ಕೆ.ಆರ್.ಪೇಟೆ,ಮೇ.13: ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯಿತಿ ಹಾಗೂ ಶಾಸಕರಿಗೆ ಹೊರೆ ಕಡಿಮೆಯಾಗುತ್ತದೆ ಎಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಸಿಂಧುಘಟ್ಟ ಅಂಬೇಡ್ಕರ್ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಶೀಳನೆರೆ ಹೋಬಳಿಯ ಸಿಂಧುಘಟ್ಟ ಗ್ರಾಮ ಪಂಚಾಯಿತಿ ಮಟ್ಟದ ಕೆಡಿಪಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಮಟ್ಟದಲ್ಲಿ ನಡೆಯುವ ಗ್ರಾಮ ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಾಗುವುದು ಕಡ್ಡಾಯವಾಗಿದ್ದು ತಮ್ಮ ತಮ್ಮ ಇಲಾಖೆಗಳ ಪ್ರಗತಿಯನ್ನು ಕಡ್ಡಾಯವಾಗಿ ಹಾಜರಾಗಿ ಅಗತ್ಯ ಮಾಹಿತಿಗಳನ್ನು ಒದಗಿಸಿಕೊಡಬೇಕು. ಹಾಗೂ ಸರ್ಕಾರದ ಕಾರ್ಯಕ್ರಮಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿವೆ ಎಂಬುದನ್ನು ಪರಿಶೀಲನೆ ಮಾಡಿ ವಿಳಂಬವಾಗದAತೆ ಅನುಷ್ಟಾನ ಮಾಡುವ ದೃಷ್ಟಿಯಿಂದ ಪ್ರಗತಿ ಪರಿಶೀಲನಾ ಸಭೆಗಳನ್ನು ಆಯೋಜಿಸಲಾಗುತ್ತದೆ. ಪೋಲಿಸ್ ಸೇರಿದಂತೆ ಕೆಲವು ಇಲಾಖೆಗಳು ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅಂಥಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹೆಚ್.ಟಿ.ಮಂಜು ಕಿಡಿಕಾರಿದರು.

ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ಎಕರೆ ಸರ್ಕಾರಿ ಭೂಮಿ ಗುರುತಿಸಿ ವಸತಿ ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಗಬೇಕು. ಪೌತಿ ಖಾತೆ ಮಾಡಿಕೊಡಲು ಹಣದ ಆಮಿಷ ಒಡ್ಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಗ್ರಾಮಾಡಳಿತಾಧಿಕಾರಿಗಳು ಹಾಗೂ ರಾಜಸ್ವ ನಿರೀಕ್ಷಕರಿಗೆ ಇದು ಒಳ್ಳೆಯ ಬೆಳವಣಿಗೆಯಲ್ಲ. ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ವಿದ್ಯುತ್ ನೀಡುವಿಕೆ ಸಮರ್ಪಕವಾಗಿಲ್ಲವೆಂದು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿದ್ದು ಶೀಳನೆರೆ ವಿಭಾಗದ ಜೆಇ ಕೂಡಲೇ ಕ್ರಮವಹಿಸದಿದ್ದರೆ ಶಿಸ್ತುಕ್ರಮಕ್ಕೆ ಮುಂದಾಗಬೇಕಾಗುತ್ತದೆ.

ಸಿಂಧಘಟ್ಟ ಪ್ರೌಢಶಾಲೆಯು ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೀರಾ ಕಳಪೆ ಫಲಿತಾಂಶವನ್ನು ಪಡೆದಿದ್ದು ಶಿಕ್ಷಕರು ಹಾಗೂ ಮುಖ್ಯೋಪಾದ್ಯಾಯರು ತಮ್ಮ ಪಾಲಿನ ಕೆಲಸಗಳನ್ನು ಸರಿಯಾಗಿ ಮಾಡಿಲ್ಲವೆಂಬುದನ್ನು ತೋರಿಸುತ್ತದೆ. ಸರ್ಕಾರಿ ಶಾಲೆಗಳ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಿ ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕೆ ಶ್ರಮಿಸಬೇಕು. ಮೀನುಗಾರಿಕೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದ್ದು ಸಮರ್ಥವಾಗಿ ಕೆಲಸ ಮಾಡಲಾಗದಿದ್ದರೆ ವರ್ಗಾವಣೆ ಪಡೆದುಕೊಂಡು ಹೋಗಬಹುದು ಎಂದರು.

ಸಿಂಧಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಾವಣ್ಯಕುಮಾರ್ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಿಡಿಓ ಕೆ.ಜೆ.ವಾಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸಿಂಧುಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಾವಣ್ಯಕುಮಾರ್, ತಾಪಂ ಇ.ಓ ಕೆ.ಸುಷ್ಮಾ, ಪಿಡಿಓ ಕೆ.ಜೆ.ವಾಣಿ, ತಾಲ್ಲೂಕು ಪಂಚಾಯತ್ ಯೋಜನಾಧಿಕಾರಿ ಶ್ರೀನಿವಾಸ್, ಸೇರಿದಂತೆ ಗ್ರಾಪಂ ಸದಸ್ಯರುಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
-ಶ್ರೀನಿವಾಸ್ ಆರ್.