ಕೆ.ಆರ್.ಪೇಟೆ-ಮಾನವರಾದ ನಾವು ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಮಧ್ಯದಲ್ಲಿಯೇ ಜೀವನ ನಡೆಸಬೇಕಾಗಿದೆ ಹಾಗಾಗಿ ಕಾನೂನನ್ನು ಗೌರವಿಸಿ, ಕನಿಷ್ಠ ಕಾನೂನಿನ ಬಗ್ಗೆ ಅರಿವು ಮೂಡಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದು ಕೆ.ಆರ್.ಪೇಟೆ ಪಟ್ಟಣದ ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಸುಧೀರ್ ಮನವಿ ಮಾಡಿದರು.
ಅವರು ಕೃಷ್ಣರಾಜಪೇಟೆ ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ರಾಷ್ಟ್ರೀಯ ಕಾನೂನು ದಿನದ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ನೇತೃತ್ವದಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಹಾಗೂ ಯುವಜನರು ವಿದ್ಯಾರ್ಜನೆಯ ಜೊತೆಗೆ ಲೋಕಜ್ಞಾನ ಮತ್ತು ಕಾನೂನು ಅರಿವನ್ನು ತಿಳಿದುಕೊಂಡು ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು. ತಿಳಿದೋ ತಿಳಿಯದೆಯೋ ಮಾಡುವ ತಪ್ಪು ಶಿಕ್ಷಾರ್ಹ ಅಪರಾಧವಾಗುವುದರಿಂದ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಂತೆಯೇ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲವಾದ್ದರಿಂದ ಕಾನೂನನ್ನು ಗೌರವಿಸಿ ವ್ಯಾಜ್ಯಗಳಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಸುಧೀರ್ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯಶ್ರೇಣಿ ಅಪರ ಸಿವಿಲ್ ನ್ಯಾಯಾಧೀಶರಾದ ದೇವರಾಜ್ ಮಾತನಾಡಿ, ವಿದ್ಯಾರ್ಥಿಗಳು ಪ್ರಶ್ನೆಮಾಡುವ ಮನೋಭಾವನೆ ಬೆಳೆಸಿಕೊಂಡು ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಗುರಿಸಾಧನೆ ಮಾಡಬೇಕು,ವಿಧ್ಯೆಯ ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲವಾದ್ದರಿಂದ ಕೈ ಕೆಸರಾದರೆ ಬಾಯಿ ಮೊಸರು ಎಂಬ ಸತ್ಯ ಅರಿತು, ಮೊಬೈಲ್ ಫೋನಿನಿಂದ ದೂರವಿದ್ದು ತಲೆ ತಗ್ಗಿಸಿ ಪುಸ್ತಕವನ್ನು ಓದಿದರೆ ಸಾಕು, ಪುಸ್ತಕದ ಜ್ಞಾನವು ನಮ್ಮನ್ನು ತಲೆ ಎತ್ತಿ ಜೀವನ ನಡೆಸುವಂತೆ ನಮ್ಮ ಕೈಹಿಡಿದು ದಾರಿ ತೋರಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ವ್ಯರ್ಥವಾಗಿ ಕಾಲಹರಣ ಮಾಡದೇ ನಿಮ್ಮ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿ ಮುಗಿಸುವ ಮೂಲಕ ತಂದೆ ತಾಯಿಗಳು ಹಾಗೂ ಗುರು ಹಿರಿಯರಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ ಬಿಜಿಎಸ್ ಶಾಲೆಯ ಶಿಕ್ಷಕ ಗುರುಲಿಂಗೇಗೌಡ ಮಾತನಾಡಿ, ವಿದ್ಯಾರ್ಥಿ ಗಳು ಸಂವಿಧಾನ ಹಾಗೂ ಕಾನೂನು ಪುಸ್ತಕಗಳ ಬಗ್ಗೆ ಅರಿವು ಮೂಡಿಸಿಕೊಂಡು ಸಮಾಜದಲ್ಲಿ ನೊಂದವರು ಹಾಗೂ ತುಳಿತಕ್ಕೊಳಗಾದ ಬಡ ಜನರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಮುಂದಾಗಬೇಕು. ಕಾನೂನಿನ ಬಗ್ಗೆ ಅರಿವಿಲ್ಲದ ಬಡ ಜನರು ಕಾನೂನು ಸೇವಾ ಸಮಿತಿಯ ಮೂಲಕ ನ್ಯಾಯವನ್ನು ಪಡೆದು ಕೊಳ್ಳುವಂತೆ ಜಾಗೃತಿ ಮೂಡಿಸಿ ಗಲಾಟೆ ಗದ್ದಲಗಳು ಹಾಗೂ ವ್ಯಾಜ್ಯಗಳಿಂದ ಮುಕ್ತವಾದ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ನೋಟರಿ ಎನ್.ಆರ್.ರವಿಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಪರ ಸಿವಿಲ್ ನ್ಯಾಯಾಧಿಶರಾದ ಆರ್.ಶಕುಂತಲಾ, ವಕೀಲರ ಸಂಘದ ಕಾರ್ಯದರ್ಶಿ ಆರ್.ಕೆ. ರಾಜೇಗೌಡ, ಕೆಪಿಎಸ್ ಶಾಲೆಯ ಮುಖ್ಯ ಶಿಕ್ಷಕ ತಿಮ್ಮೇಗೌಡ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಪ್ರಭುಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕಾನೂನು ಅರಿವು ಕಾರ್ಯಕ್ರಮದ ನಂತರ ನ್ಯಾಯಾಧಿಶರೊಂದಿಗೆ ಸಂವಾದ ನಡೆಸಿ ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡರು.
—————ಶ್ರೀನಿವಾಸ್ ಕೆ ರ್ ಪೇಟೆ