ಕೆ.ಆರ್.ಪೇಟೆ-ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಸಿದರೆ ಸಾಕು ಭಾಷೆಯ ಅಭಿವೃದ್ದಿಯಾಗುತ್ತದೆ-ಸಮಾಜ ಸೇವಕ ಬಿ.ಎಂ.ಕಿರಣ್

ಕೆ.ಆರ್.ಪೇಟೆ-ಕೇವಲ ನವೆಂಬರ್ ಕನ್ನಡಿಗರಾಗದೇ ನಾವು ನಿತ್ಯ ಕನ್ನಡಿಗರಾಗಬೇಕು. ಕನ್ನಡ ರಾಜ್ಯೋತ್ಸವವನ್ನು ವರ್ಷದ 365ದಿನಗಳು ಆಚರಿಸಬೇಕು,ಆರಾಧಿಸಬೇಕು ಎಂದು ಸಮಾಜ ಸೇವಕರು ಹಾಗೂ ಮಂಡ್ಯ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್ ಅವರು ಅಭಿಪ್ರಾಯಪಟ್ಟರು.

ಅವರು ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್ ಶಾಲೆ) ಆವರಣದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಜನಸೇವಾ ಸಮಿತಿ ಯುವ ಘಟಕ ಮಂಡ್ಯ ಜಿಲ್ಲಾ ಘಟಕ ಹಾಗೂ ಕಿಕ್ಕೇರಿಯ ನಾಟ್ಯ ಸ್ಕೂಲ್ ಆಫ್ ಡ್ಯಾನ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ಸಂಭ್ರಮ-2024ಅನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ ಜೈ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕನ್ನಡ ನಾಡು ನುಡಿಯ ಬಗ್ಗೆ ದಾಸ ಸಾಹಿತ್ಯ, ವಚನ ಸಾಹಿತ್ಯ, ಕೀರ್ತನಗಳು ಮತ್ತು ಜಾನಪದ ಸಾಹಿತ್ಯ ಈ ಮಣ್ಣಿನ,ನಾಡಿನ ಸೊಬಗನ್ನು ಸಾರಿವೆ. ಕನ್ನಡ ನಾಡನ್ನು ಗಂಗರು, ಕದಂಬರು, ರಾಷ್ಟ್ರಕೂಟರು, ಪಾಳೇಗಾರರು ಆಳ್ವಿಕೆ ಮಾಡಿದ ಇತಿಹಾಸವಿದೆ. ಆದುದರಿಂದ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಬಿ.ಎಂ.ಕಿರಣ್ ತಿಳಿಸಿದರು.

ಬೆಡದಹಳ್ಳಿ ಶ್ರೀ ಪಂಚಭೂತೇಶ್ವರ ಮಠದ ಪೀಠಾಧಿಪತಿ ಶ್ರೀ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ನಾಡು,ನುಡಿ,ಸಂಸ್ಕೃತಿಯನ್ನು ಎಲ್ಲರೂ ಸೇರಿ ಉಳಿಸಬೇಕಿದೆ. ನಮ್ಮ ನಾಡಿನ ಪರಂಪರೆ, ಸಾಹಿತ್ಯ, ಆಚಾರ-ವಿಚಾರಗಳನ್ನು ಮುಂದಿನ ತಲೆಮಾರಿಗೆ ಉಳಿಸಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿಯಾಗಿದ್ದು ಅದನ್ನು ಅರಿತು ಕನ್ನಡ ಭಾಷೆಯನ್ನು ಉಳಿಸುವ ಅವಶ್ಯಕತೆಯಿದೆ ಎಂದರು.

ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕನ್ನಡ ಭಾಷೆಗೆ,ಎರಡೂವರೆ ಸಾವಿರ ವರ್ಷಗಳ ಭವ್ಯವಾದ ಇತಿಹಾಸವಿದೇ. ನಮ್ಮ ಕನ್ನಡ ಭಾಷೆ ಶ್ರೀಮಂತ ಹಾಗೂ ಸುಂದರ ಸಮೃದ್ಧವಾದ ಭಾಷೆಯಾಗಿದೆ.ಕನ್ನಡ ಭಾಷೆಯ ಮೂಲಕವೇ ಪ್ರತಿಯೊಬ್ಬರು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ವರೆವಿಗೂ ಅಭ್ಯಾಸವನ್ನು ಮಾಡಿ ಜ್ಞಾನ ಸಂಪನ್ನರಾಗುತ್ತಿದ್ದರು ಆದುದರಿಂದ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಪರಭಾಷಿಕರಿಗೂ ಕಲಿಸಬೇಕೆಂದು ತಿಳಿಸಿದರು.

