ಕೆ.ಆರ್.ಪೇಟೆ: ಹಾಸನದ ಕೃಷಿ ಕಾಲೇಜನ್ನು ಮಂಡ್ಯ ಕೃಷಿ ವಿಶ್ವ ವಿದ್ಯಾನಿಲಯದ ವ್ಯಾಪ್ತಿಗೆ ತರದೆ ಬೆಂಗಳೂರು ಕೃಷಿ ವಿ.ವಿ ವ್ಯಾಪ್ತಿಯಲ್ಲಿಯೇ ಮುಂದುವರೆಸುವಂತೆ ಹಾಸನ ಜಿಲ್ಲಾ ಜೆಡಿಎಸ್ ಶಾಸಕರುಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದನ್ನು ಮಂಡ್ಯ ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ. ಅಲ್ಲದೇ ಜೆಡಿಎಸ್ ಪಕ್ಷವು ಮಂಡ್ಯ ಜಿಲ್ಲೆಯ ಅಭಿವೃದ್ಧಿ ವಿರೋಧಿ ಎಂಬುದು ಇದರಿಂದ ಸ್ಪಷ್ಟವಾಗಿದೆ. ಹಾಗಾಗಿ ಮಂಡ್ಯ ಜಿಲ್ಲೆಯ ಮತದಾರರು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ತಕ್ಕಪಾಠ ಕಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಸನ ಜಿಲ್ಲಾ ಜೆಡಿಎಸ್ ಶಾಸಕರ ಮಂಡ್ಯ ಜಿಲ್ಲೆಯ ಅಭಿವೃದ್ದಿ ವಿರೋಧಿ ನೀತಿಯನ್ನು ಖಂಡಿಸಿದರಲ್ಲದೆ ಹಾಸನದ ಕೃಷಿ ಕಾಲೇಜಿನ ಕಾರ್ಯಚಟುವಟಿಕೆಗಳನ್ನು ಮಂಡ್ಯ ಕೃಷಿ ವಿ.ವಿ ವ್ಯಾಪ್ತಿಯಲ್ಲಿಯೇ ಮುಂದುವರಿಸುವಂತೆ ಒತ್ತಾಯಿಸಿದರು.
ರಾಜ್ಯ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಹೋರಾಟದ ಫಲವಾಗಿ ಮಂಡ್ಯ ಕೃಷಿ ವಿಶ್ವ ವಿದ್ಯಾನಿಲಯ ಅಸ್ತಿತ್ವಕ್ಕೆ ಬಂದಿದೆ. ಮಂಡ್ಯದಲ್ಲಿ ಕೃಷಿ ವಿ.ವಿ.ಸ್ಥಾಪನೆಯನ್ನು ಸಹಿಸಲಾರದ ಹಾಸನದ ಜೆಡಿಎಸ್ ಶಾಸಕರಾದ ಹೆಚ್.ಡಿ.ರೇವಣ್ಣ, ಸೂರಜ್ ರೇವಣ್ಣ, ಸುರೇಶ್ ಬಾಬು, ಎಂ.ಮಂಜು ಸೇರಿದಂತೆ ಹಲವರು ಇಂದು ರಾಜ್ಯ ವಿಧಾನ ಸಭಾ ಕಲಾಪದಲ್ಲಿ ನಿಯಮ 5 ರಲ್ಲಿ 69 ರ ಮೇರೆಗೆ ಸಾರ್ವಜನಿಕರ ಮಹತ್ವದ ಜರೂರು ವಿಷಯಗಳ ಅಡಿಯಲ್ಲಿ ಚರ್ಚೆಗೆ ತಂದಿದ್ದು ರೈತರುಗಳಿಗೆ ಕೃಷಿ ಉತ್ಪಾದನಾ ಚಟುವಟಿಕೆಗಳ ಬಗ್ಗೆ ತರಬೇತಿ ನೀಡುವ ದೃಷ್ಠಿಯಿಂದ ಹಾಸನದ ಕೃಷಿ ಕಾಲೇಜನ್ನು ಬೆಂಗಳೂರಿನ ಕೃಷಿ ವಿಶ್ವ ವಿದ್ಯಾನಿಲಯದ ವ್ಯಾಪ್ತಿಯಲ್ಲಿಯೇ ಮುಂದುವರಿಸುವಂತೆ ಚರ್ಚಿಸಲು ಅವಕಾಶ ಕೋರಿ ಬೇಡಿಕೆ ಮಂಡಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಅಸ್ತಿತ್ವವನ್ನು ಉಳಿಸಿರುವವರೇ ಮಂಡ್ಯ ಜಿಲ್ಲೆಯ ಮತದಾರರು. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮಂಡ್ಯದ ಜನ ತಮ್ಮ ಸಂಸದರನ್ನಾಗಿಸಿಕೊಳ್ಳುವ ಮೂಲಕ ಕೇಂದ್ರದ ಅಧಿಕಾರ ದೊರಕಿಸಿಕೊಟ್ಟಿದ್ದಾರೆ. ಮಂಡ್ಯ ಕೃಷಿ ವಿ.