ಕೆ.ಆರ್.ಪೇಟೆ;ಕೆ.ಆರ್.ಪೇಟೆ ಪುರಸಭೆಯ ನೂತನ ಅಧ್ಯಕ್ಷೆಯಾಗಿ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಪಂಕಜಾಪ್ರಕಾಶ್ ಅವರು 14ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಜೆ.ಡಿ.ಎಸ್ ಅಭ್ಯರ್ಥಿ ಗಾಯತ್ರಿ ಸುಬ್ಬಣ್ಣ (6ಮತಗಳು) ಅವರನ್ನು 08 ಮತಗಳ ಅಂತರದಿoದ ಸೋಲಿಸಿ ಭರ್ಜರಿ ಗೆಲುವು ಸಾಧಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಕಾಂಗ್ರೇಸ್ ಪಕ್ಷದಿಂದ ಪಂಕಜಾ ಹಾಗೂ ಜೆ.ಡಿ.ಎಸ್ ನಿಂದ ಗಾಯತ್ರಿಸುಬ್ಬಣ್ಣ ನಾಮಪತ್ರವನ್ನು ಸಲ್ಲಿಸಿದ್ದರು.
ನಂತರ ನಡೆದ ಚುನಾವಣೆಯಲ್ಲಿ ಜೆ.ಡಿ.ಎಸ್-ಬಿ.ಜೆ.ಪಿ ಪಕ್ಷಗಳು 12 ಸದಸ್ಯರು ಜೊತೆಗೆ ಶಾಸಕರು ಮತ್ತು ಸಂಸದರ ಮತವನ್ನು ಸಹ ಹೊಂದಿದ್ದು,14ಮತಗಳ ಬೆಂಬಲ ಇದ್ದು ಅಧಿಕಾರದ ಗದ್ದುಗೆಯನ್ನು ಏರಲು ಅಗತ್ಯವಾದ ಮತಗಳನ್ನು ಹೊಂದಿತ್ತು.
ಆದರೆ 10 ಮತಗಳನ್ನು ಹೊಂದಿದ್ದ ಕಾಂಗ್ರೇಸ್ ಪಕ್ಷವು ಜೆ.ಡಿ.ಎಸ್ ಪಕ್ಷದ ಮೂರು ಸದಸ್ಯರ ಅಡ್ಡಮತದಾನ ಹಾಗೂ ಓರ್ವ ಪಕ್ಷೇತರ ಸದಸ್ಯನ ಮೂಲಕ 14 ಮತಗಳನ್ನು ಪಡೆದು ಮೈತ್ರಿಕೂಟಕ್ಕೆ ಆಘಾತ ನೀಡುವ ಜೊತೆಗೆ ಇಬ್ಬರು ಜೆ.ಡಿ.ಎಸ್ ಸದಸ್ಯರು ಹಾಗೂ ಓರ್ವ ಬಿ.ಜೆ.ಪಿ ಸದಸ್ಯ ಅಧ್ಯಕ್ಷರ ಚುನಾವಣೆಗೆ ಗೈರು ಹಾಜರಾಗುವಂತೆ ಮಾಡುವ ಮೂಲಕ ತಂತ್ರಗಾರಿಕೆ ನಡೆಸಿ ಭರ್ಜರಿ ಗೆಲುವು ದಾಖಲಿಸಿತು.
ಅಧ್ಯಕ್ಷರ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಹೊಂದಿದ್ದ ಶಾಸಕ ಮಂಜು ಹಾಗೂ ಸಂಸದ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದಿನ ಚುನಾವಣೆಗೆ ಗೈರು ಹಾಜರಾಗಿದ್ದರು.ಅಧಿಕಾರದ ಗದ್ದುಗೆ ಏರಲು ಬೇಕಾದ ಸ್ಪಷ್ಟ ಬಹು ಮತಗಳನ್ನು ಹೊಂದಿದ್ದರೂ ಸ್ವತಃ ಶಾಸಕರೇ ಅಧ್ಯಕ್ಷರ ಆಯ್ಕೆಯ ಚುನಾವಣೆಗೆ ಗೈರು ಹಾಜರಾಗಿದ್ದು ಅಚ್ಚರಿ ಮೂಡಿಸಿತು.
ತಾಲೂಕು ದಂಡಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಯಾದ ತಹಶೀಲ್ದಾರ್ ಅಶೋಕ್ ಅವರು ಕೈಎತ್ತುವ ಚುನಾವಣಾ ಪ್ರಕ್ರಿಯೆಯ ಪ್ರಕಾರ ಚುನಾವಣೆ ನಡೆಸಿದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಂಕಜಾ ಪ್ರಕಾಶ್ 14 ಮತಗಳನ್ನುಪಡೆದು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಜೆ.ಡಿ.ಎಸ್ ಸದಸ್ಯರಾದ ಇಂದ್ರಾಣಿ ವಿಶ್ವನಾಥ್, ಪದ್ಮರಾಜು ಹಾಗೂ ಗಿರೀಶ್ ಕಾಂಗ್ರೆಸ್ ಅಭ್ಯರ್ಥಿ ಪರ ಕೈ ಎತ್ತುವ ಮೂಲಕ ಅಡ್ಡಮತದಾನ ಮಾಡಿದರು.ಬಿ.ಜೆ.ಪಿ ಸದಸ್ಯ ನಟರಾಜು, ಜೆ.ಡಿ.ಎಸ್ ಸದಸ್ಯರಾದ ಹೆಚ್.ಡಿ.ಅಶೋಕ್ ಮತ್ತು ಶೋಭಾದಿನೇಶ್ ಚುನಾವಣೆಗೆ ಗೈರು ಹಾಜರಾಗಿದ್ದರು.
