ಕೆ.ಆರ್ ಪೇಟೆ-ಕನಕದಾಸರ ತತ್ವ ಆದರ್ಶಗಳು ಹಿಂದೆಂದಿಗಿಂತ ಇಂದು ಪ್ರಸ್ತುತವಾಗಿವೆ ಎಂದು ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ ಹೇಳಿದರು
ಪಟ್ಟಣದ ಪ್ರಗತಿ ಶಾಲೆಯಲ್ಲಿ ಕನಕದಾಸರ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನಕದಾಸರು ತಮ್ಮ ಚಿಂತನೆಯನ್ನು ಸಮಾಜಕ್ಕೆ ಕೊಟ್ಟು ಹೋದ ಕವಿ, ದಾರ್ಶನಿಕ ಸಂತ, ಸಮಾಜ ಸುಧಾರಕ ತತ್ವಜ್ಞಾನಿ ಆಗಿದ್ದರು. ಕನಕದಾಸರು ನಡೆಸಿದ ಜೀವನ ಆದರ್ಶಗಳು ನಮಗೆ ಪ್ರಸ್ತುತವಾಗಿವೆ. ನಾನು ಎನ್ನುವುದನ್ನು ಕಳೆದುಕೊಂಡವರು ಮಾತ್ರ ಮೋಕ್ಷಕ್ಕೆ ಹೋಗುತ್ತಾರೆ. ನಾನು ಎನ್ನುವುದು ಅಹಂ, ಅಹಂಕಾರವನ್ನು ತ್ಯಜಿಸಿದವನು ಮಾತ್ರ ಉತ್ತಮ ಆಗಲು ಸಾಧ್ಯ. ಅಹಂಕಾರದಿಂದ ಯಾರು ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಕನಕದಾಸರು ಒತ್ತಿ ಹೇಳಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಹಲವಾರು ಕೃತಿಗಳನ್ನು ರಚಿಸಿದ ಕನಕದಾಸರು ತಮ್ಮ ಕೊನೆ ಉಸಿರು ಇರುವವರೆಗೆ ಸಂಗೀತ ಸಾಹಿತ್ಯ ಮುಂತಾದವುಗಳಲ್ಲಿ ತೊಡಗಿ ಕೊಂಡವರು. ಜನಸಾಮಾ ನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಅತ್ಯಂತ ಸರಳವಾದ ಭಾಷೆಯನ್ನು ಬಳಸಿ ಕೃತಿಗಳನ್ನು ರಚಿಸಿದ್ದಾರೆ. ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು.
ರಾಮಧಾನ್ಯ ಚರಿತ್ರೆಯಲ್ಲಿ ಬಡವರನ್ನು ಪ್ರತಿನಿಧಿಸುವ ರಾಗಿ ಮತ್ತು ಶ್ರೀಮಂತರನ್ನು ಪ್ರತಿನಿಧಿಸುವ ಭತ್ತದ ನಡುವಿನ ಸಂವಾದ ಅತ್ಯಂತ ಮನೋಜ್ನವಾಗಿ ಮೂಡಿಬಂದಿದೆ. ಕನಕದಾಸರ ತತ್ವ ಆದರ್ಶಗಳು ನಮಗೆ ಇಂದಿಗೂ ಅನುಕರಣೀಯವಾಗಿವೆ. ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರ ಎನ್ನುವ ಅದ್ಭುತ ಸಂದೇಶವನ್ನು ಕನಕದಾಸರು ನಮಗೆ ನೀಡಿದ್ದಾರೆ.
ಜಾತಿ ಪದ್ಧತಿಯನ್ನು ಇಟ್ಟುಕೊಂಡು ಕನಕದಾಸರನ್ನು ಆರಾಧಿಸುವುದು ವಿರೋಧ ಭಾಸವಾಗಿದೆ. ಜಾತಿಯಿಂದ ಹೊರಬಂದು ಕನಕದಾಸರನ್ನು ನೆನೆದಾಗ ಅದು ಅರ್ಥಪೂರ್ಣವಾಗಿ ಇರುತ್ತದೆ ಎಂದು ಕಾಳೇಗೌಡ ಹೇಳಿದರು.
ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
ಶಾಲೆ ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿ ಎಂ.ಕೆ. ಮೋನಿಕಾ , ಮುಖ್ಯ ಶಿಕ್ಷಕರಾದ ಗೋಪಾಲಕೃಷ್ಣ, ಶಿಕ್ಷಕಿ ದೀಪ್ತಿ, ಶಿಕ್ಷಕ ಎಂ.ಎನ್. ಶ್ರೀಧರ್ ಹಾಗೂ ವಿದ್ಯಾರ್ಥಿನಿ ಜೀವಿತ ಕನಕದಾಸರ ಕುರಿತು ಉಪನ್ಯಾಸ ನೀಡಿದರು.ವಿದ್ಯಾರ್ಥಿ ಗೋವರ್ಧನ್ ಸ್ವಾಗತಿಸಿ, ವಂದಿಸಿದರು.ಶಿಕ್ಷಕಿ ಕಾವ್ಯ ನಿರೂಪಿಸಿದರು.
———ಶ್ರೀನಿವಾಸ್ ಕೆ ಆರ್ ಪೇಟೆ