ಕೆ.ಆರ್.ಪೇಟೆ,ಮೇ.13: ತಾಲ್ಲೂಕಿನಲ್ಲಿ ಕೆಲವು ನ್ಯಾಯಬೆಲೆ ಅಂಗಡಿಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಡಿತರ ವಿತರಣಾ ಕೇಂದ್ರಗಳಲ್ಲಿ ಸರ್ಕಾರವು ನೀಡುವ ಉಚಿತ ಪಡಿತರ ವಸ್ತುಗಳಿಗೆ ಪ್ರತಿ ರೇಷನ್ ಕಾರ್ಡಿಗೆ ಹಣವನ್ನು ಪಡೆಯುತ್ತಿರುವ ಬಗ್ಗೆ ಕೆಲವು ಕಡೆಗಳಿಂದ ದೂರುಗಳು ಕೇಳಿ ಬರುತ್ತಿದೆ. ಒಂದು ವೇಳೆ ಯಾವುದಾದರೂ ನ್ಯಾಯಬೆಲೆ ಅಂಗಡಿಯಲ್ಲಿ ಹಣ ಪಡೆಯುತ್ತಿರುವ ಕಂಡು ಬಂದರೆ ನೋಟೀಸ್ ಜಾರಿ ಮಾಡಿ ಸೂಕ್ತ ಕಾನೂನು ಕ್ರಮ ವಹಿಸಬೇಕು ಎಂದು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್ ಆಹಾರ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅವರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರವು ಪಡಿತರ ವಸ್ತುಗಳನ್ನು ಉಚಿತವಾಗಿ ನೀಡುತ್ತಿದೆ. ಬಿ.ಪಿ.ಎಲ್. ಪಡಿತರ ಚೀಟಿದಾರರು ಉಚಿತವಾಗಿ ಪಡೆದುಕೊಳ್ಳಬೇಕು. ಕೆಲವು ನ್ಯಾಯ ಬೆಲೆ ಅಂಗಡಿಗಳಲ್ಲಿ ಹಣ ಪಡೆದು ಪಡಿತರ ವಸ್ತುಗಳನ್ನು ನೀಡುತ್ತಿರುವುದರಿಂದ ಸರ್ಕಾರಕ್ಕೆ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳಿಗೆ ಕೆಟ್ಟ ಹೆಸರು ಬರುತ್ತಿದೆ ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ತಾಲ್ಲೂಕು ಆಹಾರ ಇಲಾಖೆಯ ಶಿರಸ್ತೇದಾರ್ ಪೂರ್ಣಿಮಾ ಅವರಿಗೆ ಸೂಚನೆ ನೀಡಿದರು.

ಆಹಾರ ಶರಸ್ತೇದಾರ್ ಪೂರ್ಣಿಮಾ ಮಾತನಾಡಿ. ತಾಲ್ಲೂಕಿನಲ್ಲಿ 99ನ್ಯಾಯ ಬೆಲೆ ಅಂಗಡಿಗಳಿದ್ದು ಒಟ್ಟು ಸುಮಾರು 69,910 ಬಿ.ಪಿ.ಎಲ್ ಕಾರ್ಡುಗಳಿವೆ. ಈಗಾಗಲೇ ದೂರು ಕೇಳಿ ಬಂದ ನ್ಯಾಯಬೆಲೆ ಅಂಗಡಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗುತ್ತಿದೆ. ಪಡಿತರ ವಸ್ತುಗಳನ್ನು ತಿಂಗಳಿಡೀ ನೀಡಬೇಕು. ಯಾವುದೇ ಕಾರಣಕ್ಕು ಡಿಜಿಟಲ್ ಸಹಿ ಪಡೆದುಕೊಳ್ಳಲು ಒಂದು ದಿನ, ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಮತ್ತೊಂದು ದಿನ ನಿಗದಿ ಪಡಿಸುವಂತಿಲ್ಲ. ಗ್ರಾಹಕ ಬಂದ ದಿನ ಡಿಜಿಟಲ್ ಸಹಿ ಪಡೆದು ಸ್ಥಳದಲ್ಲಿಯೇ ಪಡಿತರ ವಸ್ತುಗಳನ್ನು ವಿತರಣೆ ಮಾಡಬೇಕು. ತೂಕದಲ್ಲಿ ಯಾವುದೇ ವ್ಯತ್ಯಾಸ ಮಾಡಬಾರದು. ಈಗ ಬನ್ನಿ ಆಗ ಬನ್ನಿ, ಇವತ್ತು ಆ ಊರಿನವರು ಬನ್ನಿ, ಈ ಊರಿನವರು ಬನ್ನಿ, ನಿಮ್ಮೂರಿನ ಕೋಟ ಮುಗಿಯಿತು ಎಂದು ಸಬೂಬು ಹೇಳಿ ಪಡಿತರ ಚೀಟಿದಾರರಿಗೆ ವಂಚಿಸಬಾರದು.