ವಿ ವ್ಯಾಪ್ತಿಗೆ ಹಾಸನದ ಕೃಷಿ ಕಾಲೇಜು ಸೇರ್ಪಡೆಗೆ ವಿರೋಧಿಸುವ ಮೂಲಕ ಜೆಡಿಎಸ್ ಪಕ್ಷದ ನಾಯಕರುಗಳಿಗೆ ಮಂಡ್ಯ ಮತ್ತು ಮೈಸೂರು ಭಾಗದ ಅಭಿವೃದ್ದಿಗೆ ಆಸಕ್ತಿಯಿಲ್ಲ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ ಎಂದು ಕಿಡಿಕಾರಿರುವ ಸಿ.ಡಿ.ಗಂಗಾಧರ್ ಜೆಡಿಎಸ್ ಪಕ್ಷದವರಿಗೆ ಮಂಡ್ಯದ ಜನರ ಓಟು ಮಾತ್ರ ಬೇಕು.
ಆದರೆ ಮಂಡ್ಯದ ಅಭಿವೃದ್ದಿಯ ಬಗ್ಗೆ ಕಾಳಜಿಯಿಲ್ಲ. ಜಿಲ್ಲೆಯ ಜನತೆಗೆ ಮೋಸ ಮಾಡುತ್ತಿರುವ ಜೆಡಿಎಸ್ ನಾಯಕರುಗಳ ಬಗ್ಗೆ ಜಿಲ್ಲೆಯ ಜೆಡಿಎಸ್ ಜನಪ್ರತಿನಿಧಿಗಳು ಉತ್ತರಿಸಬೇಕು. ಕೆಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಈ ಬಗ್ಗೆ ತಮ್ಮ ನಿಲುವು ಪ್ರಕಟಿಸಬೇಕು. ಮಂಡ್ಯ ವಿ.ವಿ ವ್ಯಾಪ್ತಿಗೆ ಹಾಸನದ ಕೃಷಿ ಕಾಲೇಜಿನ ಚಟುವಟಿಕೆಗಳನ್ನು ಸೇರ್ಪಡೆ ಮಾಡದಿದ್ದರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜೆಡಿಎಸ್ ಪಕ್ಷದ ಮಂಡ್ಯ ಅಭಿವೃದ್ದಿ ವಿರೋಧಿ ನೀತಿಯನ್ನು ಕರಪತ್ರಗಳ ಮೂಲಕ ಮುದ್ರಿಸಿ ಜಿಲ್ಲೆಯ ಪ್ರತಿ ಮತದಾರನ ಮನೆಯ ಬಾಗಿಲಿಗೆ ತಲುಪಿಸಿ ಮತದಾರರಿಗೆ ಮನವರಿಕೆ ಮಡಿಕೊಡಲಾಗುವುದಲ್ಲದೆ ಜಿಲ್ಲೆಯ ಅಭಿವೃದ್ದಿಗಾಗಿ ಬೀದಿ ಹೋರಾಟಕ್ಕಿಳಿಯುವುದಾಗಿ ಎಚ್ಚರಿಸಿದರು.

ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಸೋಮನಹಳ್ಳಿ ಗ್ರಾಮದಲ್ಲಿ ಸಿಎಲ್ 7 ಮದ್ಯದಂಗಡಿ ತೆರಯಲು ಅಗತ್ಯ ಪರವಾನಿಗೆ ನೀಡುವಂತೆ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಅಬಕಾರಿ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷದ ವಿರೋಧವಿದೆ. ಸಿಎಲ್ 7 ಮದ್ಯದಂಗಡಿ ತೆರಯಲು ಶಾಸಕರ ಆಪ್ತನೊಬ್ಬ ಸಿದ್ದಪಡಿಸಿಕೊಂಡಿರುವ ಜಾಗದ ಸುತ್ತ ರೈತರ ಫಲವತ್ತಾದ ಕೃಷಿ ಭೂಮಿಯಿದ್ದು ರೈತ ಕುಟುಂಬಗಳ ವಾಸದ ಮನೆಗಳಿವೆ. ಉದ್ದೇಶಿತ ಮದ್ಯದಂಗಡಿಯ 150 ಮೀಟರ್ ಅಂತರದಲ್ಲಿಯೇ ಶನಿ ದೇವಾಲಯವಿದ್ದು ಇಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದ್ದು ಇಲ್ಲಿ ಮದ್ಯದಂಗಡಿ ತೆರೆಯಲು ರೈತರ ವಿರೋಧವಿದೆ.
