ಕೆ.ಆರ್.ಪೇಟೆ-ಭಾರತೀಯ-ಸಂಸ್ಕೃತಿಯ-ಮೂಲ-ಬೇರು-ಜನಪದರ- ರೂಢಿ-ಸಂಪ್ರದಾಯಗಳಾಗಿವೆ- ಶಾಸಕ-ಹೆಚ್.ಟಿ ಮಂಜು

ಕೆ.ಆರ್.ಪೇಟೆ: ಭಾರತೀಯ ಜಾನಪದ ಸಂಸ್ಕೃತಿ ಶ‍್ರೇಷ್ಠವಾದುದು. ನಮ್ಮ ರೈತಾಪಿ ವರ್ಗದವರು ಆಚರಣೆ ಮಾಡಿಕೊಂಡು ಬಂದಿರುವ ಲಿಪಿ ಇಲ್ಲದ ನಮ್ಮ ಜನಪದರ ಸಂಸ್ಕೃತಿಯ ಅರಿವನ್ನು ಮುಂದಿನ ಜನಾಂಗಕ್ಕೂ ತಿಳಿಯಪಡಿಸುವ ಅಗತ್ಯವಿದೆ. ಈ ಜವಾಬ್ದಾರಿಯನ್ನು ನಮ್ಮ ಯುವ ಜನತೆ ತೆಗೆದುಕೊಳ್ಳಬೇಕು ಎಂದು ಶಾಸಕ ಹೆಚ್.ಟಿ ಮಂಜು ತಿಳಿಸಿದರು.

ಅವರು ಕೆ.ಆರ್.ಪೇಟೆ ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಹಾಗೂ ಕ್ರೀಡಾ, ಸಾಂಸ್ಕೃತಿಕ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರತರಲು ಇಂತಹ ಪಠ್ಯೇತರ ಕಾರ್ಯಕ್ರಮಗಳು ಪೂರಕವಾಗಿದೆ. ಯುವ ಜನಾಂಗವು ನಮ್ಮ ಜಾನಪದ ಹಾಗೂ ದೇಶಿ ಸಂಸ್ಕೃತಿಯ ಮಹತ್ವ ಅರಿಯಬೇಕಿದೆ. ಓದಿನ ಜೊತೆ ಜೊತೆಯಲ್ಲಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸುವ ಕಾರ್ಯಕ್ರಮಗಳನ್ನು ಮೈಗೂಡಿಸಿಕೊಂಡಲ್ಲಿ ನಮ್ಮ ಸಂಸ್ಕೃತಿಯನ್ನು ಮುಂದಿನ ಉಳಿಸಲು ಸಾಧ್ಯವಿದೆ. ನಮ್ಮ ಜನಪದರ ಆಹಾರ, ವಿಚಾರ, ರೂಢಿ ಸಂಪ್ರದಾಯಗಳು ಉಳಿಯಬೇಕಾಗಿದೆ.

ಪಾಶ್ಚಾತ್ಯ ಸಂಸ್ಕೃತಿ ದೂರವಾಗಬೇಕಾಗಿದೆ. ಇಂದು ವಿದ್ಯಾರ್ಥಿನಿಯರು ತೊಟ್ಟಿರುವ ವಿಸ್ತ್ರಗಳು‌ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಜೊತೆಗೆ ನಮ್ಮ ಜನಪದರು ಮನೆಯಲ್ಲಿ ಬಳಸುವ ಉಪಕರಣಗಳು ನಮ್ಮಿಂದ ದೂರವಾಗುತ್ತಿವೆ. ಇವೆಲ್ಲವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದ ಅವರು ಜಾನಪದ ಈ ನೆಲದ ಸಂಸ್ಕೃತಿಯಾಗಿದೆ. ಈ ನೆಲದ ಸಂಸ್ಕೃತಿಯಲ್ಲಿ ಸಾಕಷ್ಟು ಮಹತ್ವದ ಕಲೆಗಳು ಇವೆ. ಕಲೆ ಮತ್ತು ಕಲಾವಿದರನ್ನು ಗೌರಿವಿಸುವುದು ನಮ್ಮೆಲ್ಲರ ಕರ್ತವ್ಯ.ಕಲೆಗಳ ತವರೂರಾಗಿರುವ ಕೆ.ಆರ್.ಪೇಟೆ ವಿಶೇಷ ಜಾನಪದ ಪರಂಪರೆ ಹೊಂದಿದೆ. ಯುವ ಪೀಳಿಗೆ ಪಾಶ್ಚಿಮಾತ್ಯ ಮೋಹಕ್ಕೆ ಒಳಗಾಗದೆ ದೇಶಿ ಸಂಸ್ಕೃತಿ ಹಾಗೂ ಜಾನಪದ ಸೊಗಡನ್ನು ಅರಿತು ಸಂಸ್ಕೃತಿಯ ಉಳಿವಿಗೆ ಮುಂದಾಗಬೇಕಿದೆ.

ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ ಆಯೋಜಿಸಿರುವ ಕಾರ್ಯಕ್ರಮ ಪ್ರಸ್ತುತವಾಗಿದೆ.ರಂಗಭೂಮಿ, ಜನಪದಕಲೆ, ಸೋಬಾನೆ, ಹರಿಕಥೆ ಮುಂತಾದವುಗಳನ್ನು ಕಲಿಯುವ ಮೂಲಕ ಜನಪದ ಸೊಗಡು ಉಳಿಸಬೇಕು. ನಾಟಕ ಹಾಗೂ ಜಾನಪದದ ಬಗ್ಗೆ ತಿಳಿದಿರುವ ಕಲಾವಿದರು ತಂಡಗಳನ್ನು ಕಟ್ಟಿಕೊಂಡು ಎಲ್ಲೆಡೆ ಪ್ರದರ್ಶನ ನೀಡಿ ಅರಿವು ಮೂಡಿಸಬೇಕಿದೆ. ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಜನಪದ ಕಲೆಗಳ ಮಾಹಿತಿ ಇಲ್ಲವಾಗುವುದು ಎಂದು ಶಾಸಕ ಹೆಚ್.ಟಿ ಮಂಜು ಹೇಳಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಕಾಲೇಜು ಆವರಣ ತನಕ ಎತ್ತಿನಗಾಡಿ ಮೆರವಣಿಗೆಯಲ್ಲಿ ಪಟ್ಟಣ ಪ್ರಮುಖ ರಸ್ತೆ ಉದ್ದಕ್ಕೂ ಡೊಳ್ಳು ಕುಣಿತ ತಾಳಕ್ಕೆ ವಿದ್ಯಾರ್ಥಿಗಳ ಜೊತೆ ಶಾಸಕ ಹೆಚ್.ಟಿ ಮಂಜು , ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಹೆಜ್ಜೆ ಹಾಕಿದರು.

ಕಾಲೇಜಿನ ಆವರಣವನ್ನು ಜನಪದ ವಸ್ತುಗಳಿಂದ ಅಲಂಕರಿಸಿ ಜಾನಪದ ಲೋಕವನ್ನೇ ಸೃಷ್ಟಿಸಲಾಗಿತ್ತು. ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಪಾಲ್ಗೊಂಡಿದ್ದರು.ಕಾಲೇಜಿನ ಆವರಣದಲ್ಲಿ ಹಾಕಿ ರಾಗಿ, ಭತ್ತ, ಜೋಳ, ಅವರೆ, ತೊಗರಿ, ಹುರುಳಿ ಇತ್ಯಾದಿ ಆಹಾರ ಧಾನ್ಯ, ತೆಂಗು, ಅಡಿಕೆ ಜೊತೆಗೆ ಪೂರ್ವಜರು ಬಳಸುತ್ತಿದ್ದ ಒನಕೆ, ಕುಡುಗೋಲು, ದಿನಸಿ ಪೆಟ್ಟೆ, ರಾಗಿ ಬೀಸುವ ಕಲ್ಲು, ರುಬ್ಬುವ ಗುಂಡು, ಮಣ್ಣಿನ ಒಲೆ, ಪಾತ್ರೆ ಇತ್ಯಾದಿ ವಸ್ತುಗಳಿಂದ ಇಡೀ ಕಾಲೇಜಿನ ಆವರಣವನ್ನೇ ಅಲಂಕರಿಸಲಾಗಿತ್ತು.ವಿಶೇಷವಾಗಿ ವಿದ್ಯಾರ್ಥಿಗಳಿಂದ ಆಹಾರ ಮೇಲೆ ಎಲ್ಲರ ಕಣ್ಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ: ಕೆ.ಪಿ.ಪ್ರತಿಮಾ, ಸರ್ಕಲ್ ಇನ್ಸ್ ಪೆಕ್ಟರ್ ಸುಮಾರಾಣಿ, ಪುರಸಭಾ ಸದಸ್ಯ ಗಿರೀಶ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಭೈರಪುರ ಹರೀಶ್, ಬೇಲದಕೆರೆ ಮರೀಗೌಡ, ಹೊಸಹೊಳಲು ಕಾಂತರಾಜು, ಚೌಡಲಿಂಗಯ್ಯ, ಉಪನ್ಯಾಸಕರಾದ ಸಿ.ಬಿ.ಚೇತನ್ ಕುಮಾರ್,ಕೃಷ್ಣಮೂರ್ತಿ,ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಸೇರಿದಂತೆ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

-‌ ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?