ಕೆ.ಆರ್.ಪೇಟೆ-ರೈತರಿಗೆ ಅಗತ್ಯವಿರುವ ರಸಗೊಬ್ಬರಕ್ಕೆ ಕೃತಕ ಅಭಾವ ಸೃಷ್ಠಿಸಿ ಮಾರಾಟ ಮಾಡಿದರೆ ಅಂತಹ ಮಾರಾಟಗಾರರ ಲೈಸೆನ್ಸ್ ಅನ್ನು ಕೂಡಲೇ ರದ್ದುಗೊಳಿಸಲಾಗುವುದು-ಮಂಡ್ಯ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಎಚ್ಚರಿಕೆ

ಕೆ.ಆರ್.ಪೇಟೆ,ಮೇ.17: ರೈತರಿಗೆ ಸುಮಾರು 2ಸಾವಿರ ರೂಪಾಯಿಗಳಷ್ಟು ಸಬ್ಸಿಡಿ ರೂಪದಲ್ಲಿ ನೀಡುತ್ತಿರುವ ಯೂರಿಯಾ ರಸಗೊಬ್ಬರವು ಕೃಷಿಯೇತರ ಚಟುವಟಿಕೆಗೆ ದುರ್ಬಳಕೆಯಾಗದಂತೆ ತಡೆಯಲು ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕಗಳ ಮಾರಾಟಗಾರರ ಸಹಕಾರ ಅಗತ್ಯವಾಗಿದೆ. ರೈತರಿಗೆ ಅಗತ್ಯವಿರುವ ರಸಗೊಬ್ಬರಕ್ಕೆ ಕೃತಕ ಅಭಾವ ಸೃಷ್ಠಿಸಿ ಮಾರಾಟ ಮಾಡಿದರೆ ಅಂತಹ ಮಾರಾಟಗಾರರ ಲೈಸೆನ್ಸ್ ಅನ್ನು ಕೂಡಲೇ ರದ್ದುಗೊಳಿಸಲಾಗುವುದು ಎಂದು ಮಂಡ್ಯ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಎಚ್ಚರಿಕೆ ನೀಡಿದರು.

ಅವರು ಪಟ್ಟಣದ ಕೃಷಿ ಇಲಾಖೆಯ ಆವರಣದಲ್ಲಿ ನಡೆದ ತಾಲ್ಲೂಕಿನ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕಗಳ ಮಾರಾಟಗಾರರ ಸಂಘದ ಸದಸ್ಯರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.



ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಮಾರಾಟಗಾರರು ಗುಣಮಟ್ಟದ ಬಿತ್ತನೆ ಬೀಜಗಳನ್ನು ಮಾರಾಟ ಮಾಡಿ ರೈತರಲ್ಲಿ ಜಾಗೃತಿ ಮೂಡಿಸಿ ರೈತರ ಮಿತ್ರನಂತೆ ರೈತ ಸ್ನೇಹಿಯಾಗಿ ಕೆಲಸ ಮಾಡಬೇಕು. ರೈತರಿಗೆ ನಮ್ಮ ಕೃಷಿ ಇಲಾಖೆಯಿಂದ ಸೌಲಭ್ಯಗಳನ್ನು ಬಗ್ಗೆ ಅರಿವು ಮೂಡಿಸಲು ಸಹಕಾರ ನೀಡಬೇಕು. ರೈತರು ನಿತ್ಯ ನಿಮ್ಮೊಂದಿಗೆ ಒಡನಾಟ ಇಟ್ಟುಕೊಂಡಿರುವ ಕಾರಣ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕಗಳ ಮಾರಾಟಗಾರರು ರೈತರು ಮತ್ತು ಕೃಷಿ ಇಲಾಖೆಯ ಸೇತುವೆಯಂತೆ ಕೆಲಸ ಮಾಡಬೇಕು. ಈ ಮೂಲಕ ರೈತರ ಮನಗೆದ್ದು ಹೆಚ್ಚಿನ ವ್ಯವಹಾರ ಮಾಡಿ ಲಾಭ ಗಳಿಸಬೇಕು. ಸರ್ಕಾರವು ನೀಡುವ ಸಬ್ಸಿಡಿ ದರದ ಎಲ್ಲಾ ಉಪಕರಣಗಳನ್ನು ಮಾರಾಟ ಮಾಡಬೇಕು. ಈ ಮೂಲಕ ತಾವೂ ಸಹ ಲಾಭ ಗಳಿಸಬಹುದು ಎಂದು ಮಂಡ್ಯ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದರು.

