
ಕೆ.ಆರ್.ಪೇಟೆ: ತಾಲ್ಲೂಕಿನ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಹೊಯ್ಸಳರ ಶಿಲ್ಪಕಲೆಯನ್ನು ಹೊಂದಿರುವ ಐತಿಹಾಸಿಕ ಗ್ರಾಮ ಹೊಸಹೊಳಲು ಗ್ರಾಮದ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.
ತಾಲ್ಲೂಕು ಮುಜರಾಯಿ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಆದ ಡಾ.ಎಸ್.ಯು.ಅಶೋಕ್, ಸಮಾಜ ಸೇವಕ ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್, ಪುರಸಭಾ ಅಧ್ಯಕ್ಷೆ ಪಂಕಜಾಪ್ರಕಾಶ್ ಅವರು ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಸರ್ವಾಲಂಕಾರಗೊಂಡ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿಯವರ ಭವ್ಯ ರಥದ ಮೇಲೆ ಉತ್ಸವ ಮೂರ್ತಿಯು ಅಲಂಕರಿಸುತ್ತಿದ್ದಂತೆ ಭಕ್ತಸಾಗರದಿಂದ ಶ್ರೀ ಲಕ್ಷ್ಮಿ ನಾರಾಯಣ ಗೋವಿಂದ, ಶ್ರೀನಿವಾಸ ಗೋವಿಂದ, ವೆಂಕಟರಮಣ ಗೋವಿಂದ…. ನಾಮಸ್ಮರಣೆಗಳು ಮುಗಿಲು ಮುಟ್ಟಿದವು.

ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ ಭಕ್ತಸಾಗರದೊಂದಿಗೆ ರಥೋತ್ಸವನ್ನು ಎಳೆದು ಮಾತನಾಡಿದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಮಾತನಾಡಿ ನಮ್ಮ ತಾಲೂಕಿನ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿರುವ ಗ್ರಾಮ, ಮೈಸೂರು ಅರಸರಿಗೆ ಸಾಲ ಕೊಟ್ಟಿದ್ದ ಗ್ರಾಮ ಎಂದೇ ಖ್ಯಾತಿ ಪಡೆದುಕೊಂಡಿರುವ ಹೊಸಹೊಳಲು ಗ್ರಾಮ ಸಾಂಸ್ಕೃತಿಕ ನೆಲೆಯನ್ನು ಹೊಂದಿರುವ ವಿಶೇಷ ಗ್ರಾಮವಾಗಿದೆ. ಪ್ರತಿವರ್ಷವೂ ಅತ್ಯಂತ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತದೆ. ಲಕ್ಷ್ಮೀ ನಾರಾಯಣಸ್ವಾಮಿ ದೇವರ ಆಶೀರ್ವಾದದಿಂದ ತಾಲ್ಲೂಕಿನ ಎಲ್ಲಾ ಜನತೆಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಜಾನಪದ ಕಲಾತಂಡಗಳ ನೃತ್ಯವು ರಥೋತ್ಸವ ಮತ್ತು ಜಾತ್ರಾ ಸೌಂದರ್ಯವನ್ನು ಹೆಚ್ಚಿಸಿದವು ಭಕ್ತರು ಶ್ರೀ ರಥದ ಕಳಸಕ್ಕೆ ಬಾಳೆಹಣ್ಣು ಹಾಗೂ ಜವನವನ್ನು ಎಸೆದು ಪುನೀತರಾದರು. ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಪುಳಿಯೊಗರೆ, ಮೊಸರನ್ನ, ಮಜ್ಜಿಗೆ-ಪಾನಕ ಪ್ರಸಾದವನ್ನು ದೇವಾಲಯ ಸಮಿತಿಯ ವತಿಯಿಂದ ವಿತರಿಸಲಾಯಿತು.

ರಥೋತ್ಸವದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯ ಸಮಿತಿಯ ಅಧ್ಯಕ್ಷ ರಾಮಚಂದ್ರು, ಕಾರ್ಯದರ್ಶಿ ಹೆಚ್.ಜಿ.ರವೀಂದ್ರ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು, ಪುರಸಭಾ ಸದಸ್ಯರಾದ ಹೆಚ್.ಆರ್.ಲೋಕೇಶ್, ಹೆಚ್.ಎನ್.ಪ್ರವೀಣ್, ಹೆಚ್.ಡಿ.ಅಶೋಕ್, ಕೆ.ಬಿ.ಮಹೇಶ್, ಶಾಸಕರ ಸಹೋದರ ಹೆಚ್.ಟಿ.ಲೋಕೇಶ್, ಗ್ರೇಡ್-೨ ತಹಸೀಲ್ದಾರ್ ಲೋಕೇಶ್, ರಾಜಸ್ವ ನಿರೀಕ್ಷಕ ಜ್ಞಾನೇಶ್, ಗ್ರಾಮ ಆಡಳಿತ ಅಧಿಕಾರಿ ಜಗದೀಶ್, ಮುಖಂಡರಾದ ಡಾ.ಶ್ರೀನಿವಾಸಶೆಟ್ಟಿ, ರಾಮೇಗೌಡ, ಹೆಚ್.ಎಸ್.ಕೃಷ್ಣೇಗೌಡ, ಪ್ರಕಾಶ್, ಅಭಿಶೇಖರ್ ಸೇರಿದಂತೆ ಸಾವಿರಾರು ಭಕ್ತಾಧಿಗಳು ಭಾಗವಹಿಸಿದ್ದರು.
ಈ ವೇಳೆ ಡಿವೈಎಸ್‌ಪಿ ಚೆಲುವರಾಜು, ಇನ್ಸ್ಪೆಕ್ಟರ್ ಸುಮಾರಾಣಿ, ಸಬ್ ಇನ್ಸ್ಪೆಕ್ಟರ್ ಕೆ.ನವೀನ್ ನೇತೃತ್ವದಲ್ಲಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
- ಶ್ರೀನಿವಾಸ, ಕೆ.ಆರ್.ಪೇಟೆ