ಕೆ.ಆರ್.ಪೇಟೆ-ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೃಗು ಮಹರ್ಷಿಗಳ ತಫೋ ಭೂಮಿ ಪವಿತ್ರ ಹೇಮಾವತಿ ನದಿ ದಂಡೆಯಲ್ಲಿರುವ ಹೇಮಗಿರಿ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಅಭಿಷೇಕ, ವಿಶೇಷ ಪೂಜೆ ಪುನಸ್ಕಾರಗಳು ಹಾಗೂ ವೈಕುಂಠ ದ್ವಾರ ಪ್ರವೇಶ ಕಾರ್ಯಗಳು ಶ್ರದ್ಧಾ ಭಕ್ತಿಯಿಂದ ನಡೆದವು.
ಶನಿವಾರ ಮುಂಜಾನೆಯಿoದಲೇ ದೇವಾಲಯದ ಪ್ರಧಾನ ಅರ್ಚಕರಾದ ರಾಮಭಟ್ಟರ ನೇತೃತ್ವದಲ್ಲಿ ನಡೆದ ಪೂಜಾ ವಿಧಿ ವಿಧಾನಗಳಲ್ಲಿ ಆದಿಚುಂಚನಗಿರಿಯ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್. ರಾಮಕೃಷ್ಣೇಗೌಡ ಅವರು ಭಾಗವಹಿಸಿದ್ದರು.
ಮುಂಜಾನೆ 6.30ಕ್ಕೆ ಸರಿಯಾಗಿ ವೈಕುಂಠ ದ್ವಾರವನ್ನು ರಾಮಕೃಷ್ಣೇಗೌಡ ಅವರು ಲೋಕಾರ್ಪಣೆ ಮಾಡಿ ವೈಕುಂಠ ದ್ವಾರ ಪ್ರವೇಶ ಮಾಡಿ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಯ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಶ್ರೀ ರಂಗನಾಥ ಸ್ವಾಮಿ, ಶ್ರೀ ಪದ್ಮವತಿ ಅಮ್ಮನವರು ಹಾಗೂ ಮುಖ್ಯ ಪ್ರಾಣ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಮಾಡಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಹೇಮಗಿರಿ ಬಿಜಿಎಸ್ ಪಬ್ಲಿಕ್ ಶಾಲೆಯ ಶಿಕ್ಷಕರು, ಬಂಡಿಹೊಳೆ, ಕುಪ್ಪಳ್ಳಿ, ಮಾಕವಳ್ಳಿ, ಬಿ.ಬಿ.ಕಾವಲು, ಲಕ್ಷ್ಮೀಪುರ, ಮಾಕವಳ್ಳಿ, ನಾಟನಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು, ದಾನಿಗಳಾದ ಕೊಮ್ಮೇನಹಳ್ಳಿ ಡಾ.ರಾಮೇಗೌಡ, ಎಸ್.ಆರ್.ನವೀನ್‌ಕುಮಾರ್, ಬಂಡಿಹೊಳೆ ಅಶೋಕ್, ಸಾಧುಗೋನಹಳ್ಳಿ ರಮೇಶ್, ಲೋಕೇಶ್, ಲಕ್ಷ್ಮೀಪುರ ಕುಮಾರಸ್ವಾಮಿ, ವೈಕುಂಠ ಏಕಾದಶಿಯ ಮಹೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
——————————-ಶ್ರೀನಿವಾಸ್ ಆರ್