ಸಮಾಜಸೇವಕ ಮೊಟ್ಟೆ ಮಂಜು ಮಾತನಾಡಿ, ಕನ್ನಡಿಗರಿಗೆ ಕೇವಲ ನವಂಬರ್ ತಿಂಗಳಲ್ಲಿ ಭಾಷೆ,ನಾಡು, ನುಡಿಯ ಬಗ್ಗೆ ಅಭಿಮಾನ ಮೂಡದೇ ಪ್ರತಿದಿನವೂ ಕನ್ನಡವನ್ನು ಪ್ರೀತಿಸುವಂತಹ ಗುಣವನ್ನು ಬೆಳೆಸಿಕೊಳ್ಳಬೇಕಿದೆ.ಇತರ ಭಾಷಿಕರಿಗೆ ಹೋಲಿಸಿದರೆ ಕನ್ನಡಿಗರಿಗೆ ಕನ್ನಡ ಭಾಷೆಯ ಮೇಲಿನ ಅಭಿಮಾನ ಕಡಿಮೆ.ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದ್ದು,ಕನ್ನಡ ಸಾಹಿತ್ಯಲೋಕ ಸಮೃದ್ಧವಾಗಿದೆ. ಕನ್ನಡದ ಭಾಷೆ,ನೆಲಕ್ಕೆ ಹೊರ ರಾಜ್ಯದ ಜನರ ಪ್ರಭಾವ,ಕನ್ನಡ ಭಾಷೆಗೆ ಇತರ ಭಾಷೆಯಿಂದ ದಾಳಿ ಮುಂದುವರೆದಿದ್ದು ಆದುದರಿಂದ ನಮ್ಮ ಭಾಷೆಯನ್ನು ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡೋಣವೆಂದು ತಿಳಿಸಿದರು.

ಗ್ರಾಮ ಪಂಚಾಯತಿ ಸದಸ್ಯರಾದ ಅಗ್ರಹಾರಬಾಚಹಳ್ಳಿ ಆರ್.ಶ್ರೀನಿವಾಸ್ ಮಾತನಾಡಿ, ಶಿಕ್ಷಣ ವ್ಯವಸ್ಥೆ ಬದಲಾದಂತೆ ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಯಾವುದೇ ಮಾಧ್ಯಮದಲ್ಲಿ ಓದಿದರೂ ಕನ್ನಡ ಭಾಷೆಯನ್ನು ಮರೆಯಬಾರದು. ಕನ್ನಡ ಅನ್ನದ ಭಾಷೆಯಾಗಬೇಕು.ನಾಗರಿಕತೆ ಹೆಚ್ಚಾದಂತೆ ಉದ್ಯೋಗ ಆಧಾರಿತವಾದ ಅಂಗ್ಲ ಭಾಷಾ ವ್ಯಾಮೋಹ, ಕಾನ್ವೆಂಟ್ ವ್ಯಾಮೋಹ ದಟ್ಟ ಪ್ರಭಾವದಲ್ಲಿ ಕನ್ನಡ ಭಾಷೆ ಮಂಕಾಗುತ್ತಾ ಬಂದಿದೆ. ಇದಕ್ಕೆ ಕನ್ನಡಿಗರು ಅವಕಾಶ ನೀಡದೇ ಪರಭಾಷಾ ವ್ಯಾಮೋಹವನ್ನು ದೂರ ಮಾಡಿ ಕನ್ನಡ ಭಾಷೆಯನ್ನು ಉಳಿಸಲು ಕೈಜೋಡಿಸಬೇಕು ಎಂದು ಮನವಿ ಮಾಡದರು.

ಕಾರ್ಯಕ್ರಮ ನಿಮಿತ್ತ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಭಿರ ಏರ್ಪಡಿಸಲಾಗಿತ್ತು .ಸುಮಾರು 4000ಕ್ಕೂ ಹೆಚ್ಚು ನಾಗರೀಕರು ಇದರ ಸದುಪಯೋಗವನ್ನು ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಪಂಕಜಪ್ರಕಾಶ್, ಜೀ ಕನ್ನಡ ಕಾಮಿಡಿ ಖಿಲಾಡಿಗಳು ಖ್ಯಾತಿಯ ಗಿಲ್ಲಿನಟ, ವಾಣಿಗೌಡ ಜಯಕರ್ನಾಟಕ ತಾಲ್ಲೋಕು ಅಧ್ಯಕ್ಷರಾದ ಹೆಚ್.ಆರ್.ಸೋಮಶೇಖರ್, ಕಾರ್ಯಾಧ್ಯಕ್ಷ ಅನುವಿನಕಟ್ಟೆ ಆನಂದ್, ತಾಲ್ಲೂಕು ಅಪ್ಪು ಬ್ರೀಗೇಡ್ ಅಧ್ಯಕ್ಷ ಕೆ.ಎಲ್.ಮಹೇಶ್, ಕರ್ನಾಟಕ ಮಾನಹ ಹಕ್ಕುಗಳ ಜಿಲ್ಲಾಧ್ಯಕ್ಷ ಪೃಥ್ವಿರಾಜ್, ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಕೆ.ಎಲ್ ಪ್ರಸನ್ನಕುಮಾರ್, ಕರ್ನಾಟಕ ರಕ್ಷಣಾ ಸೇನೆ ತಾಲ್ಲೋಕು ಅಧ್ಯಕ್ಷ ಪ್ರಶಾಂತ್‌ಗೌಡ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಸುಮಾರು 4ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿ ಕನ್ನಡ ಹಬ್ಬ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

———-ಶ್ರೀನಿವಾಸ್ ಆರ್

Leave a Reply

Your email address will not be published. Required fields are marked *

× How can I help you?