ಕೆ.ಆರ್.ಪೇಟೆ-ರಾಜ್ಯದಲ್ಲಿ ಸುಮಾರು 300ಮಂದಿ ಬಾಣಂತಿಯರು ಸೂಕ್ತ ಚಿಕಿತ್ಸೆ ದೊರೆಯದೇ, ಸಾವನ್ನಪ್ಪಿದ್ದು ಇದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಮೂಲ ಕಾರಣವಾಗಿದೆ. ಗ್ಯಾರಂಟಿ ಯೋಜನೆಗಾಗಿ ಜನಸಾಮಾನ್ಯರಗೆ ಅಗತ್ಯವಾದ ಗುಣಮಟ್ಟದ ಚಿಕಿತ್ಸೆ ಮತ್ತು ಔಷಧಿ ದಾಸ್ತಾನು ಮಾಡಲು ಹಣ ನೀಡದೇ ಇರುವ ಕಾರಣ ಏನೂ ಅರಿಯದ ಕಂದಮ್ಮಗಳು, ಬಾಣಂತಿಯರು ಪ್ರಾಣ ಕಳೆದುಕೊಳ್ಳುವಂತಾಗಿದೆ.ಮಂಡ್ಯ ಲೋಕಸಭಾ ವ್ಯಾಪ್ತಿಯ ಎಲ್ಲಾ 8 ತಾಲ್ಲೂಕುಗಳ ಲ್ಲಿಯೂ ಶೀಘ್ರದಲ್ಲಿಯೇ ಆರೋಗ್ಯ ತಪಾಸಣಾ ಶಿಬಿರಗಳು ಮತ್ತು ಉಚಿತ ಚಿಕಿತ್ಸೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಹೊಡಕಹಳ್ಳಿ ಗ್ರಾಮದಲ್ಲಿ ಸುಮಾರು 6ಕೋಟಿ ರೂ ವೆಚ್ಚದಲ್ಲಿ ಕೆ.ಆರ್.ಪೇಟೆ-ಚನ್ನರಾಯಪಟ್ಟಣ ಮುಖ್ಯ ರಸ್ತೆಯ ದುರಸ್ತಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಸುಮಾರು ಒಂದು ಮುಕ್ಕಾಲು ವರ್ಷ ಕಳೆದಿದೆ. ಆದರೂ ಸಹ ರಾಜ್ಯದ ಮೂಲಭೂತ ಸೌಲಭ್ಯಗಳಿಗೆ ಅನುಧಾನ ನೀಡದೇ ಕೇವಲ ಐದು ಗ್ಯಾರಂಟಿಗಳಿಗೆ ಅನುಧಾನ ಒದಗಿಸಲು ವಿಲವಿಲ ಒದ್ದಾಡುತ್ತಿದೆ. ಹಿಂದೆ ಪೆಟ್ರೋಲ್ ಡೀಸೇಲ್ ದರ ಜಾಸ್ತಿ ಮಾಡಿತು. ಈಗ ಬಸ್ ಶೇ.15ರಷ್ಟು ಬಸ್ ದರ ಜಾಸ್ತಿ ಮಾಡಿದ್ದಾರೆ. ಇದರಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ಏರಲಿವೆ. ಹಿಂದೆ ಪೆಟ್ರೋಲ್ 100ರೂ ಆದಾಗ ಬೀದಿ ಬೀದಿಯಲ್ಲಿ ಬೊಬ್ಬೆ ಹೊಡೆದಿದ್ದ ಕಾಂಗ್ರೆಸ್ ಪಕ್ಷದವರು ಈಗ ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗುವಂತೆ ಮಾಡಿದ್ದಾರೆ. ಇದರಿಂದ ರಾಜ್ಯದ ಜನತೆಯ ನೆಮ್ಮದಿ ಹಾಳಾಗುತ್ತಿದೆ. ಹೆಣ್ಣು ಮಗಳಿಗೆ 2ಸಾವಿರ ಕೊಟ್ಟು, ಅವರ ಗಂಡು ಮಕ್ಕಳಿಂದ ಪರೋಕ್ಷವಾಗಿ 4ಸಾವಿರ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಇಂತಹ ಜನ ವಿರೋಧಿ ಸರ್ಕಾರ ಏಕೆ ಬೇಕು ಎಂದು ಪ್ರಶ್ನಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನರು ನನ್ನ ಪಂಚರತ್ನ ಯೋಜನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಗ್ಯಾರಂಟಿಗೆ ಮರುಳಾದ ಜನರು ಕಾಂಗ್ರೆಸ್ ಪಕ್ಷಕ್ಕೆ ಓಟ್ ಹಾಕಿದ್ದಾರೆ. ನಾವು ಅಧಿಕಾರಕ್ಕೆ ಬಂದಿದ್ದಾರೆ ನಮ್ಮ ಪಂಚರತ್ನ ಯೋಜನೆ ಎಲ್ಲಾ ಜನರಿಗೂ ಅನೂಕೂಲ ಆಗುತ್ತಿತ್ತು. ಆಸ್ಪತ್ರೆ, ಶಾಲಾ-ಕಾಲೇಜು,ರೈತರಿಗೆ ಸಾಲ,ಬಾಣಂತಿ ತಾಯಂದಿರಿಗೆ 4 ಸಾವಿರ ಕೊಡುವ ಯೋಜನೆ ಇತ್ತು. ಆದರೆ ರಾಜ್ಯದ ಜನರು ಮಾತ್ರ ನಮ್ಮ ಕೈ ಹಿಡಿಯಲಿಲ್ಲ ಇದಕ್ಕೆ ಬೇಸರ ಇದೆ. ಆದರೂ ನಾವು ಎದೆಗುಂದಿಲ್ಲ. ಈಗಿನ ಸರ್ಕಾರ ವಿರೋಧ ಪಕ್ಷದ ಶಾಸಕರಿಗೆ ಸ್ಪಂದಿಸುತ್ತಿಲ್ಲ.ಹಾಗಾಗಿ ಇಲ್ಲಿನ ನಮ್ಮ ಶಾಸಕ ಮಂಜು ಅವರನ್ನು ಬಯ್ದುಕೊಳ್ಳಬೇಡಿ ಒಳ್ಳೆಯ ಸಮಯ ಬರಲಿದೆ. ನಾನು ಕೇಂದ್ರದಿoದ ಸಾಧ್ಯವಾದಷ್ಟು ಕೇಂದ್ರದ ಅನುದಾನ ತಂದು ಅಭಿವೃದ್ಧಿ ಮಾಡಲು ಪ್ರಯತ್ನಿಸ್ತಿನಿ ಎಂದು ಹೆಚ್ ಡಿ ಕೆ ಭರವಸೆ ನೀಡಿದರು.
ಶ್ರೀರಂಗಪಟ್ಟಣ-ಅರಸೀಕೆರೆ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿ, ಚತುಷ್ಪದ ರಸ್ತೆಯನ್ನಾಗಿ ಅಭಿವೃದ್ಧಿ ಮಾಡಲು ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ನನ್ನ ಅಧಿಕಾರದ ಅವಧಿಯಲ್ಲಿ ಖಂಡಿತಾ ಈ ರಸ್ತೆಯನ್ನು ಅಭಿವೃದ್ಧಿ ಮಾಡಿಯೇ ಮಾಡುತ್ತೇನೆ. ಮಂಡ್ಯ ಲೋಕಸಭಾ ವ್ಯಾಪ್ತಿಯ ಕೆ.ಆರ್.ಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಮಳವಳ್ಳಿ, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ನನ್ನ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಪ್ರಮುಖವಾಗಿ ಸಮುದಾಯ ಭವನಗಳ ಅಭಿವೃದ್ಧಿ, ರಸ್ತೆಗಳ ಅಭಿವೃದ್ಧಿ, ಕೈಗಾರಿಕೆಗಳ ಅಭಿವೃದ್ಧಿ, ಉದ್ಯೋಗ ಸೃಷ್ಠಿಗೆ ಒತ್ತು ನೀಡುವುದಾಗಿ ಕುಮಾರಸ್ವಾಮಿ ತಿಳಿಸಿದರು.
