ಕೆ.ಆರ್.ಪೇಟೆ: ತಾಲ್ಲೂಕಿನ ಕಾಪನಹಳ್ಳಿ ಗವೀಮಠ ಶ್ರೀ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2024-25ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಸಮಾರಂಭವನ್ನು ತುಮಕೂರು ನಗರಾಭಿವೃದ್ದಿ ಪ್ರಾಧಿಕಾರದ ಕಮೀಷನರ್ ಜಿ.ಆರ್.ನಟರಾಜ್ ಗಂಜಿಗೆರೆ ಅವರು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಎಂಬ ಗಾದೆ ಮಾತು ಅಕ್ಷರಶಃ ಸತ್ಯವಾದ ಮಾತಾಗಿದೆ. ನಾವು ಒಂದರಿಂದ ಡಿಗ್ರಿವರೆವಿಗೂ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿಯೇ ಓದಿದ್ದೇನೆ.
ನಮ್ಮ ಕಾಲದಲ್ಲಿ ಈಗಿನಂತೆ ವಸತಿ ಶಾಲೆಗಳಿರಲಿಲ್ಲ. ಹಾಸ್ಟೆಲ್ ವ್ಯವಸ್ಥೆಗಳಿರಲಿಲ್ಲ. ಬಸ್ ಸೌಲಭ್ಯಗಳಿರಲಿಲ್ಲ. ಮನೆಯಲ್ಲಿ ಓದಿಸುವಷ್ಟು ನಮ್ಮ ಪೋಷಕರು ಶಕ್ತರಾಗಿರಲಿಲ್ಲ. ಆದರೆ ನಮ್ಮಲ್ಲಿದ್ದ ಶಿಕ್ಷಣದ ಮೇಲಿನ ಆಸಕ್ತಿಯಿಂದ ಕಷ್ಟಪಟ್ಟು ಉತ್ತಮ ಸ್ನೇಹಿತರ ಸಹವಾಸದಿಂದ ಮಧ್ಯರಾತ್ರಿವರೆಗೆ ಓದಿ ಉನ್ನತ ಶಿಕ್ಷಣ ಪಡೆದುಕೊಂಡು ಅಪರ ಜಿಲ್ಲಾಧಿಕಾರಿ ಹುದ್ದೆಗೆ ಸರಿಸಮನಾದ ಹುದ್ದೆಯನ್ನು ಅಲಂಕರಿಸಿದ್ದೇನೆ.
ನಮ್ಮ ಸ್ನೇಹಿತರು ಓದಿನಲ್ಲಿ ಪರಸ್ಪರ ಪೈಪೋಟಿ ನಡೆಸುವಂತಹ ಸ್ನೇಹಿತರು ಒಂದೇ ಬಾಡಿಗೆ ರೂಂನಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದೆವು. ನಾನು ಮಧ್ಯರಾತ್ರಿ ವರೆಗೆ ಓದಿದರೆ, ಇನ್ನೊಬ್ಬ ಸ್ನೇಹಿತರು ಮಧ್ಯರಾತ್ರಿಯಿಂದ ಬೆಳಗಿನ ಜಾವದವೆಗೆ ಓದುತ್ತಿದ್ದರು. ಹೀಗೆ ಓದುವುದರಿಂದ ಪೈಪೋಟಿ ನಡೆಸುತ್ತಿದ್ದೆವು.

ಇದರಿಂದಾಗಿ ಒಂದೇ ರೂಮ್‌ನಲ್ಲಿ ಓದುತ್ತಿದ್ದ ನಾವುಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉತ್ತಮ ಅಂಕಗಳನ್ನು ಪಡೆದು ಐದು ಹುದ್ದೆಗಳನ್ನು ಗಿಟ್ಟಿಸಿದ್ದೇವೆ. ಇದೇ ವೇದಿಕೆಯಲ್ಲಿ ಇರುವ ಡಿಗ್ರಿ ಕಾಲೇಜಿನ ಮಂಜುನಾಥ್ ಸಹ ಐದು ಹುದ್ದೆಗಳಲ್ಲಿ ಪಡೆದುಕೊಂಡಿದ್ದಾರೆ. ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಅವರು ಸಹ ನಾಲ್ಕು ಸರ್ಕಾರಿ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಹೀಗೆ ನಿಮ್ಮಲ್ಲಿ ಓದಿನಲ್ಲಿ ಪೈಪೋಟಿ ಬೆಳೆಯಬೇಕು.
