ಕೆ.ಆರ್.ಪೇಟೆ-ವಿಜೃಂಭಣೆಯಿಂದ ನಡೆದ ಕಾಮನಹಳ್ಳಿ ವಡ್ಗಲಮ್ಮನವರ ಕನ್ನಂಕಾಡಿ ಉತ್ಸವ

ಕೆ.ಆರ್.ಪೇಟೆ,ಏ.05: ತಾಲ್ಲೂಕಿನ ಕಸಬಾ ಹೋಬಳಿಯ ಕಾಮನಹಳ್ಳಿ ಗ್ರಾಮದೇವತೆ ಶ್ರೀ ವಡ್ಗಲಮ್ಮನವರ ಕನ್ನಂಕಾಡಿ ಉತ್ಸವವು ಅದ್ದೂರಿಯಾಗಿ ಜರುಗಿತು.

ಏಳು ಗ್ರಾಮಗಳು ಸೇರಿ ಪ್ರತಿ ಎರಡೂ ವರ್ಷಕ್ಕೊಮ್ಮೆ ವೈಭವದಿಂದ ಆಚರಿಸುವ ಕನ್ನಂಕಾಡಿ ಉತ್ಸವವು ಗ್ರಾಮದ ರಂಗ ಕುಣಿತದ ಆವರಣದಲ್ಲಿ ಸಾವಿರಾರು ಭಕ್ತಾಧಿಗಳು ಆಗಮಿಸಿ ಉಘೇ.. ವಡ್ಗಲಮ್ಮ, ಉಘೇ…ಚಿಕ್ಕಮ್ಮ ಉಘೇ… ಉಘೇ… ಎಂಬ ಜಯಘೋಷಗಳನ್ನು ಕೂಗುತ್ತಾ ತೂಗುಬಂಡಿಯನ್ನು ಎಳೆದು ತಮ್ಮ ಭಕ್ತಿ-ಭಾವ ಸಮರ್ಪಿಸಿದರು.

ಹಬ್ಬದ ದಿನದ ಮೂರು ನಾಲ್ಕು ದಿನಗಳ ಮುಂಚೆ ಇಡೀ ಗ್ರಾಮವು ತಳಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕೃತಗೊAಡು, ಮನೆಯ ಮುಂದೆ ರಂಗೋಲಿ ಬಿಡಿಸಿ, ಹರಕೆಹೊತ್ತ ಮಹಿಳೆಯರು ದಿನದ 24 ಗಂಟೆಗಳ ಕಾಲ ಉಪವಾಸವನ್ನು ಆಚರಿಸುವ ಮೂಲಕ ಭಕ್ತಿ ಭಾವದಿಂದ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ.‌

ಶ್ರೀ ವಡ್ಗಲಮ್ಮ ಉತ್ಸವ ಮೂರ್ತಿಯನ್ನು 6 ವರ್ಷದ ಬಾಲಕಿಯ ತಲೆಯ ಮೇಲೆ ಹೊರಿಸಿ ಇಡೀ ರಾತ್ರಿಯೆಲ್ಲಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಮಟೆ ಸದ್ದು,ವಾಲಗ ಡೋಲು,ಪಟಾಕಿ ಸಿಡಿಸುವ ಮೂಲಕ ಗ್ರಾಮದ ಹೊರಗಡೆ ಇರುವ ವಡ್ಗಲಮ್ಮ ಹಾಗೂ ಚಿಕ್ಕಮ್ಮ ದೇವಿಯ ದೇವಾಲಯದ ಆವರಣದವರೆಗೆ ಹಾದುಹೋಗುತ್ತದೆ.ಹರಕೆ ಹೊತ್ತ ಭಕ್ತರಿಂದ ಬಾಯಿಬೀಗ, ಎಡೆ-ಮಡೆ ಉತ್ಸವ, ಕನ್ನಂಕಾಡಿ ಉತ್ಸವ, ಕೊಂಡೋತ್ಸವವನ್ನು ಏರ್ಪಡಿಸಲಾಗಿತ್ತು.

ಮೂರು ದಿನಗಳ ಕಾಲ ನಡೆಯುವ ವಡ್ಗಲಮ್ಮ ದೇವಿಯ ಕನ್ನಂಕಾಡಿ ಉತ್ಸವ, ರಂಗದ ಹಬ್ಬ, ಓಕುಳಿ ಹಬ್ಬ,ಹುಲಿವೇಷ ಹೀಗೆ ಮೂರು ದಿನಗಳ ಕಾಲ ಅದ್ದೂರಿಯಾಗಿ ಆಚರಣೆ ನಡೆಯಿತು.

ಕಾಮನಹಳ್ಳಿ,ಮೊಸಳೆಕೊಪ್ಪಲು, ಗಂಜಿಗೆರೆ, ವಿಠಲಾಪುರ, ಚಿಕ್ಕಗಾಡಿಗನಹಳ್ಳಿ, ಬಿಂಡಹಳ್ಳಿ ಸೇರಿದಂತೆ 7 ಗ್ರಾಮಗಳ ಜೊತೆಗೆ ದೂರದ ಊರುಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಯಜಮಾನರು, ಮಹಿಳೆಯರು, ಪುರುಷರು, ಯುವತಿಯರು, ಯುವಕರು, ಮಕ್ಕಳು ಭಕ್ತಿಯಿಂದ ಕನ್ನಂಕಾಡಿ ಉತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?