ಬಡವರಿಗೆ ಗ್ರಾಮ ಪಂಚಾಯಿಗಳ ಮೂಲಕ ಒಂದೇ ಒಂದು ಆಶ್ರಯ ಮನೆ ನೀಡೋಕು ಆಗಲಿಲ್ಲ ಅಂದರೆ ರಾಜ್ಯದ ಹಣಕಾಸಿ ಪರಿಸ್ಥಿತಿ ಕೆಟ್ಟು ಹೋಗಿದೆ ಎಂದು ಅರ್ಥವಾಗುತ್ತದೆ. ಇಂತಹ ಕೆಟ್ಟ ಸರ್ಕಾರವನ್ನು ರಾಜ್ಯದ ಜನತೆ ಎಂದೂ ನೋಡಿಲ್ಲ. ಜನರಿಗೆ ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಮಂಕುಬೂದಿ ಎರಚುತ್ತಾ ಕಾಲ ಕಳೆಯುತ್ತಿದೆ. ಜನತೆಗೆ ಆರೋಗ್ಯ ಸಮಸ್ಯೆಗೆ ದುಡ್ಡಿಲ್ಲ. ರಸ್ತೆ ಅಭಿವೃದ್ದಿಗೆ ದುಡ್ಡಿಲ್ಲ. ಕೆರೆಕಟ್ಟೆಗಳ ಅಭಿವೃದ್ಧಿಗೆ ದುಡ್ಡಿಲ್ಲ. ಜಾನುವಾರು ಆರೋಗ್ಯ ಕಾರ್ಯಕ್ರಮಕ್ಕೆ ದುಡ್ಡಿಲ್ಲ. ಗ್ರಾಮಗಳ ಅಭಿವೃದ್ಧಿಗೆ ದುಡ್ಡಿಲ್ಲ, ಪಟ್ಟಣಗಳ ಅಭಿವೃದ್ಧಿಗೆ ದುಡ್ಡಿಲ್ಲ ಎನ್ನುತ್ತಿದೆ ರಾಜ್ಯ ಸರ್ಕಾರ ಎಂದು ಲೇವಡಿ ಮಾಡಿದರು.
ವಿರೋಧ ಪಕ್ಷದ ಶಾಸಕರಿಗೆ ಅನುಧಾನ ಕೊಡುವುದು ಒತ್ತಟ್ಟಿಗೆ ಇರಲಿ, ಆಡಳಿತ ಪಕ್ಷದ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೂ ಅನುಧಾನ ಕೊಡಲಾಗದ ದುಸ್ಥಿಗೆ ರಾಜ್ಯ ಸರ್ಕಾರ ಬಂದು ನಿಂತಿದೆ. ಒಂಥರಾ ಸರ್ಕಾರ ದಿವಾಳಿಯ ಅಂಚಿನಲ್ಲಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ಅಭಿವೃದ್ಧಿ ನೀತಿಯನ್ನು ತೀವ್ರವಾಗಿ ಖಂಡಿಸಿದರು.
ವಿಧಾನಸೌಧಕ್ಕೆ ಪಾದಯಾತ್ರೆಗೆ ಸಿದ್ದ ಶಾಸಕ ಮಂಜು:
ರಾಜ್ಯ ಸರ್ಕಾರ ನನ್ನ ಕ್ಷೇತ್ರದ ಅಭಿವೃದ್ದಿಗೆ ಅನುದಾನ ಕೊಡದೆ ತಾಲ್ಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡೋಕೆ ಆಗ್ತಿಲ್ಲ. ಹೀಗಾಗಿ ಯಾಕಾದ್ರು ನಾನು ಶಾಸಕನಾದನೋ ಅನ್ನಿಸಿಬಿಟ್ಟಿದೆ. ಹಲವಾರು ಬಾರಿ ನಾನು ಸರ್ಕಾರದ ಅಧಿಕಾರಿಗಳು ಸಿ.ಎಂ. ಡಿಸಿಎಂ, ಸೇರಿ ಸಂಬoಧಪಟ್ಟ ಸಚಿವರ ಗಮನಕ್ಕೆ ತಂದ್ರು ಅನುದಾನ ಕೊಡುತ್ತಿಲ್ಲ. ಈ ಸರ್ಕಾರ ಜೆಡಿಎಸ್ ಶಾಸಕರನ್ನು ಕಡೆಗಣಿಸ್ತಾ, ನಿರ್ಲಕ್ಷ್ಯ ಮಾಡುತ್ತಿದೆ. ನನ್ನ ಕ್ಷೇತ್ರದಲ್ಲಿ ಒಡೆದ ಕೆರೆ ಏರಿ ದುರಸ್ತಿಗೆ ಅನುದಾನ ಕೊಡದೆ ನಿರ್ಲಕ್ಷ್ಯ ಮಾಡ್ತಿದ್ದಾರೆ.