ಉನ್ನತ ಶಿಕ್ಷಣ ಹಾಗೂ ಸರ್ಕಾರಿ ಹುದ್ದೆ ಪಡೆದುಕೊಳ್ಳುವಲ್ಲಿ ಪೈಪೋಟಿ ನಡೆಸಿ ಸಾಧನೆ ಮಾಡಬೇಕು. ನಿಮ್ಮ ತಾಲ್ಲೂಕಿನ ಸಾಮಾನ್ಯ ರೈತನ ಮಕ್ಕಳಾದ ನಾವುಗಳು ಅವಕಾಶಗಳು ಕಡಿಮೆ ಇರುವಂತಹ ಸಂದರ್ಭದಲ್ಲಿಯೇ ಇಷ್ಟೊಂದು ಸಾಧನೆ ಮಾಡಿದ್ದೇವೆ. ಆದರೆ ನಿಮಗೆ ಈಗ ಸಾಕಷ್ಟು ವಿಫುಲ ಅವಕಾಶಗಳಿಗೆ, ಪೋಷಕರಿಂದ ಉತ್ತಮ ಪ್ರೋತ್ಸಾ ಇದೆ.

ಆರ್.ಟಿ.ಓ ಮಲ್ಲಿಕಾರ್ಜುನ್ ಅವರಂತಹ ಸಮಾಜ ಸೇವಕರಿಂದ ವಿದ್ಯಾಭ್ಯಾಸಕ್ಕೆ ನೆರವು ಸಿಗುತ್ತಿದೆ ಇದನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಅಂಕಗಳೊಂದಿಗೆ ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು. ಈಗಿನ ನಿಮ್ಮ ಶಿಕ್ಷಣ ಹೇಗಿರಬೇಕು ಅಂದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದುಕೊಂಡು ಸರ್ಕಾರಿ ಹುದ್ದೆ ಗಿಟ್ಟಿಸುವಂತಿರಬೇಕು ಎಂದು ಜಿ.ಆರ್.ನಟರಾಜ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶಾಸಕ ಹೆಚ್.ಟಿ.ಮಂಜು ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸನ್ಮಾನಿಸಿದರು. ಸಮಾಜ ಸೇವಕ ಆರ್.ಟಿ.ಓ. ಮಲ್ಲಿಕಾರ್ಜುನ್ ಅವರು ಕಳೆದ ಸಾಲಿನಲ್ಲಿ ಶೇ.100ರಷ್ಟು ಫಲಿತಾಂಶಕ್ಕೆ ಶ್ರಮಿಸಿದ ಎಲ್ಲಾ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು.
ಗವಿಮಠ ಸ್ವತಂತ್ರ ಸಿದ್ದಲಿಂಗೇಶ್ವರ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಸ್ವತಂತ್ರ ಚನ್ನವೀರ ಸ್ವಾಮೀಜಿ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿದ್ದರು. ಪ್ರಾಂಶುಪಾಲ ಕೆ.ಎಂ.ಪ್ರಸನ್ನಕುಮಾರ್ ಪ್ರಾಸ್ತಾವಿಕ ನುಡಿಗಳನ್ನಡಿದರು. ಉಪನ್ಯಾಸಕ ಡಿ.ಜಿ.ಮಂಜುನಾಥ್, ಎಸ್.ಆರ್.ಶ್ರೀನಿವಾಸ್, ಮಂಡ್ಯ ಜಿಲ್ಲಾ ಕ್ರೈಸ್ ಸಮನ್ವಯಾಧಿಕಾರಿ ಬಿ.ಎಂ.ಅಭಿಲಾಷ್, ಮೈಸೂರು ಜಿಲ್ಲಾ ಕ್ರೈಸ್ ಸಮನಯ್ವಾಧಿಕಾರಿ ಲೋಕೇಶ್, ಮಡಿಕೇರಿ ಜಿಲ್ಲಾ ಕ್ರೈಸ್ ಸಮನ್ವಯಾಧಿಕಾರಿ ಚಂದ್ರಶೇಖರ್‌ರೆಡ್ಡಿ, ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಶಾಲೆಯ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- ಶ್ರೀನಿವಾಸ್ ಎನ್.