ಕೆ.ಆರ್.ಪೇಟೆ-ಮಂಡ್ಯ ಜಿಲ್ಲೆಯಲ್ಲಿಯೇ ಅತೀ ಹೆಚ್ಚಿನ ಹೆಣ್ಣು ಭ್ರೂಣ ಹತ್ಯೆಯು ನಡೆಯುತ್ತಿರುವುದು ವಿಷಾಧದ ಸಂಗತಿ-ಹಿರಿಯಶ್ರೇಣಿ ನ್ಯಾಯಾಧೀಶ ಸುಧೀರ್.

ಕೆ.ಆರ್.ಪೇಟೆ-ನಮ್ಮ ರಾಜ್ಯದಲ್ಲಿ ಮಂಡ್ಯ ಜಿಲ್ಲೆಯಲ್ಲಿಯೇ ಅತೀ ಹೆಚ್ಚಿನ ಹೆಣ್ಣು ಭ್ರೂಣ ಹತ್ಯೆಯು ನಡೆಯುತ್ತಿರುವುದು ವಿಷಾಧದ ಸಂಗತಿಯಾಗಿದೆ ಎಂದು ಪಟ್ಟಣದ ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಸುಧೀರ್ ಹೇಳಿದರು.

ಅವರು ಪಟ್ಟಣದ ಗ್ರಾಮಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಹೆಣ್ಣು ಮಗುದಿನ ಹಾಗೂ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಭ್ರೂಣ ಹತ್ಯೆಯು ನಾಗರೀಕ ಸಮಾಜಕ್ಕೆ ಅಂಟಿರುವ ಶಾಪವಾಗಿದ್ದು, ಶಿಕ್ಷಾರ್ಹ ಅಪರಾಧವೆಂಬ ಸತ್ಯವು ಗೊತ್ತಿದ್ದರೂ ವಿದ್ಯಾವಂತ ಸಮೂಹವೇ ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗಿದೆ. ಭ್ರೂಣ ಹತ್ಯೆಯಿಂದಾಗಿ ಗಂಡು ಮತ್ತು ಹೆಣ್ಣು ಮಕ್ಕಳ ಜನನ ಪ್ರಮಾಣದಲ್ಲಿ ಹಾಗೂ ಲಿಂಗಾನುಪಾತದಲ್ಲಿ ಏರುಪೇರಾಗುತ್ತಿರುವ ಕಾರಣದಿಂದ ಹೆಣ್ಣು ಮಕ್ಕಳ ಕೊರತೆಯು ಸಮಾಜದಲ್ಲಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತಾಯಿಯಾಗಿ, ಮಡದಿಯಾಗಿ, ಸಹೋದರಿಯಾಗಿ ಹೆಣ್ಣನ್ನು ಒಪ್ಪುವ ನಾವು ಮಗಳಾಗಿ ಏಕೆ ಹೆಣ್ಣನ್ನು ಒಪ್ಪಿ ಸ್ವೀಕರಿಸಬಾರದು. ಹೆಣ್ಣು ಸಮೃದ್ಧಿ ಹಾಗೂ ಶಾಂತಿಯ ಸಂಕೇತವಾದ್ದರಿoದ ಪೋಷಕರು ಹೆಣ್ಣು-ಗಂಡು ಎಂದು ಬೇದ ಭಾವ ಮಾಡದೇ ಇಬ್ಬರನ್ನೂ ಸಮಾನವಾಗಿ ಕಂಡು ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯನ್ನು ಕೊಡಿಸಿ ಸಾಧನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.

ನಾಗರೀಕ ಸಮಾಜದಲ್ಲಿ ಇಂದು ಹೆಣ್ಣಿಗೆ ಹೆಣ್ಣೇ ಶತ್ರುವಾಗಿ ಕಾಡುತ್ತಿದ್ದಾಳೆ.ಹೆಣ್ಣು ಮಗುವು ಭೂಮಿಯ ಮೇಲೆ ಹುಟ್ಟುವ ಹಕ್ಕಿಗಾಗಿ ಇಂದು ಆಂದೋಲನ ನಡೆಸಬೇಕಾದ ವಾತಾವರಣ ನಿರ್ಮಾಣವಾಗಿದೆ. ಸಾಮಾಜಿಕ ಪಿಡುಗಾಗಿ ನಮ್ಮನ್ನು ಕಾಡುತ್ತಿರುವ ಹೆಣ್ಣು ಭ್ರೂಣ ಹತ್ಯೆಯು ಇಂದು ಸರ್ವೇ ಸಾಮಾನ್ಯವಾಗಿದೆ.ಹೆಣ್ಣು ರಾಷ್ಟ್ರದ ಶಕ್ತಿಯಾಗಿದ್ದು, ದೇಶದ ಸಮಗ್ರವಾದ ಅಭಿವೃದ್ಧಿಯಲ್ಲಿ ಹೆಣ್ಣು ಮಕ್ಕಳ ಪಾತ್ರವು ನಿರ್ಣಾಯಕವಾಗಿರುವುದರಿಂದ ಹೆಣ್ಣು ಮಕ್ಕಳನ್ನು ಗೌರವಿಸಿ ಅವರಿಗೆ ನೀಡಬೇಕಾದ ಗೌರವ ಹಾಗೂ ಸ್ಥಾನಮಾನವನ್ನು ನೀಡಿ ಹೆಣ್ಣು ಮಕ್ಕಳ ಅಭಿವೃದ್ಧಿಗೆ ಹಾಗೂ ನಾರಿಶಕ್ತಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಸುಧೀರ್ ಕರೆ ನೀಡಿದರು.

