ಕೆ.ಆರ್.ಪೇಟೆ : ವಿಜ್ಞಾನ ತಂತ್ರಜ್ಞಾನಗಳ ಆವಿಷ್ಕಾರದ ಫಲವನ್ನು ಸುಭದ್ರ ರಾಷ್ಟ್ರದ ನಿರ್ಮಾಣಕ್ಕೆ ಯುವ ಜನರು ಸದ್ಭಳಕೆ ಮಾಡಿಕೊಂಡು ದೇಶದ ಮುನ್ನಡೆಗೆ ಅಪೂರ್ವ ಕಾಣಿಕೆ ನೀಡಬೇಕು ಎಂದು ಮೈಸೂರು ಮಾನಸ ಗಂಗೋತ್ರಿಯ ಕಂಪ್ಯೂಟರ್ ವಿಭಾಗದ ಪ್ರೊಫೆಸರ್ ಡಾ.ಡಿ.ಎಸ್.ಗುರು ಕರೆ ನೀಡಿದರು.
ಅವರು ಕೆ. ಆರ್. ಪೇಟೆ ಪಟ್ಟಣದ ಕೃಷ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಅತ್ಯಾಧುನಿಕ ಸಂಶೋಧನೆಯಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಪಾತ್ರ ಕುರಿತ ಎರಡು ದಿನಗಳ ಮೂರನೇ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶವು ವಿಶ್ವದ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರೆಯುತ್ತಿರುವ ರಾಷ್ಟ್ರವಾದರೂ ಬಾಹ್ಯಕಾಶ ಹಾಗೂ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಸಾಧನೆಯು ಅಪಾರವಾಗಿದೆ.

ಭಾರತ ದೇಶದ ಯುವ ಎಂಜಿನಿಯರುಗಳು ಪ್ರತಿಭಾವಂತರಾಗಿದ್ದು ವಿಶ್ವದ ಯಾವುದೇ ರಾಷ್ಟ್ರದ ಎಂಜಿನಿಯರುಗಳು ಒಡ್ದುವ ಸ್ಪರ್ಧೆ ಹಾಗೂ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಅತ್ಯುತ್ತಮವಾದ ಸಾಧನೆ ಮಾಡುವ ಸಾಮರ್ಥ್ಯ ಹಾಗೂ ಎದೆಗಾರಿಕೆಯನ್ನು ಹೊಂದಿದ್ದಾರೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೇರಿಕ ರಾಷ್ಟ್ರವೇ ಭಾರತ ದೇಶದ ಸಾಧನೆಯನ್ನು ಮುಕ್ತಕಂಠ ದಿಂದ ಶ್ಲಾಘಿಸಿ ನಮ್ಮ ದೇಶದ ಸಾಧನೆಗಳು ಹಾಗೂ ಸಂಶೋಧನೆಯನ್ನು ಬೆರಗುಗಣ್ಣಿನಿಂದ ನೋಡುತ್ತಿದೆ. ಕೆ.ಆರ್.ಪೇಟೆ ಕೃಷ್ಣ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಗ್ರಾಮಾಂತರ ಪ್ರದೇಶದಲ್ಲಿದ್ದರೂ ಕಾಲೇಜಿನ ಸಾಧನೆ ಹಾಗೂ ಶೈಕ್ಷಣಿಕ ಪ್ರಗತಿಯು ಅದ್ಭುತವಾಗಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ. ಹೆಚ್.ಪ್ರಸನ್ನ, ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಎಸ್.ಪಿ. ಬಸವರಾಜು, ರಾಮನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಪುಂಡರಿಕ, ಬೆಂಗಳೂರು ಕೃಷ್ಣರಾಜೇಂದ್ರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ವೆಂಕಟೇಶ್, ಹಾಸನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಡಾ.ಗಿರೀಶ್, ಚಳ್ಳಕೆರೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಂ. ಬೆನಲ್, ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಟಿ.ಜಿ. ಬಸವರಾಜ್, ನಾಗರಘಟ್ಟ ಡಾ.ಸತೀಶ್ ಸೇರಿದಂತೆ ರಾಜ್ಯದ ವಿವಿಧ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೆ.ಆರ್.ಪೇಟೆ ಕೃಷ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಆರ್. ದಿನೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಡಾ.ರುದ್ರೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಹಾಗೂ ಗಣ್ಯರನ್ನು ಸ್ವಾಗತಿಸಿದರು. ಮಹೇಶ್ ವಂದಿಸಿದರು.
- ಶ್ರೀನಿವಾಸ್ ಆರ್.