀ ಮಲೆ ಮಹದೇಶ್ವರ ಕ್ಷೇತ್ರದ ಶ್ರೀ ಬಸಪ್ಪ ಗುರೂಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರು ಹಾಗೂ ಆರ್.ಟಿ.ಓ.ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ್, ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಸುಜೇಂದ್ರಕುಮಾರ್, ಚಂದನ ಮೋಟರ‍್ಸ್ ಮಾಲೀಕರಾದ ಚಂದ್ರಪ್ರಕಾಶ್, ಮುಖಂಡರಾದ ಮನ್‌ಮುಲ್ ಅಭ್ಯರ್ಥಿ ನಾಟನಹಳ್ಳಿ ಬೋರ್‌ವೆಲ್ ಮಹೇಶ್, ಪ್ರಗತಿಪರ ರೈತ ವಡಕಹಳ್ಳಿ ಮಂಜುನಾಥ್, ಉಪನ್ಯಾಸಕ ಡಿಂಕಾ ಮಹೇಶ್, ಕಟ್ಟಹಳ್ಳಿ ಪಾಪಣ್ಣ, ಲಿಂಗಾಪುರ ಚನ್ನಬಸಪ್ಪ, ಯಗಚಗುಪ್ಪೆ ಎಲ್.ಐ.ಸಿ. ಶಿವಪ್ಪ, ಕೋಮನಹಳ್ಳಿ ಡಾಬಾ ಮಂಜು, ಚಿಕ್ಕೋನಹಳ್ಳಿ ಚೇತನ್ ಕುಮಾರ್, ಅಗ್ರಹಾರಬಾಚಹಳ್ಳಿ ಕುಮಾರ್, ಬೊಮ್ಮನಾಯಕನಹಳ್ಳಿ ಮಂಜೇಶ್, ಮೆಣಸ ಮಂಜು,ಪಿ.ಎಲ್.ಡಿ.ಬ್ಯಾಂಕ್ ಮಾಜಿ ನಿರ್ದೇಶಕರ ಸಿ.ಜೆ.ಮಂಜೇಗೌಡ, ಕರೋಟಿ ತಿಮ್ಮೇಗೌಡ, ಸುಬ್ರಹ್ಮಣ್ಯ, ಹೆಗ್ಗಡಹಳ್ಳಿ ವಾಸು,ಕೆ.ಬಿ.ಸಿ.ಮಂಜು,ಹೊನ್ನೇನಹಳ್ಳಿ ಕೃಷ್ಣೇಗೌಡ,ಪುರ ರಾಜು,ತಗಡೂರು ಪುಟ್ಟಸ್ವಾಮಪ್ಪ, ಹೊನ್ನೇನಹಳ್ಳಿ ಚಂದ್ರಪ್ಪ, ಶಿಕ್ಷಕ ನಾಗರಾಜು, ಪ್ರೇಮಕುಮಾರಿ, ತಾಲ್ಲೂಕು ಗ್ಯಾರಂಟಿ ಸಮಿತಿ ಸದಸ್ಯೆ ಶಿವಮ್ಮ, ಅಕ್ಕನ ಬಳಗದ ಅಧ್ಯಕ್ಷೆ ಉಷಾ, ಮಂಜುಳ ಮಹೇಶ್, ಕಾರಿಗನಹಳ್ಳಿ ತಮ್ಮಯ್ಯ, ಗ್ರಾ.ಪಂ.ಸದಸ್ಯ ಆರ್.ಶ್ರೀನಿವಾಸ್ ಸೇರಿದಂತೆ ಸಾವಿರಾರು ನೂರಾರು ಗಣ್ಯರು, ಸಾವಿರಾರು ಭಕ್ತಾದಿಗಳು ಸಂಕ್ರಾoತಿ ಹುಣ್ಣಿಮೆಯ ಬೆಳದಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗಾಯಕ ಅಬಾರಾಶೆ ಚಂದ್ರಶೇಖರ್ ಅವರಿಂದ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಸಂಕ್ರಾoತಿ ಹುಣ್ಣಿಮೆಯ ಬೆಳದಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಭಕ್ತಾಧಿಗಳಿಗೂ ಅನ್ನದಾಸೋಹ ಏರ್ಪಡಿಸಲಾಗತ್ತು.
————–——ಶ್ರೀನಿವಾಸ್ ಆರ್