ಜೆ.ಡಿ.ಎಸ್ ಅಭ್ಯರ್ಥಿ ಗಾಯತ್ರಿಸುಬ್ಬಣ್ಣ ಅವರ ಪರವಾಗಿ ಶುಭಾಗಿರೀಶ್, ಬಸ್,ಸಂತೋಷ್‌ಕುಮಾರ್, ಹೆಚ್.ಆರ್.ಲೋಕೇಶ್, ಮಹಾದೇವಿನಂಜುoಡ, ಕೆ.ಎಸ್.ಪ್ರಮೋದ್ ಮತ ಚಲಾಯಿಸಿದರು.ಮತದಾನದ ಹಕ್ಕನ್ನು ಹೊಂದಿದ್ದ ಶಾಸಕ ಹೆಚ್.ಟಿ.ಮಂಜು ಚುನಾವಣೆಯಿಂದ ದೂರ ಉಳಿದಿದ್ದರು.
ಕಾಂಗ್ರೇಸ್ ವಿಜಯೋತ್ಸವ:
ಕೆ.ಆರ್.ಪೇಟೆ ಪುರಸಭೆಯ ನೂತನ ಅಧ್ಯಕ್ಷೆಯಾಗಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರ ಸಹೋದರ ಕೆ.ಬಿ.ಪ್ರಕಾಶ್ ಅವರ ಧರ್ಮಪತ್ನಿ ಪಂಕಜಾ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಮುಖಂಡರು ವಿಜಯೋತ್ಸವ ಆಚರಿಸಿದರು.
ಮಂಡ್ಯ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಕೆ.ಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್, ಹರಳಹಳ್ಳಿ ವಿಶ್ವನಾಥ್, ತಾಲೂಕು ಕಾಂಗ್ರೆಸ್ ಉಸ್ತುವಾರಿ ಚಿನಕುರಳಿ ರಮೇಶ್, ತಾ.ಪಂ ಮಾಜಿ ಅಧ್ಯಕ್ಷ ಕೆ.ಬಿ.ಈಶ್ವರಪ್ರಸಾದ್, ಜಿ.ಪಂ.ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು ಮತ್ತಿತರರ ಕಾಂಗ್ರೆಸ್ ಮುಖಂಡರು ನೂತನ ಪುರಸಭಾ ಅಧ್ಯಕ್ಷೆಯನ್ನು ಅಭಿನಂದಿಸಿದರು.
ನೂತನ ಅಧ್ಯಕ್ಷೆ ಪಂಕಜಾ ಪ್ರಕಾಶ್ ಅವರನ್ನು ಅಭಿನಂದಿಸಿ ಮಾತನಾಡಿದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹೆಚ್ಚಿನ ಜವಾಬ್ದಾರಿ ಹೊರಬೇಕಾಗುತ್ತದೆ.ಅವಳಿ ಪಟ್ಟಣಗಳಾದ ಕೆ.ಆರ್.ಪೇಟೆ ಹಾಗೂ ಹೊಸಹೊಳಲು ಗ್ರಾಮಗಳನ್ನು ತಮ್ಮ ಕಣ್ಣುಗಳಂತೆ ಕಾಣಬೇಕು.ನೆನೆಗುದಿಗೆ ಬಿದ್ದಿರುವ ರಸ್ತೆ ಚರಂಡಿ ಕಾಮಗಾರಿಯನ್ನು ತೀವ್ರ ಆಸಕ್ತಿ ವಹಿಸಿ ಪೂರ್ಣಗೊಳಿಸಲು ಅಗತ್ಯವಾದ ಯೋಜನೆಯನ್ನು ರೂಪಿಸಿಕೊಂಡು ಕ್ಷೇತ್ರದ ಶಾಸಕರ ಸಲಹೆಯನ್ನು ಪಡೆಯಬೇಕು. ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಅವಳಿ ಪಟ್ಟಣಗಳ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿ ಶುಭ ಕೋರಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪಂಕಜಾಪ್ರಕಾಶ್ ಮಾತನಾಡಿ ನನ್ನ ಮೇಲೆ ವಿಶ್ವಾಸವನ್ನು ಇಟ್ಟು ದೊಡ್ಡ ಜವಾಬ್ದಾರಿಯನ್ನು ವಹಿಸಲು ಕಾರಣರಾದ ಮಾಜಿ ಶಾಸಕರಾದ ಕೆ ಬಿ ಚಂದ್ರಶೇಖರ್,ಬಿ ಎಲ್ ದೇವರಾಜು,ಪಕ್ಷದ ಎಲ್ಲಾ ಹಿರಿಯ ಕಿರಿಯ ಮುಖಂಡರು ಹಾಗೂ ನನ್ನ ಪುರಸಭಾ ಸಹಪಾಠಿಗಳಾದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಪ್ರತ್ಯೇಕ್ಷವಾಗಿ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.ಕೆ.ಆರ್.ಪೇಟೆ ಹಾಗೂ ಹೊಸಹೊಳಲು ವ್ಯಾಪ್ತಿಗೆ ಬರುವ ಎಲ್ಲಾ ಸಮಸ್ಯೆಗಳನ್ನು,ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
——————–ಶ್ರೀನಿವಾಸ್ ಕೆ ಆರ್ ಪೇಟೆ