ಇದಕ್ಕಾಗಿ ನಾನು ಹಾಗು ನನ್ನ ಕ್ಷೇತ್ರದ ಜನರೊಂದಿಗೆ ವಿಧಾನಸೌಧಕ್ಕೆ ಪಾದಯಾತ್ರೆ ಹೋರಾಟ ಮಾಡುತ್ತೇನೆ. ಇದರ ವಿರುದ್ಧ ಸಂತೇಬಾಚಹಳ್ಳಿಯಿoದ ಮಂಡ್ಯದ ಮೂಲಕ ವಿಧಾನಸೌಧಕ್ಕೆ ಪಾದಯಾತ್ರೆ ಮಾಡಿ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಲು ಮಾನಸಿಕವಾಗಿ ಸಿದ್ದನಾಗಿದ್ದೇನೆ. ಈ ಪಾದಯಾತ್ರೆ ಹೋರಾಟಕ್ಕೆ ತಾವು ಬಂದು ಚಾಲನೆ ಕೊಡಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬಳಿ ಮನವಿ ಮಾಡಿದರು.
ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಕೆ.ಆರ್.ಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕಿರಾಮ್, ರಾಜ್ಯ ಜೆಡಿಎಸ್ ವಕ್ತಾರ ಗದ್ದೆಹೊಸೂರು ಅಶ್ವಿನ್‌ಕುಮಾರ್, ಪಾಂಡವಪುರ ಉಪ ವಿಭಾಗಾಧಿಕಾರಿ ಆರ್.ಶ್ರೀನಿವಾಸ್, ತಹಸೀಲ್ದಾರ್ ಎಸ್.ಯು.ಅಶೋಕ್, ಮಂಡ್ಯ ಜಿಲ್ಲಾ ಎಸ್.ಪಿ.ಮಲ್ಲಿಕಾರ್ಜುನ ಬಾಳದಂಡಿ, ಮುಖಂಡರು ಹಾಗೂ ಶ್ರೀ ಸುಬ್ರಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಕಿರಣ್, ತಾಲ್ಲೂಕು ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ವಿ.ಎಸ್.ಧನಂಜಯಕುಮಾರ್, ತಾಲ್ಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೆ.ಬಿ.ನಾಗೇಶ್, ಎಸ್.ಆರ್.ದಿನೇಶ್, ಮುಖಂಡರಾದ ಮಲ್ಲೇನಹಳ್ಳಿ ಮೋಹನ್, ಆನೆಗೊಳ ಕೃಷ್ಣೇಗೌಡ, ಶೇಖರ್, ಹೊಡಕಹಳ್ಳಿ ಮಂಜುನಾಥ್, ಕಾಯಿ ಮಂಜೇಗೌಡ, ಎಸ್.ಕೆ.ಬಾಲಕೃಷ್ಣ, ಬಲ್ಲೇನಹಳ್ಳಿ ನಂದೀಶ್, ಎಸ್.ಎಲ್.ಮೋಹನ್, ಮಾಕವಳ್ಳಿ ವಸಂತಕುಮಾರ್, ಹೆಚ್.ಟಿ.ಲೋಕೇಶ್, ಕೊರಟೀಕೆರೆ ದಿನೇಶ್, ಬಲದೇವ್, ಲೆನಿನ್ ಲೋಕೇಶ್, ಜೈಹಿಂದ್ ನಾಗಣ್ಣ, ಅತೀಕ್ ಅಹಮದ್, ಸೇರಿದಂತೆ ಸಾವಿರಾರು ಮಂದಿ ಕಾರ್ಯಕರ್ತರು, ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
————————–ಶ್ರೀನಿವಾಸ್ ಆರ್