ಇದೆಲ್ಲವನ್ನೂ ಗಮನಿಸಿ ಇಲ್ಲಿ ಮದ್ಯದಂಗಡಿ ತೆರಯಲು ಪರವಾನಿಗೆ ನೀಡದಂತೆ ಜಿಲ್ಲಾಡಳಿತ ಅಬಕಾರಿ ಇಲಾಖೆಗೆ ವರದಿ ನೀಡಿದ್ದು ಕಂದಾಯ ಡಿ.ಸಿ ಮದ್ಯದಂಗಡಿಯ ಲೈಸೆನ್ಸ್ ವಜಾಗೊಳಿಸಿದ್ದಾರೆ. ಪ್ರಕರಣ ರಾಜ್ಯ ಹೈಕೋರ್ಟ್ ಮತ್ತು ಕೆ.ಆರ್.ಪೇಟೆ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇದರ ಅರಿವಿದ್ದರೂ ಮದ್ಯದಂಗಡಿಗೆ ಅಗತ್ಯ ಪರವಾನಿಗೆ ನೀಡುವಂತೆ ಶಾಸಕ ಹೆಚ್.ಟಿ.ಮಂಜು ಒತ್ತಾಯಿಸುತ್ತಿರುವುದು ಸರಿಯಲ್ಲ. ಮದ್ಯದಂಗಡಿ ತೆರೆಯಲು ಹೋರಾಟ ಮಾಡುವ ಬದಲು ಕ್ಷೇತ್ರದ ಅಭಿವೃದ್ದಿಗಾಗಿ ಅವರು ಹೋರಾಟ ಮಾಡಲಿ ಎಂದು ಸಿ.ಡಿ.ಗಂಗಾಧರ್ ಕಿವಿಮಾತು ಹೇಳಿದರು.

ತಾಲೂಕಿನ ಕೆರೆಕಟ್ಟೆಗಳನ್ನು ಹೇಮಾವತಿ ನೀರಿನಿಂದ ಇದುವರೆಗೂ ತುಂಬಿಸದಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿ.ಡಿ.ಗಂಗಾಧರ್ ಹೇಮಾವತಿ ಜಲಾನಯನ ಪ್ರದೇಶದ ಹಿತದೃಷ್ಠಿಯಿಂದ ಜಲಶಯದಿಂದ ಕಾಲುವೆಗಳ ಮುಖಾಂತರ ನೀರು ಹರಿಸಿ ಕೆರೆಕಟ್ಟೆಗಳನ್ನು ತುಂಬಿಸಬೇಕೆನ್ನುವುದಕ್ಕೆ ನಮ್ಮ ಬೆಂಬಲವಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಬಳಿ ವಿಷಯ ಪ್ರಸ್ತಾಪಿಸಿ ಜಿಲ್ಲಾ ವ್ಯಾಪ್ತಿಯ ಜನರಿಗೆ ಹೇಮೆಯ ನೀರು ಹರಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ತಾಲೂಕು ಕಾಂಗ್ರೆಸ್ ಉಸ್ತುವಾರಿ ಚಿನಕುರಳಿ ಸಿ.ಆರ್.ರಮೇಶ್, ಜಿ.ಪಂ ಮಾಜಿ ಸದಸ್ಯ ರಾಮದಾಸ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್, ಮುಖಂಡರಾದ ಬಸ್ತಿರಂಗಪ್ಪ, ರಾಜಯ್ಯ, ಎಲ್.ಪಿ.ನಂಜಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷ ಹೆಚ್.ವಿ.ಸತೀಶ್, ತಾಲ್ಲೂಕು ಕೆಡಿಪಿ ಸದಸ್ಯ ಇಲಿಯಾಸ್ ಪಾಷ, ಸಯ್ಯದ್ ಜಮೀಲ್, ಬಳ್ಳೇಕೆರೆ ವಿಜಯ್‌ಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.