ಅಪರ ಸಿವಿಲ್ ನ್ಯಾಯಾಧೀಶರಾದ ಕೆ.ವಿ.ಅರ್ಪಿತಾ ಮಾತನಾಡಿ, ಅತಿಯಾದ ಮೊಬೈಲ್ ವ್ಯಾಮೋಹದಿಂದಾಗಿ ಯುವಜನರು ಹಾಗೂ ವಿದ್ಯಾರ್ಥಿಗಳು ಮಾನಸಿಕವಾಗಿ ಅಸ್ವಸ್ಥರಾಗುತ್ತಿದ್ದು ಖಿನ್ನತೆಗೆ ಒಳಗಾಗುತ್ತಿದ್ದಾರೆ. ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿದ್ದು ಪುಸ್ತಕಗಳನ್ನು ನಿಮ್ಮ ಸ್ನೇಹಿತರನ್ನಾಗಿಸಿಕೊಂಡು ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಸಾಧನೆ ಮಾಡಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಹಿರಿಯರ ನಾಣ್ಣುಡಿಯಂತೆ ಹೆಣ್ಣು ಮಕ್ಕಳ ಶೈಕ್ಷಣಿಕ ವಿಕಾಸಕ್ಕೆ ಪೋಷಕರು ಹಾಗೂ ತಂದೆ-ತಾಯಿಗಳು ಹೆಚ್ಚಿನ ಒತ್ತು ನೀಡಬೇಕು.

ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ದಬ್ಬಾಳಿಕೆ ದೌರ್ಜನ್ಯದಂತಹ ಪ್ರಕರಣಗಳು ಪ್ರತಿದಿನವೂ ನಡೆಯುತ್ತಿದ್ದು ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸುವಂತಹ ವಿಚಾರವಾಗಿರುವುದರಿಂದ ಹೆಣ್ಣು ಮಕ್ಕಳು ಅನ್ಯಾಯ, ಅಕ್ರಮಗಳ ವಿರುದ್ಧ ಹೋರಾಡುವ, ಮಹಿಳಾ ಶೋಷಣೆಯನ್ನು ಗಟ್ಟಿ ಧ್ವನಿಯಿಂದ ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಿಕೊಂಡು ಹೆಜ್ಜೆ ಹಾಕಬೇಕು ಎಂದು ಮನವಿ ಮಾಡಿದರು.

ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹೆಚ್.ಆರ್.ದೇವರಾಜು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ನಮ್ಮ ಭಾರತ ದೇಶವು ಹೆಣ್ಣು ಮಕ್ಕಳನ್ನು ಗೌರವಿಸಿ, ತಾಯಿ ದೇವರನ್ನು ಗೌರವಿಸುವ ಪುಣ್ಯ ಭೂಮಿಯಾಗಿರುವುದರಿಂದ ಪೋಷಕರು ಗಂಡು ಮಕ್ಕಳು ಬೇಕೆಂಬ ವ್ಯಾಮೋಹಕ್ಕೆ ಒಳಗಾಗದೇ ಹೆಣ್ಣು ಮಕ್ಕಳನ್ನು ಗೌರವಿಸುವ ಮನೋಭಾವನೆಯನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು ಎಂದು ಕಿವಿಮಾತು ಹೇಳಿದರು.

ಅಪರ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಆರ್.ಶಕುಂತಲಾ ಮಾತನಾಡಿ, ಹೆಣ್ಣು ಮಕ್ಕಳು ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಪದ್ದತಿ, ಹೆಣ್ಣು ಮಕ್ಕಳ ಮಾರಾಟ ಹಾಗೂ ಸಾಗಾಣಿಕೆಯಂತಹ ಅನಿಷ್ಠಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು. 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಬಲವಂತವಾಗಿ ಕಾನೂನು ಬಾಹಿರವಾಗಿ ಮದುವೆ ಮಾಡುವಂತಹ ಪ್ರಕರಣಗಳು ಕಂಡು ಬಂದರೆ ಮಹಿಳಾ ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಇಲ್ಲವೇ ಪೋಲಿಸರ ಗಮನಕ್ಕೆ ತರಬೇಕು. ಹೆಣ್ಣು ಮಕ್ಕಳ ಅಭಿವೃದ್ಧಿಗೆ ತೊಂದರೆಯಾಗುವoತಹ ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್, ಸಹಾಯಕ ಸರ್ಕಾರಿ ಅಭಿಯೋಜಕ ಜಿ.ಸುರೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚಂದ್ರಶೇಖರ್, ಸಮುದಾಯ ಆರೋಗ್ಯ ಅಧಿಕಾರಿ ಡಾ.ಹೇಮಂತ್, ಸಂಪನ್ಮೂಲ ಭಾಷಣಕಾರರಾದ ಬಿ.ಸಿ.ದಿನೇಶ್, ಗ್ರಾಮಭಾರತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಸ್.ಕೃಷ್ಣ ಕಾರ್ಯಕ್ರಮದಲ್ಲಿ ಮಾತನಾಡಿದರು. ವಕೀಲರ ಸಂಘದ ಕಾರ್ಯದರ್ಶಿ ಆರ್.ಕೆ.ರಾಜೇಗೌಡ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಪ್ರಭುಕುಮಾರ್, ಶಿಕ್ಷಕ ವಜ್ರಪ್ರಸಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ನಂತರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

—————--ಶ್ರೀನಿವಾಸ್ ಕೆ.ಆರ್ ಪೇಟೆ

Leave a Reply

Your email address will not be published. Required fields are marked *

× How can I help you?