ದೇಶದ ಬೆನ್ನೆಲುಬಾಗಿರುವ ರೈತನ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕಗಳ ಮಾರಾಟಗಾರರು ಬದ್ಧತೆಯಿಂದ ಕೆಲಸ ಮಾಡಿ ವ್ಯವಹಾರ ನಡೆಸಬೇಕು. ಯಾವುದೇ ಕಾರಣಕ್ಕೂ ಕೃತಕ ಅಭಾವ ಸೃಷ್ಠಿಸಿ ರೈತರಿಗೆ ವಂಚನೆ ಮಾಡಿ ಹಣ ಮಾಡುವ ದಂಧೆಗೆ ಇಳಿಯಬಾರದು. ದೇಶಕ್ಕೆ ಅನ್ನ ನೀಡುವ ರೈತರಿಗೆ ಸೇವಾ ಭಾವನೆಯಿಂದ ಸೇವೆ ನೀಡಿ ಸೇವಾ ಶುಲ್ಕ ಪಡೆದುಕೊಳ್ಳಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ನಿರ್ದೇಶನ ನೀಡಿದರು.

ಪಾಂಡವಪುರ ಉಪಕೃಷಿ ನಿರ್ದೇಶಕ ಭಾನುಪ್ರಕಾಶ್ ಮಾತನಾಡಿ ಹವಾಮಾನಕ್ಕೆ ತಕ್ಕಂತೆ ಮಣ್ಣಿನ ರಸಸಾರ ಹಾಗೂ ಫಲವತ್ತತೆಗೆ ಹೊಂದಿಕೆಯಾಗುವAತಹ ಗುಣ ಮಟ್ಟದ ಬಿತ್ತನೆ ಬೀಜಗಳನ್ನು ಬೇಸಾಯ ಮಾಡಲು ರೈತ ಬಂಧುಗಳಿಗೆ ಅರಿವಿನ ಜಾಗೃತಿ ಮೂಡಿಸಬೇಕು. ಹೆಚ್ಚು ಲಾಭ ಸಿಗುತ್ತದೆ ಎಂದು ಕಳಫೆ ಬಿತ್ತನೆ ಬೀಜ, ಕಳಫೆ ರಸಗೊಬ್ಬರ ಮಾರಾಟ ಮಾಡಬಾರದು. ಉತ್ತಮವಾದ ಗೊಬ್ಬರ ಬಳಸಿ ಒಳ್ಳೆಯ ಬಿತ್ತನೆ ಬೀಜಗಳನ್ನು ಬಳಸಿ ಕೃಷಿ ತಜ್ಞರ ಸಲಹೆ ಸೂಚನೆ ಪಡೆದುಕೊಂಡು ಬೇಸಾಯ ಮಾಡಿದರೆ ಒಳ್ಳೆಯ ಇಳುವರಿಯನ್ನು ಪಡೆಯಲು ಸಾಧ್ಯವಿದೆ ಎಂಬುದನ್ನು ರೈತರಿಗೆ ಮನವರಿಕೆ ಮಾಡಬೇಕು ಎಂದು ಭಾನುಪ್ರಕಾಶ್ ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಪಾಂಡವಪುರ ಉಪ ನಿರ್ದೇಶಕ ಭಾನುಪ್ರಕಾಶ್, ಕೃಷಿ ಇಲಾಖೆ ಜಾಗೃತ ದಳದ ಸಹಾಯಕ ನಿರ್ದೇಶಕ ಚನ್ನಕೇಶವಮೂರ್ತಿ, ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್, ಕೃಷಿ ಅಧಿಕಾರಿ ಶ್ರೀಧರ್ ಸೇರಿದಂತೆ ರಸ ಗೊಬ್ಬರ ಮಾರಾಟಗಾರರ ಪ್ರತಿನಿಧಿಗಳು, ರಸಗೊಬ್ಬರ ಅಂಗಡಿಗಳ ಮಾಲೀಕರು, ಸೊಸೈಟಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಘಲಯ ಮುರುಳೀಧರ್, ಬೂಕನಕೆರೆ ಮಹೇಶ್, ಬಲ್ಲೇನಹಳ್ಳಿ ಕುಮಾರ್, ಅಗ್ರಹಾರಬಾಚಹಳ್ಳಿ ರಾಮಸ್ವಾಮಿ, ಭಾನುಮತಿ ತರಬೇತಿಯಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕ್ರಿಮಿನಾಶಕಗಳ ಮಾರಾಟಗಾರರ ಸಂಘದ ವತಿಯಿಂದ ಮಂಡ್ಯ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್, ಪಾಂಡವಪುರ ಉಪ ನಿರ್ದೇಶಕ ಭಾನುಪ್ರಕಾಶ್, ಕೃಷಿ ಇಲಾಖೆ ಜಾಗೃತ ದಳದ ಸಹಾಯಕ ನಿರ್ದೇಶಕ ಚನ್ನಕೇಶವಮೂರ್ತಿ, ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್, ಕೃಷಿ ಅಧಿಕಾರಿ ಶ್ರೀಧರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

  • ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *