ಕೆ.ಆರ್.ಪೇಟೆ-ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-ಸಾಹಿತಿಗಳೇ ಸಮ್ಮೇಳನದ ಅಧ್ಯಕ್ಷತೆ ವಹಿಸಬೇಕು-ಎಂ.ಕೆ. ಹರಿಚರಣತಿಲಕ್ ಆಗ್ರಹ

ಕೆ.ಆರ್.ಪೇಟೆ-ಡಿಸೆಂಬರ್ ತಿಂಗಳಲ್ಲಿ ಮಂಡ್ಯದಲ್ಲಿ ನಡೆಸುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನುಡಿ ಹಬ್ಬದಲ್ಲಿ ಸಾಹಿತಿಗಳೇ ಸಮ್ಮೇಳನದ ಅಧ್ಯಕ್ಷತೆ ವಹಿಸಿದರೆ ಸಮ್ಮೇಳನಕ್ಕೆ ಒಂದು ಗೌರವ ಹಾಗೂ ಅರ್ಥ ಬರುತ್ತದೆ ಎನ್ನುವುದು ನಾಡಿನ ಸಮಸ್ತ ಕನ್ನಡಿಗರ ಅಭಿಲಾಷೆಯಾಗಿದೆ.

ಯಾವುದೇ ಕಾರಣಕ್ಕೂ ಸಾಹಿತ್ಯೇತರರು ಅಧ್ಯಕ್ಷತೆ ವಹಿಸಬಾರದು. ಒಂದು ವೇಳೆ ವಹಿಸಿದರೆ ಮಂಡ್ಯದ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಕಪ್ಪು ಚುಕ್ಕೆಯಾಗಿ ಉಳಿಯಲಿದೆ ಎಂದು ನಿವೃತ್ತ ಉಪನ್ಯಾಸಕ ಎಂ.ಕೆ.ಹರಿಚರಣತಿಲಕ್ ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಕಾಪನಹಳ್ಳಿ ಗವಿಮಠ ಶ್ರೀಕ್ಷೇತ್ರದಲ್ಲಿರುವ ಶ್ರೀ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಮಹತ್ವಾಕಾಂಕ್ಷೆಯ 36ನೇ ವರ್ಷದ ಶಾಲೆಗೊಂದು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದರು.

ಕಡುನಾಡಿನಲ್ಲಿ ಸಾವಿರಾರು ಮಂದಿ ಶ್ರೇಷ್ಠ ಸಾಹಿತಿಗಳಿದ್ದಾರೆ. ಯಾರನ್ನಾದರೂ ಸರಿಯೇ ಹಿರಿಯ ಸಾಹಿತಿಯನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿಸಬೇಕು. ಈ ಮೂಲಕ ಸಾಹಿತ್ಯ ಪರಿಷತ್ತಿನ ಘನತೆಯನ್ನು ಉಳಿಸಬೇಕು ಎಂದು ಕಸಾಪ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾ ಸಮ್ಮೇಳನದ ಆಯೋಜಕರಿಗೆ ಸಲಹೆ ನೀಡಿದರು.

ವಿದ್ಯಾರ್ಥಿಗಳು ಹಾಗೂ ಯುವ ಜನರಿಗೆ ಕನ್ನಡ ನಾಡು ನುಡಿ, ಸಂಸ್ಕೃತಿ, ಪರಂಪರೆಯ ಬಗ್ಗೆ ಅರಿವಿನ ಜಾಗೃತಿ ಮೂಡಿಸಿ ಕನ್ನಡ ಅಭಿಮಾನವನ್ನು ತುಂಬುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಸಂಸ್ಥೆಯು ಶಾಲೆಗೊಂದು ಕಾರ್ಯಕ್ರಮದ ಮೂಲಕ ಕಳೆದ 36 ವರ್ಷಗಳಿಂದ ನಿರಂತರವಾಗಿ ಮುನ್ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸದರು.

ಮಹಾಭಾರತ ಮಹಾ ಕಾವ್ಯದಲ್ಲಿಯೇ ಕರ್ನಾಟಕ ಹಾಗೂ ಮಹಿಷ ಮಂಡಲದ ಹೆಸರು ಉಲ್ಲೇಖವಾಗಿದ್ದು ಕನ್ನಡ ಭಾಷೆಗೆ ಎರಡೂವರೆ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಮೂವತ್ತು ವರ್ಷಗಳ ನಂತರ ಮಂಡ್ಯ ನಗರದಲ್ಲಿ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಸಂದರ್ಭದಲ್ಲಿ ಶಾಲೆಗೊಂದು ಕಾರ್ಯಕ್ರಮ ನಡೆಯುತ್ತಿರುವುದರಿಂದ ಸಾಹಿತ್ಯ ಸಮ್ಮೇಳನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಡಾ.ಕೆ.ಕಾಳೇಗೌಡ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪುಸ್ತಕ ಪ್ರೇಮ ಹಾಗೂ ನಮ್ಮ ನೆಲದ ಸಂಸ್ಕೃತಿ ಪರಂಪರೆಯ ಬಗ್ಗೆ ಅಭಿಮಾನ ತುಂಬುವ ಕೆಲಸವನ್ನು ಬದ್ಧತೆಯಿಂದ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರಿಗೆ ಕನ್ನಡ ನೆಲ ಜಲ ಹಾಗೂ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಜೊತೆಗೆ ಕನ್ನಡಿಗರಿಗೆ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸಿ ಎಚ್ಚರಿಸುವ ಕೆಲಸವನ್ನು ಪ್ರೀತಿಯಿಂದ ಮಾಡುತ್ತಿದೆ. ಕನ್ನಡಿಗರಾದ ನಾವು ಕನ್ನಡದ ನೆಲದಲ್ಲಿ ವಾಸಮಾಡುತ್ತಿರುವ ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸಿಕೊಡುವ ಕೆಲಸವನ್ನು ಅಭಿಮಾನದಿಂದ ಮಾಡಬೇಕು, ಕನ್ನಡಿಗರು ನಾವೆನ್ನಲು ಹೆಮ್ಮೆ ಪಡಬೇಕು ಎಂದು ಹೇಳಿದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸಿ.ಎನ್.ಯತೀಶ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ನಮ್ಮ ತಾಯಿ ಭಾಷೆ ಹಾಗೂ ಮಾತೃ ಭಾಷೆಯಾದ ಕನ್ನಡದಲ್ಲಿ ಮಾತನಾಡಿದರೆ ನಮ್ಮ ಮನಸಿನ ಭಾವನೆಗಳನ್ನು ಸುಲಭವಾಗಿ ವ್ಯಕ್ತಪಡಿಸಲು ಸಂವಹನ ಮಾಡಲು ಸಾಧ್ಯವಿದೆ. ಆದ್ದರಿಂದ ಆಂಗ್ಲ ಭಾಷೆಯನ್ನು ಕೇವಲ ಒಂದು ಸಂವಹನ ಭಾಷೆಯಾಗಿ ಕಲಿಯಬೇಕು. ಆದರೆ ಕನ್ನಡ ಭಾಷೆಯನ್ನು ಪ್ರೀತಿಸಿ ಆರಾಧಿಸಬೇಕು ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಎಂ.ಕುಪ್ಪಳ್ಳಿ ಪ್ರಸನ್ನಕುಮಾರ್ ವಹಿಸಿದ್ದರು.

ತಹಶೀಲ್ದಾರ್ ಅಶೋಕ್‌ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸಿ.ಎನ್.ಯತೀಶ್ ನಿವೃತ್ತ ಪ್ರಾಂಶುಪಾಲ ಡಾ.ಕೆ.ಕಾಳೇಗೌಡ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಕಸಾಪ ಮಾಜಿ ಅಧ್ಯಕ್ಷರಾದ ಕೆ.ಕಾಳೇಗೌಡ, ಕೆ.ಆರ್.ನೀಲಕಂಠ, ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ.ಬಸವರಾಜು, ಭಾರತ ಸೇವಾ ದಳದ ತಾಲೂಕು ಘಟಕದ ಅಧ್ಯಕ್ಷ ನಾಡಬೋಗನಹಳ್ಳಿ ಚಂದ್ರಪ್ಪ, ತಾಲೂಕು ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಯೋಗೇಶ್, ಸವಿತಾ ರಮೇಶ್ ಸೇರಿದಂತೆ ನೂರಾರು ಮಂದಿ ಕನ್ನಡ ಪ್ರೇಮಿಗಳು, ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಅತಿಥಿಗಳು ಹಾಗೂ ಗಣ್ಯರ ಮೆಚ್ಚುಗೆಗೆ ಪಾತ್ರವಾದವು, ವಿದ್ಯಾರ್ಥಿಗಳ ಕವಿತಾ ವಾಚನ ಗಮನ ಸೆಳೆಯಿತು.

——————-ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?