ಬಿ.ಪಿ.ಎಲ್. ಕಾರ್ಡುದಾರರು ಎಂದರು ಸಂಪೂರ್ಣ ಬಡವರಾಗಿರುತ್ತಾರೆ. ಪಡಿತರ ವಸ್ತುಗಳನ್ನು ನೆಲದ ಮೇಲೆ ಹಾಕಿ ವಿತರಣೆ ಮಾಡಬಾರದು. ಟಾರ್ಪಾಲುಗಳನ್ನು ಹಾಕಿ ಅದರ ಮೇಲೆ ಪಡಿತರ ವಸ್ತುಗಳನ್ನು ಸುರಿದು ವಿತರಣೆ ಮಾಡಬೇಕು ಸಲಹೆಗಳನ್ನು ನೀಡಲಾಗಿದೆ. ಈ ನಿಯಮಗಳನ್ನು ಮೀರಿದರೆ ಅಂತಹ ನ್ಯಾಯಬೆಲೆ ಅಂಗಡಿಗಳು ಮಾಲೀಕರು ಹಾಗೂ ಸೊಸೈಟಿಗಳ ಕಾರ್ಯದರ್ಶಿಗಳ ವಿರುದ್ದ ಸೂಕ್ತ ಶಿಸ್ತುಕ್ರಮ ವಹಿಸಲಾಗುವುದು ಎಂದು ಪೂರ್ಣಿಮಾ ಸಭೆಗೆ ಮಾಹಿತಿ ನೀಡಿದರು.
ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ, ಕೆ.ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್ ವನಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸಿಡಿಪಿಓ ಪದ್ಮ ತಮ್ಮ ಇಲಾಖೆಗಳ ಪ್ರಗತಿಯ ವರದಿಯನ್ನು ಮಂಡಿಸಿದರು.

ಸಭೆಯಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಾರ್ಯದರ್ಶಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಸುಷ್ಮ, ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ, ಕೆ.ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್ ವನಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸಿಡಿಪಿಓ ಪದ್ಮ, ಗ್ರಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವಿಷಯ ನಿರ್ವಾಹಕಿ ಕೆ.ಚೈತ್ರ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಸಿ.ಆರ್.ಪಿ.ಕುಮಾರ್, ಬಂಡಿಹೊಳೆ ಯೋಗೇಶ್(ಉಮೇಶ್), ದೊಡ್ಡತಾರಹಳ್ಳಿ ಸೋಮಶೇಖರ್, ಶ್ಯಾಮಣ್ಣ, ಕನಕದಾಸನಗರ ಶಿವಮ್ಮ, ಬೊಮ್ಮೇನಹಳ್ಳಿ ಲತಾ, ಕೆ.ಎಸ್.ಆರ್.ಟಿ.ಸಿ ಶಿವಣ್ಣ, ಸಿಂಧುಘಟ್ಟ ಆಫೀಜ್ ಉಲ್ಲಾ, ಯಗಚಗುಪ್ಪೆ ಶಿವಲಿಂಗಪ್ಪ, ಸೇರಿದಂತೆ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
- ಶ್ರೀನಿವಾಸ್ ಆರ್.